ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಪೋಕ್ಸೊ ಪ್ರಕರಣದಲ್ಲಿ ಬಂಧಿತರಾಗಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಕೋರಿರುವ ಜಾಮೀನು ಮನವಿಯನ್ನು ಚಿತ್ರದುರ್ಗದ ವಿಶೇಷ ನ್ಯಾಯಾಲಯವು ಮಂಗಳವಾರ ತಿರಸ್ಕರಿಸಿದೆ.
ತನಿಖಾಧಿಕಾರಿಯು ಈಗಾಗಲೇ ಆರೋಪ ಪಟ್ಟಿ ಸಲ್ಲಿಸಿರುವುದರಿಂದ ಜಾಮೀನು ಮಂಜೂರು ಮಾಡಬೇಕು ಎಂದು ಮುರುಘಾ ಶರಣರ ಪರವಾಗಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಶೇಷ ನ್ಯಾಯಾಧೀಶರಾದ ಬಿ ಕೆ ಕೋಮಲಾ ಅವರು ಇಂದು ತಿರಸ್ಕರಿಸಿದ್ದಾರೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಸರ್ಕಾರಿ ಅಭಿಯೋಜಕರಾದ ಕೆ ಬಿ ನಾಗವೇಣಿ ಅವರು “ಅರ್ಜಿದಾರರು ಪ್ರಭಾವಿಯಾಗಿದ್ದು, ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಇನ್ನಷ್ಟೇ ಸಾಕ್ಷಿಗಳ ವಿಚಾರಣೆ ನಡೆಯಬೇಕಿದೆ. ಈ ಹಂತದಲ್ಲಿ ಜಾಮೀನು ನೀಡಬಾರದು” ಎಂದು ವಾದಿಸಿದ್ದರು. ಇದನ್ನು ನ್ಯಾಯಾಲಯವು ಮಾನ್ಯ ಮಾಡಿದೆ.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಕೆ ಎನ್ ವಿಶ್ವನಾಥಯ್ಯ ಅವರು “ಅರ್ಜಿದಾರರ ವಿರುದ್ಧ ಯಾವುದೇ ಗುರುತರ ಆರೋಪಗಳು ಇಲ್ಲ. ಸಂಚು ನಡೆಸಿ ಅವರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಮುಗ್ಧರಾದ ಅರ್ಜಿದಾರರಿಗೆ ಜಾಮೀನು ಮಂಜೂರು ಮಾಡಬೇಕು” ಎಂದು ಕೋರಿದ್ದರು.
ಈ ಹಿಂದೆಯೂ ವಿಚಾರಣಾಧೀನ ನ್ಯಾಯಾಲಯವು ಸ್ವಾಮೀಜಿ ಸೇರಿದಂತೆ ಪ್ರಕರಣದ ಐವರೂ ಆರೋಪಿಗಳಿಗೆ ಜಾಮೀನು ನೀಡಲು ನಿರಾಕರಿಸಿದ್ದನ್ನು ಇಲ್ಲಿ ನೆನೆಯಬಹುದಾಗಿದೆ. ಆನಂತರ ಮುರುಘಾ ಶರಣರು ಹೈಕೋರ್ಟ್‌ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಹಂತದಲ್ಲಿ ತನಿಖಾಧಿಕಾರಿಯು ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರಿಂದ ಅಲ್ಲಿಯೇ ಜಾಮೀನು ಮನವಿ ಸಲ್ಲಿಸುವುದಾಗಿ ಹೇಳಿ, ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ಹಿಂಪಡೆದಿದ್ದರು.
ಮರುಘಾ ಶರಣರ ವಿರುದ್ಧ ಆಗಸ್ಟ್ 26ರಂದು ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆ ಸೆಕ್ಷನ್‌ಗಳಾದ 17, 5(ಎಲ್), 6 ಮತ್ತು ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 376(2)(ಎನ್), 376(3), 149 ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣವನ್ನು ಚಿತ್ರದುರ್ಗ ಗ್ರಾಮೀಣ ಠಾಣೆಗೆ ವರ್ಗಾಯಿಸಲಾಗಿದೆ. ಅಲ್ಲದೇ, ಅಲ್ಲಿ ಪೋಕ್ಸೊ ಕಾಯಿದೆ ಸೆಕ್ಷನ್‌ಗಳಾದ 17, 5(ಎಲ್), 6, ಐಪಿಸಿ ಸೆಕ್ಷನ್‌ಗಳಾದ 376(2)(ಎನ್), 376(3), 149 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ನಿರ್ಮೂಲನೆ) ಕಾಯಿದೆ ಸೆಕ್ಷನ್‌ಗಳಾದ 3(1) (ಡಬ್ಲ್ಯು) (1)(2), 3(2) (V) ಅಡಿ ಪ್ರಕರಣ ದಾಖಲಿಸಲಾಗಿದೆ. ಇದರ ಬೆನ್ನಿಗೇ, ಮತ್ತೊಂದು ಪ್ರಕರಣ ದಾಖಲಾಗಿದೆ. 2022ರ ಸೆಪ್ಟೆಂಬರ್ 1ರಿಂದ ಮುರುಘಾ ಶರಣರು ನ್ಯಾಯಾಂಗ ಬಂಧನದಲ್ಲಿದ್ದಾರೆ.