Madras High Court 
ಸುದ್ದಿಗಳು

ಪೋಕ್ಸೋ ಸೂಕ್ಷ್ಮ ಮಾಹಿತಿ ಸೋರಿಕೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಿ, ಪತ್ರಕರ್ತರ ವಿರುದ್ಧ ಅಲ್ಲ: ಮದ್ರಾಸ್ ಹೈಕೋರ್ಟ್

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತೆಯ ಹಕ್ಕುಗಳನ್ನು ಪೊಲೀಸರು ಉಲ್ಲಂಘಿಸಿದ್ದಾರೆ ಎಂದ ನ್ಯಾಯಾಲಯ ಆಕೆಯ ಪೋಷಕರ ಮೇಲೆ ಹಲ್ಲೆ ನಡೆಸಿರುವ ಆರೋಪ ಕುರಿತು ಸಿಬಿಐ ತನಿಖೆಗೆ ನಿರ್ದೇಶಿಸಿತು.

Bar & Bench

ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಸೂಕ್ಷ್ಮ ಮಾಹಿತಿ ಬಹಿರಂಗಪಡಿಸಿದ ಆರೋಪ ಹೊತ್ತಿರುವ ವ್ಯಕ್ತಿಗಳ ವಿರುದ್ಧ  ಪೊಲೀಸರು ಪ್ರಕರಣ ದಾಖಲಿಸಬೇಕೆ ವಿನಾ ಅಂತಹ ಮಾಹಿತಿ ಪ್ರಸಾರ ಮಾಡುವ ಪತ್ರಕರ್ತರು, ಯೂಟ್ಯೂಬರ್‌ಗಳ ವಿರುದ್ಧ ಅಲ್ಲ ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಸ್ವಯಂ ಪ್ರೇರಿತ ಪ್ರಕರಣ ಮತ್ತು ಪೊಲೀಸ್‌ ಆಯುಕ್ತರು ಇನ್ನಿತರರ ನಡುವಣ ಪ್ರಕರಣ].

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತೆಯ ಹಕ್ಕುಗಳನ್ನು ಚೆನ್ನೈ ಪೊಲೀಸರು ಉಲ್ಲಂಘಿಸಿದ್ದಾರೆ ಎಂದ ನ್ಯಾಯಮೂರ್ತಿಗಳಾದ ಎಸ್‌ ಎಂ ಸುಬ್ರಮಣ್ಯಂ ಮತ್ತು ವಿ ಶಿವಜ್ಞಾನಂ ಅವರಿದ್ದ ಪೀಠ ಆಕೆಯ ಪೋಷಕರ ಮೇಲೆ ಹಲ್ಲೆ ನಡೆಸಿರುವ ಆರೋಪ ಕುರಿತು ಸಿಬಿಐ ತನಿಖೆಗೆ ನಿರ್ದೇಶಿಸಿತು.

ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಮತ್ತು ಸಂತ್ರಸ್ತೆಯ ನಡುವಿನ ಸಂಭಾಷಣೆಯನ್ನು ಪ್ರಸಾರ ಮಾಡಿದ ಆರೋಪದ ಮೇಲೆ ಯೂಟ್ಯೂಬರ್ ಮತ್ತು ಪತ್ರಕರ್ತರೊಬ್ಬರ ವಿರುದ್ಧ ಕ್ರಿಮಿನಲ್ ಮೊಕದ್ದಮೆ  ದಾಖಲಿಸಲಾಗಿತ್ತು.

ಪತ್ರಕರ್ತರು ಮತ್ತು ಯೂಟ್ಯೂಬರ್‌ಗಳ ವಿರುದ್ಧ ಮಾತ್ರ ಪ್ರಕರಣಗಳನ್ನು ದಾಖಲಿಸುವ ನಡೆ ಬಗ್ಗೆ ವಿಷಾದ ವ್ಯಕ್ತಪಡಿಸಿದ ನ್ಯಾಯಾಲಯ, ಅಂತಹ ಅಭ್ಯಾಸ ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ ಎಂದು ಹೇಳಿದೆ.

ಈ ರೀತಿಯ ಪ್ರಕಟಣೆಗಳು ಬಂದಾಗಲೆಲ್ಲಾ ಪೊಲೀಸರು ಪತ್ರಕರ್ತರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸುವ ಬದಲು ಪತ್ರಕರ್ತರಿಗೆ ಅಂತಹ ವಿಡಿಯೋ ಮತ್ತು ಮಾಹಿತಿ ಒದಗಿಸಿದ ನಿಜವಾದ ಆರೋಪಿಗಳನ್ನು ಪತ್ತೆ ಹಚ್ಚಬೇಕು.
ಮದ್ರಾಸ್ ಹೈಕೋರ್ಟ್

