B Z Zameer Ahmed Khan, T J Abraham & Karnataka HC 
ಸುದ್ದಿಗಳು

'ರಾಜಕೀಯ ತೀರ್ಪು' ಎಂದಿದ್ದ ಸಚಿವ ಜಮೀರ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆಗೆ ಎಜಿ ಅನುಮತಿ ಕೋರಿದ ಅಬ್ರಹಾಂ

ಜಮೀರ್‌ ಅವರು ತೀರ್ಪು ನೀಡಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಪ್ರಾಮಾಣಿಕತೆಗೆ ಮಸಿ ಬಳಿಯುವ ಕೆಲಸ ಮಾಡಿದ್ದು, ಸಾರ್ವಜನಿಕರ ದೃಷ್ಟಿಯಲ್ಲಿ ಕರ್ನಾಟಕ ಹೈಕೋರ್ಟ್‌ ಅನ್ನು ನಕಾರಾತ್ಮಕವಾಗಿ ಬಿಂಬಿಸುವ ಯತ್ನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

Bar & Bench

ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತನಿಖೆಗೆ ಅನುಮತಿಸಿದ್ದ ರಾಜ್ಯಪಾಲರ ಕ್ರಮವನ್ನು ಎತ್ತಿ ಹಿಡಿದ್ದ ಕರ್ನಾಟಕ ಹೈಕೋರ್ಟ್‌ ಆದೇಶವನ್ನು ‘ರಾಜಕೀಯ ತೀರ್ಪು’ ಎಂದು ವ್ಯಾಖ್ಯಾನಿಸಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸುವ ಮೂಲಕ ವಸತಿ ಸಚಿವ ಬಿ ಝಡ್‌ ಜಮೀರ್‌ ಅಹ್ಮದ್‌ ಖಾನ್ ನ್ಯಾಯಾಂಗ ನಿಂದನೆ ಎಸಗಿದ್ದು, ಅವರ ವಿರುದ್ಧ‌ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಅನುಮತಿಸುವಂತೆ ಕೋರಿ ರಾಜ್ಯ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರಿಗೆ ಸಾಮಾಜಿಕ ಕಾರ್ಯಕರ್ತ ಟಿ ಜಿ ಅಬ್ರಹಾಂ ಪತ್ರ ಬರೆದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ಬಳಗದಲ್ಲಿ ಗುರುತಿಸಲ್ಪಡುವ ಜಮೀರ್‌ ಅಹ್ಮದ್‌ ಖಾನ್‌ ವಿರುದ್ಧ ಕ್ರಿಮಿನಲ್‌ ಪ್ರಕ್ರಿಯೆ ಆರಂಭಿಸಲು ನ್ಯಾಯಾಂಗ ನಿಂದನೆ ಕಾಯಿದೆ 1971 ಸೆಕ್ಷನ್‌ 15(1)(ಬಿ) ಅಡಿ ಒಪ್ಪಿಗೆ ನೀಡುವಂತೆ ಅಡ್ವೊಕೇಟ್‌ ಜನರಲ್‌ಗೆ ಮೂಲ ದಾವೆಯಲ್ಲಿ ಪ್ರತಿವಾದಿ/ದೂರುದಾರರೂ ಆಗಿರುವ ಅಬ್ರಹಾಂ ಮನವಿ ಮಾಡಿದ್ದಾರೆ.

