Murugha Sharanaru and Chitradurga court
Murugha Sharanaru and Chitradurga court 
ಸುದ್ದಿಗಳು

ಪೋಕ್ಸೊ ಪ್ರಕರಣ: ಶಿವಮೂರ್ತಿ ಮುರುಘಾ ಶರಣರ ಜಾಮೀನು ಅರ್ಜಿ ತಿರಸ್ಕರಿಸಿದ ವಿಶೇಷ ನ್ಯಾಯಾಲಯ

Bar & Bench

ವಿದ್ಯಾರ್ಥಿನಿಯರಿಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೋಕ್ಸೊ ಪ್ರಕರಣದ ಅಡಿ ಬಂಧಿತರಾಗಿರುವ ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರ ಜಾಮೀನು ಅರ್ಜಿಯನ್ನು ವಿಶೇಷ ನ್ಯಾಯಾಲಯವು ಗುರುವಾರ ವಜಾ ಮಾಡಿದೆ. ಇದರೊಂದಿಗೆ ಎರಡನೇ ಪ್ರಕರಣದಲ್ಲೂ ಮುರುಘಾ ಶರಣರಿಗೆ ವಿಚಾರಣಾಧೀನ ನ್ಯಾಯಾಲಯವು ಜಾಮೀನು ತಿರಸ್ಕರಿಸಿದಂತಾಗಿದೆ.

ಜಾಮೀನು ಕೋರಿ ಮುರುಘಾ ಶರಣರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ, ನವೆಂಬರ್‌ 28ರಂದು ಕಾಯ್ದಿರಿಸಿದ್ದ ಆದೇಶವನ್ನು ವಿಶೇಷ ನ್ಯಾಯಾಧೀಶರಾದ ಬಿ ಕೆ ಕೋಮಲಾ ಅವರು ಇಂದು ಪ್ರಕಟಿಸಿದರು.

ಮೈಸೂರಿನ ನಜರಾಬಾದ್‌ ಠಾಣೆಗೆ ಅಕ್ಟೋಬರ್‌ನಲ್ಲಿ ಇಬ್ಬರು ಬಾಲಕಿಯರು ಅವರ ತಾಯಿ, ಮುರುಘಾ ಶರಣರು ಸೇರಿದಂತೆ ಏಳು ಮಂದಿಯ ವಿರುದ್ಧ ದೂರು ನೀಡಿದ್ದರು. ಇದನ್ನು ಆಧರಿಸಿ ಪೊಲೀಸರು ಐಪಿಸಿ ಸೆಕ್ಷನ್‌ಗಳಾದ 376(2) (ಎನ್‌), 376(3) ಮತ್ತು ಪೋಕ್ಸೊ ಕಾಯಿದೆ ಸೆಕ್ಷನ್‌ಗಳಾದ 4,5ಎಲ್‌, 6, 8 ಅಡಿ ಮುರುಘಾ ಶರಣರು, ಹಾಸ್ಟೆಲ್ ವಾರ್ಡನ್ ರಶ್ಮಿ, ಬಸವಾದಿತ್ಯ, ಪರಮಶಿವಯ್ಯ, ಗಂಗಾಧರ, ಮಹಾಲಿಂಗ ಮತ್ತು ಕರಿಬಸಪ್ಪ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು. ಆನಂತರ ಪ್ರಕರಣವನ್ನು ಚಿತ್ರದುರ್ಗದ ಗ್ರಾಮೀಣ ಠಾಣೆಗೆ ವರ್ಗಾಯಿಸಲಾಗಿತ್ತು.

ಸದರಿ ಪ್ರಕರಣದಲ್ಲಿ ಜಾಮೀನು ಕೋರಿ ಮುರುಘಾ ಶರಣರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಚ್‌ ಆರ್‌ ಜಗದೀಶ್‌ ವಾದಿಸಿದ್ದರು. ವಕೀಲ ಕೆ ಎನ್‌ ವಿಶ್ವನಾಥಯ್ಯ ಅವರು ಮುರುಘಾ ಶರಣರನ್ನು ಪ್ರತಿನಿಧಿಸಿದ್ದರು.

ಆಗಸ್ಟ್‌ 26ರಂದು ದಾಖಲಾಗಿದ್ದ ಪೋಕ್ಸೊ ಮತ್ತು ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೇಲಿನ ದೌರ್ಜನ್ಯಗಳ ತಡೆ ಕಾಯಿದೆ ಅಡಿ ದಾಖಲಾಗಿದ್ದ ಪ್ರಕರಣದಲ್ಲಿ ಜಾಮೀನು ನೀಡಲು ಮುರುಘಾ ಶರಣರು ಸೇರಿದಂತೆ ಉಳಿದ ಆರೋಪಿಗಳಿಗೆ ವಿಶೇಷ ನ್ಯಾಯಾಲಯವು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಮುರುಘಾ ಶರಣರು ಹೈಕೋರ್ಟ್‌ ಮೆಟ್ಟಿಲೇರಿದ್ದು, ಅರ್ಜಿ ವಿಚಾರಣೆಗೆ ಬಾಕಿ ಇದೆ.