Bombay High Court Nagpur bench, Justice Pushpa Ganediwala 
ಸುದ್ದಿಗಳು

[ಪೋಕ್ಸೊ ಖುಲಾಸೆಗಳು] ಬಾಂಬೆ ಹೈಕೋರ್ಟ್‌ ನ್ಯಾಯಮೂರ್ತಿ ಕಾಯಂಗೊಳಿಸುವ ಶಿಫಾರಸು ಹಿಂಪಡೆದ ಸುಪ್ರೀಂ ಕೋರ್ಟ್‌ ಕೊಲಿಜಿಯಂ

ಒಂದು ವಾರದೊಳಗೆ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಪೋಕ್ಸೊ ಕಾಯಿದೆ ಅಡಿ ಮೂರು ಖುಲಾಸೆ ತೀರ್ಪುಗಳನ್ನು ನ್ಯಾಯಮೂರ್ತಿ ಪುಷ್ಪಾ ಗನೇದಿವಾಲಾ ಹೊರಡಿಸಿದ್ದಾರೆ.

Bar & Bench

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೊಕ್ಸೊ) ಅಡಿ ಅಪರಾಧಿಗಳಾದವರನ್ನು ಖುಲಾಸೆಗಳಿಸಿದ ವಿವಾದಾತ್ಮಕ ತೀರ್ಪುಗಳನ್ನು ನೀಡಿದ ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿ ಪುಷ್ಪಾ ವಿ ಗನೇದಿವಾಲಾ ಅವರನ್ನು ಕಾಯಂಗೊಳಿಸುವುದಕ್ಕೆ ನೀಡಿದ್ದ ಒಪ್ಪಿಗೆಯನ್ನು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಹಿಂಪಡೆದಿದೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

ನ್ಯಾಯಮೂರ್ತಿ ಪುಷ್ಪಾ ಅವರನ್ನು ಕಾಯಂ ನ್ಯಾಯಮೂರ್ತಿಯನ್ನಾಗಿಸುವ ಸಂಬಂಧ ಜನವರಿ 20ರಂದು ಕೇಂದ್ರ ಸರ್ಕಾರಕ್ಕೆ ಮಾಡಿದ್ದ ಶಿಫಾರಸ್ಸನ್ನು ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ,‌ ನ್ಯಾಯಮೂರ್ತಿಗಳಾದ ಎನ್‌ ವಿ ರಮಣ ಮತ್ತು ರೋಹಿಂಟನ್‌ ಫಾಲಿ ನಾರಿಮನ್ ಅವರನ್ನೊಳಗೊಂಡ ಮೂವರ ಸಮಿತಿಯು ಹಿಂಪಡೆದಿದೆ. ನ್ಯಾ. ಗನೇದಿವಾಲಾ ಅವರು ಸದ್ಯ ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿದ್ದಾರೆ.

ಮಹಾರಾಷ್ಟ್ರ ಮೂಲದ ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್‌ ಮತ್ತು ಎ ಎಂ ಖಾನ್ವಿಲ್ಕರ್‌ ಅವರು ನ್ಯಾ. ಗನೇದಿವಾಲಾ ಅವರನ್ನು ಕಾಯಂ ನ್ಯಾಯಮೂರ್ತಿಯನ್ನಾಗಿಸುವುದರ ಬಗ್ಗೆ ಅಂತರ ಕಾಯ್ದುಕೊಳ್ಳುವುದಾಗಿ ಕೊಲಿಜಿಯಂಗೆ ತಿಳಿಸಿದ ಹಿನ್ನೆಲೆಯಲ್ಲಿ ಶಿಫಾರಸ್ಸು ಹಿಂಪಡೆಯುವ ನಿರ್ಣಯವನ್ನು ಕೊಲಿಜಿಯಂ ಕೈಗೊಂಡಿದೆ.

ಒಂದೇ ವಾರದಲ್ಲಿ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ನ್ಯಾ. ಗನೇದಿವಾಲಾ ಅವರು ಪೋಕ್ಸೊ ಕಾಯಿದೆ ಅಡಿ ಅಪರಾಧಿಗಳನ್ನು ಖುಲಾಸೆಗೊಳಿಸಿದ್ದಾರೆ. ಅತ್ಯಾಚಾರವಾಗಿದೆ ಎಂಬ ಪ್ರಾಸಿಕ್ಯೂಷನ್‌ ಆರೋಪವನ್ನು ಬೆಂಬಲಿಸುವ ಯಾವುದೇ ಆಧಾರಗಳು ಇಲ್ಲ ಎಂದು ಜನವರಿ 14ರಂದು ಅಪರಾಧಿಯನ್ನು ನ್ಯಾ. ಗನೇದಿವಾಲಾ ಖುಲಾಸೆಗೊಳಿಸಿದ್ದರು (ಜೋಗೇಶ್ವರ್‌ ವಾಸುದಿಯೋ ಕಾವ್ಲೆ ವರ್ಸಸ್‌ ಮಹಾರಾಷ್ಟ್ರ ರಾಜ್ಯ).