ಸೆಪ್ಟೆಂಬರ್‌ 26ರಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸುವಾಗ ಜಮೀರ್‌ ಅವರು ಹೈಕೋರ್ಟ್‌ ತೀರ್ಪನ್ನು 'ಪೊಲಿಟಿಕಲ್‌ ಜಡ್ಜ್‌ಮೆಂಟ್‌' (ರಾಜಕೀಯ ತೀರ್ಪು) ಎಂದು ವ್ಯಾಖ್ಯಾನಿಸಿದ್ದಾರೆ. ಆ ಮೂಲಕ ಉದ್ದೇಶಪೂರ್ವಕವಾಗಿ ಜಮೀರ್‌ ಅವರು ನ್ಯಾಯಾಂಗದ ಘನತೆಗೆ ಚ್ಯುತಿ ಉಂಟು ಮಾಡಿದ್ದಾರೆ. ಅಲ್ಲದೇ, ಸಾರ್ವಜನಿಕರ ದೃಷ್ಟಿಯಲ್ಲಿ ನ್ಯಾಯಾಂಗದ ಘನತೆಗೆ ಧಕ್ಕೆ ಉಂಟು ಮಾಡಿದ್ದಾರೆ. ಈ ಸಂಬಂಧ ಜಮೀರ್‌ ಅವರು ಮಾಧ್ಯಮಗಳಿಗೆ ನೀಡಿರುವ ಪ್ರತಿಕ್ರಿಯೆಯನ್ನು ಸಿ ಡಿಯಲ್ಲಿ ಅಡಕಗೊಳಿಸಲಾಗಿದೆ ಎಂದು ಅಬ್ರಹಾಂ ಪತ್ರದಲ್ಲಿ ವಿವರಿಸಿದ್ದಾರೆ.

ಜಮೀರ್‌ ಅವರು ತೀರ್ಪು ನೀಡಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಪ್ರಾಮಾಣಿಕತೆಗೆ ಮಸಿ ಬಳಿಯುವ ಕೆಲಸ ಮಾಡಿದ್ದು, ಸಾರ್ವಜನಿಕರ ದೃಷ್ಟಿಯಲ್ಲಿ ಕರ್ನಾಟಕ ಹೈಕೋರ್ಟ್‌ ಅನ್ನು ನಕಾರಾತ್ಮಕವಾಗಿ ಬಿಂಬಿಸುವ ಯತ್ನ ಮಾಡಿದ್ದಾರೆ. ನ್ಯಾಯಾಂಗ ನಿಂದನೆ ಕಾಯಿದೆಯ ಉದ್ದೇಶ ನ್ಯಾಯದಾನ ಮಾಡುವ ನ್ಯಾಯಾಲಯದ ಘನತೆಯನ್ನು ಎತ್ತಿ ಹಿಡಿಯುವುದಷ್ಟೇ ಅಲ್ಲ, ತೀರ್ಪು ನೀಡುವ ನ್ಯಾಯಮೂರ್ತಿಗಳ ಪ್ರಾಮಾಣಿಕತೆ, ಪಾವಿತ್ರ್ಯತೆ ಎತ್ತಿ ಹಿಡಿಯುವುದೂ ಆಗಿದೆ ಎಂದೂ ಪತ್ರದಲ್ಲಿ ವಿವರಿಸಿದ್ದಾರೆ.

Justice M Nagaprasanna

ತೀರ್ಪು ನೀಡಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ವಿರುದ್ಧ ಗಂಭೀರ ಆರೋಪ ಮಾಡಿ, ಆ ತೀರ್ಪನ್ನು ರಾಜಕೀಯ ತೀರ್ಪು ಎಂದಿರುವುದು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಲು ಸೂಕ್ತವಾಗಿದೆ ಎಂದು ವಿವರಿಸಲಾಗಿದೆ. ಈ ನೆಲೆಯಲ್ಲಿ ಜಮೀರ್‌ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಅನುಮತಿಸುವಂತೆ ಅಡ್ವೊಕೇಟ್‌ ಜನರಲ್‌ಗೆ ಕೋರಲಾಗಿದೆ.

ರಾಜ್ಯಮಟ್ಟದಲ್ಲಿ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಅಡ್ವೊಕೇಟ್‌ ಜನರಲ್‌ ಅನುಮತಿ ಪಡೆಯುವುದು ಮತ್ತು ರಾಷ್ಟ್ರಮಟ್ಟದಲ್ಲಿ ಅಟಾರ್ನಿ ಜನರಲ್‌ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.