Karnataka HC and Justice V Srishananda

 
ಸುದ್ದಿಗಳು

ಪೊಲೀಸ್‌, ಸಬ್‌ರಿಜಿಸ್ಟ್ರಾರ್‌ ಕಚೇರಿ, ಬಿಡಿಎ, ಪಾಲಿಕೆಗಳು ಭ್ರಷ್ಟಾಚಾರದ ಫಲವತ್ತಾದ ಭೂಮಿ: ನ್ಯಾ. ಶ್ರೀಶಾನಂದ

ನಮ್ಮ ಜನರು ನೆಟ್ಟಗಿರುವುದಿಲ್ಲ. ಲಂಚಕೋರರು ಎಂಬುದು ಬ್ರಿಟಿಷರಿಗೆ ಗೊತ್ತಿತ್ತು. ಹೀಗಾಗಿ ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ 1947ರಲ್ಲಿ ಬ್ರಿಟಿಷರು ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಮಾಡಿದ್ದರು ಎಂದ ನ್ಯಾಯಮೂರ್ತಿಗಳು.

Siddesh M S

ಬೆಂಗಳೂರಿನ ವಿಂಡ್ಸರ್‌ ಮ್ಯಾನರ್‌ ಸೇತುವೆ ಇಳಿಯುತ್ತಿದ್ದರೆ (ಬಿಡಿಎ ಇರುವ ಸ್ಥಳ) ಭ್ರಷ್ಟಾಚಾರದ ವಾಸನೆ ಬರುತ್ತದೆ. ದುರ್ನಾತದ ವಾಸನೆ ಬರುತ್ತದೆ. ನಾನು ಇದನ್ನು ಸಾಮಾನ್ಯೀಕರಿಸುತ್ತಿಲ್ಲ. ಬಂಡಿಗಟ್ಟಲೆ ಮೋಸ ನಡೆಯುತ್ತದೆ, ಆ ಮೋಸದ ಫೈಲ್‌ಗಳನ್ನು ಸಾಗಿಸಲು ಲಾರಿಗಳನ್ನು ತೆಗೆದುಕೊಂಡು ಹೋಗಬೇಕು ಎಂದು ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರು ಬುಧವಾರ ಮಾರ್ಮಿಕವಾಗಿ ನುಡಿಯುವ ಮೂಲಕ ಬಿಡಿಎಯಲ್ಲಿ ಭ್ರಷ್ಟಾಚಾರಕ್ಕೆ ಕನ್ನಡಿ ಹಿಡಿದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ (ಬಿಡಿಎ) ತಹಶೀಲ್ದಾರ್‌ ಆಗಿದ್ದ ಕಮಲಮ್ಮ ಅವರ ಜಾಮೀನು ಮನವಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಮೇಲಿನಂತೆ ಹೇಳಿದರು. ಭ್ರಷ್ಟಾಚಾರ ಎಷ್ಟು ವ್ಯಾಪಕವಾಗಿದೆ ಎಂಬುದನ್ನು ಅವರು ಈ ವೇಳೆ ಮೌಖಿಕವಾಗಿ ವಿವರಿಸಿದರು.

ಯಾರದೋ ಜಾಗ, ಸೈಟ್‌ ಅನ್ನು ಇನ್ಯಾರಿಗೋ ಕೊಟ್ಟು ಎಲ್ಲರಿಗೂ ಮೋಸ ಮಾಡಿಕೊಂಡಿರುತ್ತಾರೆ. ಸದರಿ ಜಾಮೀನು ಮನವಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಆಕ್ಷೇಪಣೆ ಸಲ್ಲಿಸಲಿ ಆಮೇಲೆ ನೋಡೋಣ ಎಂದು ವಿಚಾರಣೆಯನ್ನು ಮಾರ್ಚ್‌ 9ಕ್ಕೆ ಮುಂದೂಡಿದರು.

ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 409 (ನಂಬಿಕೆ ದ್ರೋಹ), 465 (ನಕಲಿ ಸಹಿ), 468 (ನಕಲಿ ದಾಖಲೆ ಸೃಷ್ಟಿ) ವೈಟ್‌ ಕಾಲರ್‌ ಅಪರಾಧಗಳಾಗಿವೆ. ತಪ್ಪು ಮಾಡಿದ ನಂತರ ಅವರು ಅದರ ಫಲವನ್ನು ಅನುಭವಿಸಬೇಕು. ದಾಖಲೆಯ ಭದ್ರತೆ ಹೊತ್ತಿದ್ದವರು (ಕಸ್ಟೊಡಿಯನ್) ನೀವು (ತಹಶೀಲ್ದಾರ್‌ ಕಮಲಮ್ಮ), ನಿಮ್ಮಿಂದ ಮತ್ತೊಬ್ಬರ ಟೇಬಲ್‌ಗೆ ಫೈಲ್‌ ಹೇಗೆ ಹೋಗಲು ಸಾಧ್ಯ ಎಂದು ಆರೋಪಿ ಕಮಲಮ್ಮ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರತೀಕ್‌ ಚಂದ್ರಮೌಳಿ ಅವರನ್ನು ಪ್ರಶ್ನಿಸಿದರು.

ಅಧಿಕೃತ ಮೇಲಾಧಿಕಾರಿಯ ಸೂಚನೆಯನ್ನು ಪಾಲಿಸಿದ್ದೇನೆ ಎಂದು ನೀವು (ಅರ್ಜಿದಾರರು) ಹೇಳುತ್ತಿರುವುದು ನನಗೆ ಅರ್ಥವಾಗಿದೆ. ಎಲ್ಲವನ್ನೂ ಒಳಗೊಳ್ಳಲು ಎಫ್‌ಐಆರ್‌ ಏನೂ ಎನ್‌ಸೈಕ್ಲೋಪಿಡಿಯಾ ಅಲ್ಲ. ಅಧಿಕಾರಿಗಳು ತನಿಖೆ ಮಾಡುತ್ತಾರೆ ಎಂದು ಅರ್ಜಿದಾರ ವಕೀಲರ ಸಮಜಾಯಿಷಿಗೆ ಪ್ರತಿಕ್ರಿಯಿಸಿದರು.

ಆರೋಪಿಯು ಬರೆದಿದ್ದೆಲ್ಲಾ ಚೆನ್ನಾಗಿದ್ದರೆ ಅವರೇಕೆ (ನ್ಯಾಯಾಲಯಕ್ಕೆ) ಬರಬೇಕಿತ್ತು? ಇಲ್ಲಿಯವರೆಗೆ ಹೇಗೋ ಮ್ಯಾನೇಜ್‌ ಮಾಡಿದ್ದಾರೆ. ಇನ್ನೊಂದಷ್ಟು ದಿನ ಮಾಡಿಕೊಳ್ಳಲಿ. ಅಷ್ಟದಿನ ಅವರಿಗೆ ಕಮಾಯಿ (ಲಂಚದ ಹಣ) ಕಮ್ಮಿಯಾಗಲಿದೆ, ಆಗಲಿ ಎಂದು ಅರ್ಜಿದಾರರ ಕೋರಿಕೆಯನ್ನು ತಳ್ಳಿ ಹಾಕಿದರು.

