Justice M Nagaprasanna and Karnataka HC 
ಸುದ್ದಿಗಳು

ಪೊಲೀಸ್‌ ನೋಟಿಸ್‌ನಲ್ಲಿ ಅಪರಾಧದ ಮಾಹಿತಿ, ದೂರಿನ ವಿವರ, ಅಪರಾಧ ಸಂಖ್ಯೆ ನಮೂದನೆ ಕಡ್ಡಾಯ: ಹೈಕೋರ್ಟ್‌

ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಮೊಬೈಲ್‌ ಫೋನ್‌ನಲ್ಲಿ ವಾಟ್ಸ್‌ ಆ್ಯಪ್‌ ಮೂಲಕ, ನಾಳೆ ನೀವು ಠಾಣೆಗೆ ಹಾಜರಾಗಬೇಕು ಎಂದು ಕಳುಹಿಸಿದ್ದ ಸಂದೇಶ ಪ್ರಶ್ನಿಸಿದ್ದ ಅರ್ಜಿದಾರರು.

Bar & Bench

ಯಾವುದೇ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಠಾಣೆಗೆ ಕರೆಸಿಕೊಳ್ಳುವಾಗ ನೀಡುವ ನೋಟಿಸ್‌ನಲ್ಲಿ ಎಫ್‌ಐಆರ್‌ ಪ್ರತಿ, ಅಪರಾಧ ಏನು ಎಂಬ ಬಗೆಗಿನ ಮಾಹಿತಿ, ದೂರಿನ ಸಂಕ್ಷಿಪ್ತ ರೂಪ ಮತ್ತು ಅಪರಾಧ ಸಂಖ್ಯೆ ಒಳಗೊಂಡ ಚೆಕ್‌ಲಿಸ್ಟ್‌ ಅನ್ನು ಕಡ್ಡಾಯವಾಗಿ ನಮೂದಿಸಿರಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರ ಅವಗಾಹನೆಗಾಗಿ ರಾಜ್ಯ ಗೃಹ ಕಾರ್ಯದರ್ಶಿ ಮತ್ತು ರಾಜ್ಯ ಪೊಲೀಸ್‌ ಮಹಾನಿರ್ದೇಶಕರು ಸೂಕ್ತ ಮಾರ್ಗಸೂಚಿಗಳನ್ನು ಹೊರಡಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ನಿರ್ದೇಶಿಸಿದೆ.

ಬೆಂಗಳೂರಿನ ಅಮೃತಹಳ್ಳಿ ಠಾಣೆಯ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಮೊಬೈಲ್‌ ಫೋನ್‌ನಲ್ಲಿ ವಾಟ್ಸ್‌ ಆ್ಯಪ್‌ ಮೂಲಕ, ನಾಳೆ ನೀವು ಠಾಣೆಗೆ ಹಾಜರಾಗಬೇಕು ಎಂದು ಕಳುಹಿಸಿದ್ದ ಸಂದೇಶವನ್ನು ಪ್ರಶ್ನಿಸಿ ಪತ್ರಕರ್ತ ಟಿ ವಿ ಶಿವಪ್ರಸಾದ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಭಾರತೀಯ ನ್ಯಾಯ ಸಂಹಿತೆ–2023ರ ಸೆಕ್ಷನ್‌ 35ರ ಅನುಸಾರ ಆರೋಪಿಗೆ ಚೆಕ್‌ ಲಿಸ್ಟ್‌ ಒದಗಿಸದೇ ಹೋದಲ್ಲಿ ಅಂತಹ ಆರೋಪಿಯು ಠಾಣಾಧಿಕಾರಿ ಮುಂದೆ ಹಾಜರಾಗುವ ಅವಶ್ಯಕತೆ ಇಲ್ಲ. ಅಂತೆಯೇ, ಪೊಲೀಸರು ಇಂತಹ ಆರೋಪಿಯ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ ಎಂದೂ ಪೀಠ ಆದೇಶದಲ್ಲಿ ತಿಳಿಸಿದೆ.

ನೋಟಿಸ್‌ ಜೊತೆ ಎಫ್‌ಐಆರ್‌ ಪ್ರತಿ ಲಗತ್ತಿಸಬೇಕು. ನೋಟಿಸ್‌ನಲ್ಲಿ ಅಪರಾಧ ಸಂಖ್ಯೆ ಮತ್ತಿತರ ಮಾಹಿತಿ ನೀಡದಿದ್ದರೆ ನೋಟಿಸ್‌ ಪಡೆದವರು ಅಧಿಕಾರಿಯ ಮುಂದೆ ಹಾಜರಾಗಬೇಕಿಲ್ಲ. ಅವರು ಹಾಜರಾಗದಿದ್ದರೆ ಪೊಲೀಸರು ದುರುದ್ದೇಶಿತ ಕ್ರಮಕೈಗೊಳ್ಳುವಂತಿಲ್ಲ. ಅಲ್ಲದೇ, ಎಫ್‌ಐಆರ್‌ ದಾಖಲಾದ ತಕ್ಷಣ ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡುವ ಹಾಗೂ ಅದನ್ನು ತುರ್ತಾಗಿ ಪಡೆಯುವ ವ್ಯವಸ್ಥೆ ರೂಪಿಸಬೇಕು ಎಂದು ಆದೇಶಿಸಿದೆ.

ತನಗೆ ಹಾಗೂ ತನ್ನ ಕುಟುಂಬದ ಸದಸ್ಯರಿಗೆ ಜೀವ ಬೆದರಿಕೆ ಹಾಕಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಮಯ ಟಿ ವಿ ಚಾನಲ್‌ನ ಸಿಇಒ ವಿಜಯ್ ಟಾಟಾ ನೀಡಿದ ದೂರಿನ ಅನುಸಾರ ಅಮೃತಹಳ್ಳಿ ಠಾಣೆಯ ಪೊಲಿಸರು ಟಿ ಆರ್ ಶಿವಪ್ರಸಾದ್‌ಗೆ ಮೊಬೈಲ್‌ ಫೋನ್‌ನಲ್ಲಿ ವಾಟ್ಸ್‌ ಆ್ಯಪ್‌ ಮೂಲಕ ಸಂದೇಶ ಕಳುಹಿಸಿ, ನಾಳೆ ಠಾಣೆಗೆ ಹಾಜರಾಗಬೇಕು ಎಂದು ಸೂಚಿಸಿದ್ದರು.

T R Shiva Prasad Vs State of Karnataka.pdf
Preview