ಪೊಲೀಸ್ ಠಾಣೆಯಲ್ಲಿ ಅಳವಡಿಸಿರುವ ಸಿಸಿಟಿವಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಪೊಲೀಸರ ವಾದವನ್ನು ಒಪ್ಪಲಾಗದು. ಹೀಗಾದಲ್ಲಿ ಅದನ್ನು ಠಾಣೆಯಲ್ಲಿ ಅಳವಡಿಸಿರುವ ಉದ್ದೇಶಕ್ಕೇ ಸೋಲಾಗಲಿದೆ ಎಂದು ಬಾಂಬೆ ಹೈಕೋರ್ಟ್‌ನ ಔರಂಗಬಾದ್ ಪೀಠವು ಈಚೆಗೆ ಹೇಳಿದೆ.
ಲಾಕಪ್‌ಡೆತ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಂಥ ವಾದವನ್ನು ಪೊಲೀಸರು ಮಂಡಿಸುವುದು ಸಹಜ ಎಂದಿರುವ ನ್ಯಾಯಮೂರ್ತಿಗಳಾದ ಟಿ ವಿ ನಾಲವಡೆ ಮತ್ತು ಎಂ ಜಿ ಸೆವ್ಲಿಕರ್ ಅವರಿದ್ದ ವಿಭಾಗೀಯ ಪೀಠವು ಸಿಸಿಟಿವಿ ವ್ಯವಸ್ಥೆಯ ಕಾರ್ಯನಿರ್ವಹಣೆ ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಯನ್ನು ನಿರ್ವಹಿಸುವುದು ಅತ್ಯಗತ್ಯ ಎಂದಿದೆ. ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 18ಕ್ಕೆ ಮುಂದೂಡಲಾಗಿದೆ.
“ಪೊಲೀಸ್ ಠಾಣೆಗೆ ಕರೆತರಲಾಗುವ ವ್ಯಕ್ತಿಗಳ ಮೇಲೆ ನಡೆಸುವ ದೌರ್ಜನ್ಯಕ್ಕೆ ಸಿಸಿಟಿವಿ ವ್ಯವಸ್ಥೆಯಿಂದ ತಡೆ ಬೀಳುತ್ತದೆ. ದೌರ್ಜನ್ಯ ನಡೆದ ಆ ನಿರ್ದಿಷ್ಟವಾದ ದಿನ ಸಿಸಿಟಿವಿ ಕಾರ್ಯನಿರ್ವಹಿಸುತ್ತಿರಲಿಲ್ಲ ಎಂಬ ವಾದವು ಆಶ್ಚರ್ಯವನ್ನು ಉಂಟು ಮಾಡುತ್ತದೆ. ಈ ರೀತಿ ಆಗುವುದಕ್ಕೆ ಅವಕಾಶ ನೀಡಲಾಗದು. ಇದರಿಂದ ಸಿಸಿಟಿವಿ ವ್ಯವಸ್ಥೆ ಅಳವಡಿಸುವ ಉದ್ದೇಶವನ್ನೇ ಹಾಳು ಮಾಡಿದಂತಾಗುತ್ತದೆ” ಎಂದು ಪೀಠ ಹೇಳಿದೆ.
ಪೊಲೀಸರು ಲಾಕಪ್‌ನಲ್ಲಿ ಇಟ್ಟು ಚಿತ್ರಹಿಂಸೆ ನೀಡಿದ್ದಾರೆ ಎಂದು ಮನವಿದಾರ ಡಬ್ಲು ಎಂ ಶೇಖ್ ಎಂಬವರು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು. ಇದಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿ ನೀಡುವಂತೆ ಪೊಲೀಸ್ ಠಾಣೆಗೆ ಮನವಿ ಮಾಡಿದರೂ ಅವರು ದೃಶ್ಯಾವಳಿ ನೀಡುತ್ತಿಲ್ಲ ಎಂದು ಶೇಖ್ ವಾದಿಸಿದರು.
ಇದಕ್ಕೆ ಉಮರ್ಗಾ ವಿಭಾಗೀಯ ಠಾಣೆಯ ಸಹಾಯಕ ಪೊಲೀಸ್ ಇನ್‌ಸ್ಪೆಕ್ಟರ್ ಅವರ ಪರವಾಗಿ ಹೆಚ್ಚುವರಿ ಸರ್ಕಾರಿ ಅಭಿಯೋಜಕರು ಅಂದು ಸಿಸಿಟಿವಿ ಕಾರ್ಯನಿರ್ವಹಿಸುತ್ತಿರಲಿಲ್ಲ ಎಂದು ಹೇಳಿದ್ದಾರೆ ಎಂದರು.