ಅಪ್ರಾಪ್ತೆಯ ಕೈಹಿಡಿದಿರುವುದು ಅಥವಾ ನಿರ್ದಿಷ್ಟ ಸಮಯದಲ್ಲಿ ಆರೋಪಿಯು ಪ್ಯಾಂಟ್‌ ಜಿಪ್‌ ತೆರೆದುಕೊಂಡಿರುವುದು ಪೋಕ್ಸೊ ಕಾಯಿದೆ ಸೆಕ್ಷನ್‌ 7ರ ಅಡಿ ಲೈಂಗಿಕ ದೌರ್ಜನ್ಯ ಎನಿಸಿಕೊಳ್ಳುವುದಿಲ್ಲ ಎಂದು ಜನವರಿ 15ರ ಆದೇಶದಲ್ಲಿ ನ್ಯಾ. ಗನೇದಿವಾಲಾ ತಿಳಿಸಿದ್ದರು (ಲಿಬ್ನುಸ್‌ ವರ್ಸಸ್‌ ಮಹಾರಾಷ್ಟ್ರ ರಾಜ್ಯ).

12 ವರ್ಷದ ಅಪ್ರಾಪ್ತೆಯ ಮೇಲುಡುಪು ತೆರೆಯದೇ ಸ್ತನ ಒತ್ತುವುದು ಪೋಕ್ಸೊ ಕಾಯಿದೆಯ ಸೆಕ್ಷನ್‌ 7ರ ಅಡಿ ಲೈಂಗಿನ ದೌರ್ಜನ್ಯವಲ್ಲ ಎಂದು ಜನವರಿ 19ರಂದು ಮೂರನೇ ತೀರ್ಪು ಹೊರಡಿಸಿದ್ದರು (ಸತೀಶ್‌ ರಾಗ್ಡೆ ವರ್ಸಸ್‌ ಮಹಾರಾಷ್ಟ್ರ ರಾಜ್ಯ).

ಮೂರನೇ ತೀರ್ಪು ಸುಪ್ರೀಂ ಕೋರ್ಟ್‌ನಲ್ಲಿ ವ್ಯಾಪಕ ಚರ್ಚೆಗೆ ಒಳಗಾಗಿದ್ದು, ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅದನ್ನು ಉಲ್ಲೇಖಿಸಿದ್ದರಿಂದ ಆ ತೀರ್ಪಿಗೆ ತಡೆಯಾಜ್ಞೆ ನೀಡಲಾಗಿದೆ. ಮೂರನೇ ಪ್ರಕರಣದಲ್ಲಿ ತೀರ್ಪು ಹೊರಬಿದ್ದ ದಿನವೇ, ಅದಿನ್ನೂ ಸಾರ್ವಜನಿಕವಾಗಿಲ್ಲದ ಸಂದರ್ಭದಲ್ಲಿ ನ್ಯಾಯಮೂರ್ತಿ ಗನೇದಿವಾಲಾ ಅವರನ್ನು ಕಾಯಂ ನ್ಯಾಯಮೂರ್ತಿಯನ್ನಾಗಿಸಲು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಶಿಫಾರಸ್ಸು ಮಾಡಿತ್ತು.

2019ರ ಫೆಬ್ರುವರಿ 8ರಂದು ನ್ಯಾಯಮೂರ್ತಿ ಗನೇದಿವಾಲಾ ಅವರನ್ನು ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯನ್ನಾಗಿ ನೇಮಿಸಲಾಗಿತ್ತು. 2007ರಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ಅವರು ನ್ಯಾಯಾಂಗ ಸೇವೆ ಆರಂಭಿಸಿದ್ದರು. ಮುಂಬೈ ಸಿಟಿ ಸಿವಿಲ್‌ ನ್ಯಾಯಮೂರ್ತಿ; ನಾಗಪುರದ ಜಿಲ್ಲಾ ಮತ್ತು ಕೌಟುಂಬಿಕ ನ್ಯಾಯಾಲಯ; ಮಹಾರಾಷ್ಟ್ರ ನ್ಯಾಯಿಕ ಅಕಾಡೆಮಿಯ ಜಂಟಿ ನಿರ್ದೇಶಕರು; ನಾಗಪುರದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರು; ಬಾಂಬೆ ಹೈಕೋರ್ಟ್‌ ಜುಡಿಕೇಚರ್‌ನ ರಿಜಿಸ್ಟ್ರಾರ್‌ ಜನರಲ್‌ ಮತ್ತು ಮುಂಬೈ ಸಿಟಿ ಸಿವಿಲ್‌ ನ್ಯಾಯಾಲಯದ ಪ್ರಧಾನ ನ್ಯಾಯಮೂರ್ತಿಯಾಗಿ ಅವರು ಕಾರ್ಯನಿರ್ವಹಿಸಿದ್ದಾರೆ.