Karnataka High Court, Police 
ಸುದ್ದಿಗಳು

ಎಫ್‌ಐಆರ್‌ ಪ್ರತಿ ಒದಗಿಸದ ಪೊಲೀಸರ ವಿರುದ್ಧ ಇಲಾಖಾ ವಿಚಾರಣೆ: ಠಾಣಾಧಿಕಾರಿಗಳಿಗೆ ಹೈಕೋರ್ಟ್‌ ಗಂಭೀರ ಎಚ್ಚರಿಕೆ

ಎಫ್ಐಆರ್ ಆನ್‌ಲೈನ್‌ ಲಭ್ಯವಿದೆ ಎಂಬ ಕಾರಣ ನೀಡಿ ತನ್ನ ಜವಾಬ್ದಾರಿಯಿದ ಅಧಿಕಾರಿಗಳು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಎಫ್ಐಆರ್ಗೆ ಸಂಬಂಧಿಸಿದ ಅಗತ್ಯ ವಿವರ ನಿರಾಕರಿಸುವುದು ಮಾಹಿತಿ ಪಡೆಯುವ ಹಕ್ಕು ಉಲ್ಲಂಘಿಸಿದಂತಾಗಲಿದೆ ಎಂದಿರುವ ಹೈಕೋರ್ಟ್‌.

Bar & Bench

“ಎಫ್ಐಆರ್ ಪ್ರತಿ ನೀಡದಿರುವ ಪೊಲೀಸ್ ಅಧಿಕಾರಿಗಳ ನಡೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಅಂತಹ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಅನುಮತಿಸಲಾಗುವುದು” ಎಂದು ಎಚ್ಚರಿಸಿರುವ ಕರ್ನಾಟಕ ಹೈಕೋರ್ಟ್, ಸೇನಾ ಪಡೆಗಳಿಗೆ ಡ್ರೋನ್ ಪೂರೈಸಲು ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ತೊಡಗಿರುವ ಸಂಸ್ಥೆ ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದುಪಡಿಸಿದೆ.

ಖಾಸಗಿ ಜಮೀನಿನಲ್ಲಿ ಡ್ರೋನ್ ಬಿದ್ದ ಆರೋಪದಲ್ಲಿ ಜಮೀನಿನ  ಅತಿಕ್ರಮ ಪ್ರವೇಶ ಮತ್ತು ಮಾಲೀಕರಿಗೆ ಅಪಾಯ ಉಂಟು ಮಾಡಿದ ಆರೋಪದಲ್ಲಿ ತಮ್ಮ ವಿರುದ್ಧ ದೊಡ್ಡಬಳ್ಳಾಪುರ ಗ್ರಾಮೀಣ ಪೊಲೀಸರು ದಾಖಲಿಸಿದ್ದ ಎಫ್ಐಆರ್ ರದ್ದುಕೋರಿ ನ್ಯೂ ಸ್ಪೇಸ್ ರಿಸರ್ಚ್ ಅಂಡ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