ಸಿಸಿಟಿವಿ ವ್ಯವಸ್ಥೆಯು ಪೊಲೀಸ್ ಠಾಣೆಗೆ ಕರೆತರಲಾದ ವ್ಯಕ್ತಿಯ ಮೇಲೆ ನಡೆಯುವ ದೌರ್ಜನ್ಯವನ್ನು ನಿಯಂತ್ರಿಸುತ್ತದೆ.ಬಾಂಬೆ ಹೈಕೋರ್ಟ್
ಸಿಸಿಟಿವಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವ ವಾದವನ್ನು ಇದೇ ಮೊದಲ ಬಾರಿಗೇನೂ ತಾವು ಕೇಳುತ್ತಿಲ್ಲ ಎನ್ನುವ ಅಂಶವನ್ನು ಒತ್ತಿ ಹೇಳಿದ ನ್ಯಾಯಪೀಠವು, ಸಿಸಿಟಿವಿ ವ್ಯವಸ್ಥೆಯ ಕಾರ್ಯನಿರ್ವಹಣೆ ಮತ್ತು ಪ್ರತಿದಿನವೂ ಅದರ ಸುಸ್ಥಿತಿಯ ಕುರಿತಾದ ದಾಖಲೆ ಇರಿಸಿ, ನಿಗಾವಹಿಸಲು ಅಧಿಕಾರಿಯೊಬ್ಬರನ್ನು ನೇಮಿಸಬೇಕು ಎಂದು ಹೇಳಿತು.
ಹಲವು ಪ್ರಕರಣಗಳಲ್ಲಿ ನಿರ್ದಿಷ್ಟವಾಗಿ ಅಂದು (ಲಾಕಪ್‌ನಲ್ಲಿ ಹಿಂಸೆ) ಸಿಸಿಟಿವಿ ಕಾರ್ಯನಿರ್ವಹಿಸುತ್ತಿರಲಿಲ್ಲ ಎಂದು ನ್ಯಾಯಾಲಯಕ್ಕೆ ಹೇಳಿಕೆ ನೀಡಲಾಗುತ್ತದೆ.ಬಾಂಬೆ ಹೈಕೋರ್ಟ್
ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆ ಅಥವಾ ದಾಖಲಾತಿ ಪುಸ್ತಕವನ್ನು ಹಾಜರುಪಡಿಸದೇ ಇರುವುದರಿಂದ ಆಕ್ಷೇಪಿತ ಪೊಲೀಸ್ ಠಾಣೆಯನ್ನು ಅನುಮಾನಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಉಸ್ಮಾನಾಬಾದ್ ಪೊಲೀಸ್ ವರಿಷ್ಠಾಧಿಕಾರಿಗೆ ಪ್ರಕರಣದ ಕುರಿತು ವೈಯಕ್ತಿಕ ಮುತುವರ್ಜಿ ವಹಿಸಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದೆ.
“ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಉಸ್ಮಾನಾಬಾದ್ ಪೊಲೀಸ್ ವರಿಷ್ಠಾಧಿಕಾರಿಗೆ ಈ ನ್ಯಾಯಾಲಯವು ಸೂಚಿಸುತ್ತಿದ್ದು, ಪೊಲೀಸ್ ಠಾಣೆಯಲ್ಲಿ ಅವಳವಡಿಸಲಾಗಿರುವ ಸಿಸಿಟಿವಿ ಕಾರ್ಯಾಚರಣೆ ಮತ್ತು ದಾಖಲೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ಅನುಸರಿಸಲಾಗಿರುವ ವಿಧಾನದ ಕುರಿತು ವಿಚಾರಣೆ ನಡೆಸುವಂತೆ ಸೂಚಿಸಲಾಗಿದೆ. ಇದರ ವರದಿಯನ್ನು ಡಿಸೆಂಬರ್ 18ರ ಒಳಗೆ ಸಲ್ಲಿಸುವಂತೆ ಸೂಚಿಸಲಾಗಿದೆ” ಎಂದು ಪೀಠ ಹೇಳಿದೆ.
ದೇಶಾದ್ಯಂತ ಇರುವ ಎಲ್ಲಾ ಪೊಲೀಸ್ ಠಾಣೆಗಳಲ್ಲಿಯೂ ರಾತ್ರಿಯ ವೇಳೆಯಲ್ಲಿನ ಕಾರ್ಯಾಚರಣೆಯೂ ಸೆರೆಯಾಗುವ ಸಿಸಿಟಿವಿ ವ್ಯವಸ್ಥೆ ಮಾಡಬೇಕು ಎಂದು ಡಿಸೆಂಬರ್ 2ರಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿತ್ತು.