ನ್ಯಾಯಾಲಯದ ವಿಚಾರಣೆಯ ವೇಳೆ ಕೋಕಾ ಕೋಲಾ ಕುಡಿಯುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ಗುಜರಾತ್ ಹೈಕೋರ್ಟ್‌ನ ಆಕ್ರೋಶಕ್ಕೆ ಗುರಿಯಾದರು.
ತಮ್ಮ ಅಸಮಂಜಸ ವರ್ತನೆಯ ಪರಿಣಾಮ 100 ಕೋಕ್ ಕ್ಯಾನ್‌ಗಳನ್ನು ವಕೀಲರ ಸಂಘದ ಪ್ರತಿಯೊಬ್ಬರಿಗೂ ನೀಡುವಂತೆ ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ನೇತೃತ್ವದ ಪೀಠ ಅಧಿಕಾರಿಗೆ ಸೂಚಿಸಿತು. ಇಲ್ಲದೇ ಹೋದರೆ ಶಿಸ್ತುಕ್ರಮ ಎದುರಿಸಬೇಕಾಗುತ್ತದೆ ಎಂದು ಕೂಡ ಅದು ಎಚ್ಚರಿಸಿತು.
ಆಗ ಹಿರಿಯ ನ್ಯಾಯವಾದಿ ಭಾಸ್ಕರ್ ತನ್ನಾ ಅವರು ಕೋಕ್‌ಗಿಂತಲೂ ನಿಂಬೆ ಶರಬತ್ತು ವಿತರಿಸುವಂತೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಮುಖ್ಯ ನ್ಯಾಯಮೂರ್ತಿಗಳು ಅಮೂಲ್ ಜ್ಯೂಸ್ ವಿತರಿಸಲು ಸೂಚಿಸುತ್ತಿದ್ದಂತೆ ನ್ಯಾಯಾಂಗಣ ನಗೆಗಡಲಲ್ಲಿ ತೇಲಿತು. ಇದೇ ವೇಳೆ, ನ್ಯಾಯಾಲಯವು ಈ ಹಿಂದೆ ವಕೀಲರೊಬ್ಬರು ವರ್ಚುವಲ್ ವಿಚಾರಣೆ ವೇಳೆ ಸಮೋಸಾ ತಿನ್ನುತ್ತಿದ್ದ ಉದಾಹರಣೆಯನ್ನು ನೀಡಿತು. ಭೌತಿಕ ವಿಚಾರಣೆಗೆ ಹಾಜರಾಗುವುದೇ ಆಗಿದ್ದರೆ ಅಧಿಕಾರಿಯು ಕೋಕ್ ಸಹಿತ ನ್ಯಾಯಾಲಯಕ್ಕೆ ಆಗಮಿಸುತ್ತಿದ್ದರೆ ಎಂದು ಪ್ರಶ್ನಿಸಿತು.
ಪೊಲೀಸ್ ಅಧಿಕಾರಿ ಕ್ಯಾನ್‌ಗಳನ್ನು ಪೂರೈಸಿದ ನಂತರ ಅದನ್ನು ದೃಢಪಡಿಸುವಂತೆ ಸಹಾಯಕ ಸರ್ಕಾರಿ ವಕೀಲ ದೇವನಾನಿ ಅವರಿಗೆ ನ್ಯಾಯಾಲಯ ಲಘು ದಾಟಿಯಲ್ಲಿ ತಿಳಿಸಿತು.