Karnataka HC and Justice Suraj Govindaraj 
ಸುದ್ದಿಗಳು

ವಾರೆಂಟ್‌ ಜಾರಿಯಾಗಿದ್ದ ವ್ಯಕ್ತಿ ಬಿಟ್ಟು ಬೇರೊಬ್ಬರನ್ನು ಬಂಧಿಸಿದ ಪೊಲೀಸರು; ₹5 ಲಕ್ಷ ಪರಿಹಾರ ಪಾವತಿಗೆ ನಿರ್ದೇಶನ

ಬಂಧನ ಪೂರ್ವಕ್ಕೂ ಮುನ್ನ ಪೊಲೀಸರು ಗುರುತು ಖಾತರಿಪಡಿಸಿಕೊಳ್ಳುವುದು ಸೇರಿದಂತೆ ಯಾವೆಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬುದರ ಕುರಿತು ಪೊಲೀಸ್‌ ಮಹಾನಿರ್ದೇಶಕರು ಮಾರ್ಗಸೂಚಿ ಹೊರಡಿಸಬೇಕು ಎಂದಿರುವ ಪೀಠ.

Bar & Bench

ವಾರೆಂಟ್ ಜಾರಿಯಾಗಿದ್ದ ವ್ಯಕ್ತಿಗೆ ಬದಲಾಗಿ ಬೇರೊಬ್ಬ ವ್ಯಕ್ತಿಯನ್ನು ಬಂಧಿಸುವ ಮೂಲಕ ಆ ವ್ಯಕ್ತಿಯ ಮೂಲಭೂತ ಹಕ್ಕು ಮತ್ತು ಘನತೆಗೆ ಚ್ಯುತಿ ಉಂಟು ಮಾಡಿರುವುದಕ್ಕಾಗಿ ವಿನಾ ಕಾರಣ ಬಂಧಿಸಲ್ಪಟ್ಟ ವ್ಯಕ್ತಿಗೆ ₹5 ಲಕ್ಷ ಪರಿಹಾರವನ್ನು ಒಂದು ತಿಂಗಳಲ್ಲಿ ಪಾವತಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಈಚೆಗೆ ಆದೇಶಿಸಿದೆ.

ಬೆಂಗಳೂರಿನ ಶ್ರೀನಗರದ ನಿವಾಸಿ ಎನ್‌ ನಿಂಗರಾಜು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ನೇತೃತ್ವದ ಏಕ ಸದಸ್ಯ ಪೀಠವು ಮಾನ್ಯ ಮಾಡಿದೆ.

ಅರ್ಜಿದಾರರಿಗೆ ನೀಡಲಾಗುವ ₹5 ಲಕ್ಷ ಪರಿಹಾರದ ಮೊತ್ತವನ್ನು ಬಂಧನ ಮಾಡಿದ ಅಧಿಕಾರಿಗಳಿಂದ ವಸೂಲಿ ಮಾಡುವ ಸ್ವಾತಂತ್ರ್ಯ ಸರ್ಕಾರಕ್ಕೆ ಇರುತ್ತದೆ ಎಂದು ನ್ಯಾಯಾಲಯ ಆದೇಶದಲ್ಲಿ ಉಲ್ಲೇಖಿಸಿದೆ.

ವ್ಯಕ್ತಿಯ ಗುರುತು ಪತ್ತೆ ಹಚ್ಚುವಲ್ಲಿ ಗೊಂದಲವುಂಟಾಗಿ, ವಾರೆಂಟ್ ಜಾರಿಯಾಗಿದ್ದ ವ್ಯಕ್ತಿಯ ತಂದೆಯ ಹೆಸರು, ಅರ್ಜಿದಾರರ ತಂದೆಯ ಹೆಸರು ಒಂದೇ ಆಗಿದ್ದರಿಂದ ಪೊಲೀಸ್ ಅಕಾರಿ, ನಿಜವಾಗಿಯೂ ವಾರೆಂಟ್ ಜಾರಿಯಾಗಿದ್ದ ವ್ಯಕ್ತಿಯನ್ನು ಬಿಟ್ಟು ಅರ್ಜಿದಾರರನ್ನು ಬಂಧಿಸಿದ್ದರು. ಇದು ಸರಿಯಲ್ಲ. ಜಾಮೀನು ಸಹಿತ ಅಥವಾ ಜಾಮೀನು ರಹಿತ ವಾರೆಂಟ್‌ ಆಗಿದ್ದರೂ ಯಾರಿಗೆ ವಾರೆಂಟ್ ಹೊರಡಿಸಲಾಗಿದೆ. ಆ ವ್ಯಕ್ತಿಯ ಗುರುತು, ವಿವರಗಳನ್ನು ಪೊಲೀಸ್‌ ಅಧಿಕಾರಿ ಖಾತರಿಪಡಿಸಿಕೊಳ್ಳಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