Justice M Nagaprasanna

“ಪ್ರಕರಣದಲ್ಲಿನ ದಾಖಲೆಗಳು ಮತ್ತು ಅರ್ಜಿದಾರರ ವಾದ ಆಲಿಸಿದ ಪೀಠವು ಪೊಲೀಸರು ಅರ್ಜಿದಾರರಿಗೆ ಎಫ್‌ಐಆರ್ ಪ್ರತಿ ನೀಡಲು ನಿರಾಕರಿಸಿರುವ ಆರೋಪವಿದೆ. ಆದರೆ, ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಆರೋಪಿತರು ಎಫ್ಐಆರ್ ದಾಖಲಾದ ಬಳಿಕ ತಕ್ಷಣ ಅದರ ಪ್ರತಿ ಪಡೆಯುವ ಹಕ್ಕು ಹೊಂದಿರುತ್ತಾರೆ. ಎಫ್ಐಆರ್ ಆನ್‌ಲೈನ್‌ ಲಭ್ಯವಿದೆ ಎಂಬ ಕಾರಣ ನೀಡಿ ತನ್ನ ಜವಾಬ್ದಾರಿಯಿದ ಅಧಿಕಾರಿಗಳು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಎಫ್ಐಆರ್ಗೆ ಸಂಬಂಧಿಸಿದ ಅಗತ್ಯ ವಿವರ ನಿರಾಕರಿಸುವುದು ಮಾಹಿತಿ ಪಡೆಯುವ ಹಕ್ಕು ಉಲ್ಲಂಘಿಸಿದಂತಾಗಲಿದೆ. ನ್ಯಾಯಾಲಯ ಕಲ್ಪಿಸಿರುವ ಪಾರದರ್ಶಕ ಉದ್ದೇಶವನ್ನೇ ದುರ್ಬಲಗೊಳಿಸಿದಂತಾಗಲಿದೆ” ಎಂದು ಪೀಠ ತಿಳಿಸಿದೆ.

ಎಫ್ಐಆರ್ ಪ್ರತಿ ನೀಡದೆ ನ್ಯಾಯಾಲಯದ ಆದೇಶ ಉಲ್ಲಂಘಿಸುವ ಅಧಿಕಾರಿಗಳ ಕ್ರಮವನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಠಾಣಾಧಿಕಾರಿ, ಠಾಣೆ ಉಸ್ತುವಾರಿ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸುವುದಕ್ಕೆ ಅವಕಾಶವಿರಲಿದೆ ಎಂದು ಪೀಠ ಎಚ್ಚರಿಕೆ ನೀಡಿದೆ.

“ಅರ್ಜಿದಾರ ಸಂಸ್ಥೆ ವಿರುದ್ಧ ಬಿಎನ್ಎಸ್ ಸೆಕ್ಷನ್‌ 329(3)(ಅತಿಕ್ರಮ ಪ್ರವೇಶ) ರ ಅಡಿ ಪ್ರಕರಣ ದಾಖಲಿಸಿದ್ದು, ಅದರ ಪ್ರಕಾರ ಯಾವುದೇ ಆಸ್ತಿಯ ಮಾಲೀಕರನ್ನು ಬೆದರಿಸುವುದು, ಅವಮಾನಿಸುವುದು ಮತ್ತು ಕಿರಿಕಿರಿ ಉಂಟು ಮಾಡುವ ಉದ್ದೇಶದಿಂದ ಆಸ್ತಿ ಪ್ರವೇಶಿಸಿರಬೇಕು. ಆದರೆ, ಅರ್ಜಿದಾರರ ಸಂಸ್ಥೆ ವಿರುದ್ಧದ ಆರೋಪದಲ್ಲಿ ಯಾವುದೇ ವ್ಯಕ್ತಿ ಭಾಗಿಯಾಗಿಲ್ಲ. ಬದಲಿಗೆ ಡ್ರೋನ್ ಬಿದ್ದ ಮಾತ್ರಕ್ಕೆ ಅತಿಕ್ರಮ ಪ್ರವೇಶ ಮಾಡಿದಂತಾಗುವುದಿಲ್ಲ” ಎಂದು ಪೀಠ ಹೇಳಿದೆ.