ಈಚೆಗೆ ಐದು ಲಕ್ಷ ರೂಪಾಯಿ ಲಂಚ ಪಡೆದಿದ್ದ ವಾಣಿಜ್ಯ ತೆರಿಗೆ ಅಧಿಕಾರಿ ಪದ್ಮನಾಭ ಅವರ ವಿರುದ್ಧದ ಶಿಕ್ಷೆಯನ್ನು ಎತ್ತಿ ಹಿಡಿದಿರುವ ತೀರ್ಪಿನಲ್ಲಿ “ವಾಣಿಜ್ಯ ತೆರಿಗೆ ಕಚೇರಿಯು ಭ್ರಷ್ಟಾಚಾರದ ಹಬ್‌” ಎಂದು ಬರೆದಿದ್ದೇನೆ. ಇನ್ನೂ ಕೆಲವನ್ನು ಬರೆಯಬೇಕಿಂದಿದ್ದೆ. ಆದರೆ ನ್ಯಾಯಮೂರ್ತಿಗಳು ಸರಳೀಕರಿಸಿಬಿಟ್ಟಿದ್ದಾರೆ ಎಂಬ ಭಾವನೆ ಬರುತ್ತದೆ ಎಂದು ಬಿಟ್ಟಿದ್ದೇನೆ. ಪೊಲೀಸ್‌ ಸ್ಟೇಷನ್‌, ವಾಣಿಜ್ಯ ತೆರಿಗೆ ಕಚೇರಿ, ಸಬ್‌ ರಿಜಿಸ್ಟ್ರಾರ್‌ ಕಚೇರಿ, ಬಿಡಿಎ, ಕಾರ್ಪೊರೇಷನ್‌ ಇವೆಲ್ಲವೂ ಅತ್ಯಂತ ಭ್ರಷ್ಟಾಚಾರ ನಡೆಸಲು ಫಲವತ್ತಾದ ಭೂಮಿಯಾಗಿವೆ ಎಂದು ಮೌಖಿಕವಾಗಿ ನುಡಿದರು.

ನಮ್ಮ ಜನರು ನೆಟ್ಟಗಿರುವುದಿಲ್ಲ. ಲಂಚಕೋರರು ಎಂಬುದು ಬ್ರಿಟಿಷರಿಗೆ ಗೊತ್ತಿತ್ತು. ಹೀಗಾಗಿ ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ 1947ರಲ್ಲಿ ಬ್ರಿಟಿಷರು ಭ್ರಷ್ಟಾಚಾರ ನಿಯಂತ್ರಣ (ಪಿ ಸಿ) ಕಾಯಿದೆ ಮಾಡಿದ್ದರು. ಪಿ ಸಿ ಕಾಯಿದೆ ಹೇಗೆ ಕೆಲಸ ಮಾಡಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ನಮಗೆ ನಾಲ್ಕು ದಶಕಗಳೇ ಬೇಕಾಯಿತು. 1988ರಲ್ಲಿ ಇದಕ್ಕೆ ತಿದ್ದುಪಡಿ ಮಾಡಬೇಕು ಎಂದು ನಮಗನ್ನಿಸಿದೆ ಎಂದು ಹೇಳಿದರು.

ನನ್ನಷ್ಟು ಲಿಬರಲ್‌ ಯಾರೂ ಇಲ್ಲ..

ಜಾಮೀನು ಮನವಿ ಪರಿಗಣಿಸಬೇಕು ಎಂದು ವಕೀಲ ಚಂದ್ರಮೌಳಿ ಅವರು ಕೋರಿಕೊಂಡಾಗ “ಸಿಆರ್‌ಪಿಸಿ ಸೆಕ್ಷನ್‌ 438ರ ಅಡಿ ಅರ್ಹತೆ ಆಧಾರದಲ್ಲಿ ಪ್ರಕರಣವನ್ನು ನಿರ್ಣಯಿಸುವಲ್ಲಿ ನನ್ನಷ್ಟು ಲಿಬರಲ್‌ ಇನ್ಯಾರೂ ಇಲ್ಲ. ಬಿಡಿಎ ಎಂದುಕೊಂಡು ಬೆಂಗಳೂರನ್ನೇ ಮಾರುವುದಕ್ಕೆ ಮುಂದಾದವರಿಗೆ ಜಾಮೀನು ನೀಡಬೇಕಾ? ಎಂದರು.