ಚೆನ್ನೈನ ಅಣ್ಣಾನಗರದ ಅಖಿಲ ಮಹಿಳಾ ಪೊಲೀಸ್ ಠಾಣೆ ಸಿಬ್ಬಂದಿ ಲೈಂಗಿಕ ದೌರ್ಜನ್ಯಕ್ಕೊಳಗಾದ ಅಪ್ರಾಪ್ತ ಸಂತ್ರಸ್ತೆಯನ್ನು ತಮ್ಮ ಅನುಪಸ್ಥಿತಿಯಲ್ಲಿ ಪರೀಕ್ಷೆ ನಡೆಸಿದ್ದಾರೆ ಎಂದು ಸಂತ್ರಸ್ತೆಯ ಪೋಷಕರು ದೂರಿದ್ದರು. ಪೊಲೀಸರ ವರ್ತನೆಯನ್ನು ಪ್ರಶ್ನಿಸಿದಾಗ ಇನ್‌ಸ್ಪೆಕ್ಟರ್ ತಮ್ಮ ಮೇಲೆ ಹಲ್ಲೆ ನಡೆಸಿ ಫೋನ್ ಕಸಿದುಕೊಂಡಿದ್ದಾರೆ ಎಂದು ಪೋಷಕರು ನ್ಯಾಯಾಲಯಕ್ಕೆ ತಿಳಿಸಿದ್ದರು.

ಸರ್ಕಾರಿ ಕಿಲ್ಪಾಕ್ ವೈದ್ಯಕೀಯ ಕಾಲೇಜಿನಲ್ಲಿ ಪರೀಕ್ಷೆ ನಡೆದಾಗ ಸಂತ್ರಸ್ತೆಯ ತಾಯಿ ಗೈರುಹಾಜರಾಗಿದ್ದರು ಎಂದು ಆಸ್ಪತ್ರೆಯ ಶುಶ್ರೂಷಕಿ ತಿಳಿಸಿದ್ದರು. ಅಲ್ಲದೆ ಆಸ್ಪತ್ರೆಯ ಕಾರಿಡಾರ್‌ನಲ್ಲಿ ದಾಖಲಾದ ಅಪ್ರಾಪ್ತ ಸಂತ್ರಸ್ತೆಯ ಹೇಳಿಕೆಗಳ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿತ್ತು.

ಕ್ರಿಮಿನಲ್ ಮೊಕದ್ದಮೆ ದಾಖಲಿಸುವಲ್ಲಿ ಮತ್ತು ಅಪ್ರಾಪ್ತ ಸಂತ್ರಸ್ತೆಯ ಪರೀಕ್ಷೆಯಲ್ಲಿ ಪೊಲೀಸ್ ಅಧಿಕಾರಿಗಳು ಹಲವಾರು ಅಕ್ರಮ ಎಸಗಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದರು. ಆರೋಪಿಗೆ ರಾಜಕೀಯ  ನಂಟಿದೆ ಎಂಬ ಕಾರಣಕ್ಕೆ ಪೊಲೀಸರು ಆತನ ರಕ್ಷಣೆಗೆ ಯತ್ನಿಸಿದ್ದರು ಎಂದು ಆರೋಪಿಸಲಾಗಿತ್ತು.

ಇನ್ಸ್‌ಪೆಕ್ಟರ್ ಮತ್ತು ಅಪ್ರಾಪ್ತ ಸಂತ್ರಸ್ತೆಯ ನಡುವಿನ ಸಂಭಾಷಣೆಯ ಪ್ರಸಾರಕ್ಕೆ ಸಂಬಂಧಿಸಿದಂತೆ, ಪ್ರತ್ಯೇಕ ಕ್ರಮ ಕೈಗೊಳ್ಳಲಾಗಿದ್ದು  ಯೂಟ್ಯೂಬರ್ ಮತ್ತು ಪತ್ರಕರ್ತನ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿತ್ತು ಎಂದು ಪ್ರಾಸಿಕ್ಯೂಷನ್ ಹೇಳಿತ್ತು.

ವಾದ ಆಲಿಸಿದ ನ್ಯಾಯಾಲಯ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಲ್ಲಿ ಪೊಲೀಸರು ಅನುಸರಿಸಿದ ಕಾರ್ಯವಿಧಾನಗಳು ಪೋಕ್ಸೊ ಕಾಯಿದೆಯನ್ನು ಉಲ್ಲಂಘಿಸುತ್ತದೆ ಎಂದಿದೆ. ಅಲ್ಲದೆ ಸಂತ್ರಸ್ತೆಯ ಪೋಷಕರು ಪೊಲೀಸರ ಮೇಲಿನ ವಿಶ್ವಾಸವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದು ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲು ಸಾಕಷ್ಟು ಕಾರಣಗಳಿವೆ ಎಂದಿತು.