ಬಿಎನ್ಎಸ್ ಸೆಕ್ಷನ್ 125 ಅಡಿಯಲ್ಲಿ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯ ಉಂಟು ಮಾಡುವ ಆರೋಪ ಮಾಡಲಾಗಿದೆ. ಆದರೆ, ಈ ಪ್ರಕರಣದಲ್ಲಿ ಮಾನವನ ಕೃತ್ಯದ ಕುರಿತ ಆರೋಪವಿಲ್ಲ. ಪ್ರಕರಣದಲ್ಲಿ ಯಾವುದೇ ಸಂತ್ರಸ್ತರೂ ಇಲ್ಲ. ಅಪರಾಧಿಕ ಮನಸ್ಸು ಇಲ್ಲ. ಪ್ರಕರಣದಲ್ಲಿ ದೈಹಿಕ, ಆಸ್ತಿ ಹಾನಿಯಿಂದ ನೊಂದವರಿಲ್ಲ. ಆದ್ದರಿಂದ, ಯಾವುದೇ ಪ್ರಾಥಮಿಕ ಆಧಾರವಿಲ್ಲದೆ ಅರ್ಜಿದಾರರ ವಿರುದ್ಧ ತನಿಖೆ ಮುಂದುವರೆಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗಲಿದೆ ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ: ನ್ಯೂ ಸ್ಪೇಸ್ ರಿಸರ್ಚ್ ಅಂಡ್ ಟೆಕ್ನಾಲಜಿ ಸಂಸ್ಥೆಯು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ 48 ಎಕರೆ ಜಮೀನು ಗುತ್ತಿಗೆ ಪಡೆದಿದ್ದು, ಅಲ್ಲಿ ಕಳೆದ ಐದು ವರ್ಷಗಳಿಂದ ಡ್ರೋನ್‌ಗಳ ಪರೀಕ್ಷೆ, ಸಂಶೋಧನಾ ಚಟುವಟಿಕೆ ನಡೆಸುತ್ತಿದೆ. ಈ ಸಂಸ್ಥೆ ಮಾನವ ರಹಿತ ವೈಮಾನಿಕ ವ್ಯವಸ್ಥೆ ಮತ್ತು ವೈಮಾನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ನಿರತವಾಗಿದೆ. ಇದಕ್ಕಾಗಿ ನಾಗರಿಕ ವಿಮಾನಯಾನ ನಿರ್ದೇಶನಾಲಯ ನೀಡುವ ಪ್ರಮಾಣ ಪ್ರತ್ರ ಹೊಂದಿದೆ. ಅಲ್ಲದೆ, ಕೈಗಾರಿಕಾ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ ನೀಡುವ ಕೈಗಾರಿಕಾ/ರಕ್ಷಣಾ ಪರವಾನಿಗೆಯನ್ನು ಹೊಂದಿದೆ. ಆದರೆ, ಜನವರಿ 29ರಂದು ನಿಯಮಿತ ಪರೀಕ್ಷೆಯ ಸಮಯದಲ್ಲಿ ಸುಮಾರು ಏಳು ಕಿಲೋ ಗ್ರಾಂಗಳ ತೂಕದ ಹಗುರವಾದ ಥರ್ಮೋಕೋಲ್ ಸಂಶೋಧನಾ ಡ್ರೋನ್ ನಲ್ಲಿ ಬ್ಯಾಟರಿ ಸಮಸ್ಯೆ ಕಂಡುಬಂದು ದೊಡ್ಡಬಳ್ಳಾಪುರ ಪಾಲಜೋಗನ ಹಳ್ಳಿಯಲ್ಲಿ ಖಾಸಗಿ ಜಮೀನಲ್ಲಿ ಬಿದ್ದಿತ್ತು.

ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸ್ ಸಿಬ್ಬಂದಿಗೆ ಸ್ಥಳೀಯರು ಕರೆ ಮಾಡಿ ತಿಳಿಸಿದ್ದು, ಬಳಿಕ ಸ್ಥಳಕ್ಕೆ ಬಂದು ಪೊಲೀಸ್ ಸಿಬ್ಬಂದಿ ಡ್ರೋನ್‌ ವಶಕ್ಕೆ ಪಡೆದು, ಅಪರಿಚಿತರ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಅತಿಕ್ರಮಣ ಆರೋಪದಲ್ಲಿ ಸ್ವಯಂಪ್ರೇರಿತ ಎಫ್ಐಆರ್ ದಾಖಲಿಸಿಕೊಂಡಿದ್ದರು.

NewSpace Research & Technologies Pvt Ltd Vs State of Karnataka.pdf
Preview