‘‘ತಂದೆ ಹೆಸರು ಒಂದೇ ಇತ್ತು ಎನ್ನುವ ಕಾರಣಕ್ಕೆ ಬಂಧಿಸಬೇಕಾದ ವ್ಯಕ್ತಿಯನ್ನು ಬಿಟ್ಟು ಬೇರೊಬ್ಬ ವ್ಯಕ್ತಿಯನ್ನು ಬಂಧಿಸಿರುವುದು ಸರಿಯಲ್ಲ. ಪ್ರಾಥಮಿಕವಾಗಿ ಯಾವುದೇ ವ್ಯಕ್ತಿಯನ್ನು ಬಂಧಿಸಬೇಕಾದರೂ ಅತನ ವಿವರಗಳನ್ನು ಪರಿಶೀಲಿಸಬೇಕಲ್ಲವೇ?” ಎಂದು ಪೀಠವು ಪ್ರಶ್ನಿಸಿದೆ. ಪೊಲೀಸರ ಕ್ರಮದಿಂದ ಬಂಧಿತ ವ್ಯಕ್ತಿಗೆ ಸಂವಿಧಾನದ 21ನೇ ವಿಧಿಯಡಿ ದೊರೆತಿರುವ ಜೀವಿಸುವ ಮತ್ತು ಸ್ವಾತಂತ್ರ್ಯದ ಹಕ್ಕು ಉಲ್ಲಂಘನೆಯಾಗಿದೆ” ಎಂದು ಪೀಠ ಹೇಳಿದೆ.

ತಂದೆ ಹೆಸರು ಒಂದೇ ಆಗಿದ್ದರೂ ಅಥವಾ ತದ್ರೂಪವಾಗಿದ್ದರೂ ಬಂಧಿಸುವಾಗ ಅದರ ಪಾತ್ರವೇನು, ಇದನ್ನೇ ಇನ್ನೊಂದಕ್ಕೆ ಅನ್ವಯಿಸುವುದಾದರೆ ಒಬ್ಬ ಸಹೋದರನಿಗೆ ಬಂಧನ ವಾರೆಂಟ್‌ ಹೊರಡಿಸಿದಾಗ ಮತ್ತೊಬ್ಬ ಸಹೋದರ ಅಥವಾ ಸಹೋದರಿಯನ್ನು ಬಂಧಿಸಬಹುದು. ತಂದೆ ಹೆಸರು ಒಂದೇ ಎಂಬ ಕಾರಣಕ್ಕೆ ಇನ್ನೊಬ್ಬರನ್ನು ಹೇಗೆ ಬಂಧಿಸಲಾಗುತ್ತದೆ ಎಂಬುದು ನನ್ನ ಗ್ರಹಿಕೆಗೆ ನಿಲುಕುತ್ತಿಲ್ಲ ಎಂದು ಪೀಠ ಆಶ್ಚರ್ಯ ವ್ಯಕ್ತಪಡಿಸಿದೆ.

ಇಂಥ ಪರಿಸ್ಥಿತಿ ನಿಭಾಯಿಸುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾರ್ಗಸೂಚಿಗಳನ್ನು ಜಾರಿಗೊಳಿಸಿದ್ದರೆ ಬಂಧನ ಮಾಡುವ ಅಧಿಕಾರಿಗಳಿಗೆ ತರಬೇತಿ ನೀಡಬೇಕು. ಇಲ್ಲವಾದಲ್ಲಿ ಬಂಧನ ಪೂರ್ವಕ್ಕೂ ಮುನ್ನ ಪೊಲೀಸರು ಗುರುತು ಖಾತರಿಪಡಿಸಿಕೊಳ್ಳುವುದು ಸೇರಿದಂತೆ ಯಾವೆಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬುದರ ಕುರಿತು ಈ ಆದೇಶ ಸಿಕ್ಕ ನಾಲ್ಕು ವಾರಗಳಲ್ಲಿ ಪೊಲೀಸ್‌ ಮಹಾನಿರ್ದೇಶಕರು ಮಾರ್ಗಸೂಚಿ ಹೊರಡಿಸಬೇಕು. ನ್ಯಾಯಿಕ ರಿಜಿಸ್ಟ್ರಾರ್‌ ಅವರು ತಕ್ಷಣ ಈ ಆದೇಶವನ್ನು ಪೊಲೀಸ್‌ ಮಹಾನಿರ್ದೇಶಕರಿಗೆ ಕಳುಹಿಸಿಕೊಡಬೇಕು ಎಂದು ಪೀಠ ಆದೇಶದಲ್ಲಿ ಉಲ್ಲೇಖಿಸಿದೆ.