ಬಿಹಾರ, ಕೇರಳ, ತಮಿಳುನಾಡು ಹಾಗೂ ಪಶ್ಚಿಮ ಬಂಗಾಳಗಳಲ್ಲಿ ಕೈಗೊಳ್ಳಲಾಗುತ್ತಿರುವ ಮತದಾರರ ಪಟ್ಟಿ ಆಮೂಲಾಗ್ರ ಪರಿಷ್ಕರಣೆ (ಎಸ್‌ಐಆರ್) ಬಗ್ಗೆ ರಾಜಕೀಯ ಪಕ್ಷಗಳು ಭಯ ಸೃಷ್ಟಿಸುತ್ತಿವೆ ಎಂದು ಭಾರತದ ಚುನಾವಣಾ ಆಯೋಗ (ಇಸಿಐ) ಬುಧವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಎಸ್‌ಐಆರ್ ಸಿಂಧುತ್ವ ಪ್ರಶ್ನಿಸಿ, ಮತ್ತು ಪರಿಷ್ಕರಣೆ ಮುಂದೂಡುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ವಿಚಾರಣೆ ನಡೆಸುತ್ತಿದ್ದ ವೇಳೆ ಇಸಿಐ ರಾಜಕೀಯ ಪಕ್ಷಗಳತ್ತ ಬೆರಳು ಮಾಡಿತು.
ಎಸ್ಐಆರ್ ಮುಂದೂಡುವಂತೆ ಕೇರಳ ಸರ್ಕಾರ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಡಿಸೆಂಬರ್ 1ರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಇಸಿಐ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ (ಎಸ್ಇಸಿ) ನ್ಯಾಯಾಲಯ ಸೂಚಿಸಿದ್ದು ಈ ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 2 ರಂದು ನಡೆಯಲಿದೆ.
ಇದೇ ವೇಳೆ ಎಸ್‌ಐಆರ್ ಸಿಂಧುತ್ವ ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ಡಿಸೆಂಬರ್ 4ರಂದು ಹಾಗೂ ಪ. ಬಂಗಾಳದ ಮನವಿಯನ್ನು ಡಿಸೆಂಬರ್ 9ರಂದು ವಿಚಾರಣೆ ನಡೆಸಲಿದೆ.
ಸ್ಥಳೀಯ ಸಂಸ್ಥೆ ಚುನಾವಣೆ ಮುಗಿಯವವರಗೆ ಎಸ್‌ಐಆರ್ ಪ್ರಕ್ರಿಯೆ ಮುಂದೂಡಬೇಕೆಂದು ಕೋರಿ ಕೇರಳ ಸರ್ಕಾರ ಕೆಲ ದಿನಗಳ ಹಿಂದೆ ಅರ್ಜಿ ಸಲ್ಲಿಸಿತ್ತು. ರಾಜ್ಯ ವಿಧಾನಸಭೆ ಚುನಾವಣೆ ನಡೆಯುವುದು 2026ರ ಮೇ ತಿಂಗಳಿನಲ್ಲಾದ್ದರಿಂದ ಎಸ್‌ಐಆರ್ ತುರ್ತಾಗಿ ನಡೆಸುವ ಅಗತ್ಯವಿಲ್ಲ. ಕೇರಳದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ನಡೆಯುವಾಗಲೇ ಎಸ್ಐಆರ್ ನಡೆಸಿದರೆ ಆಡಳಿತಾತ್ಮಕ ಬಿಕ್ಕಟ್ಟು ಉಂಟಾಗುತ್ತದೆ. ತಾನು ಇಡೀ ಎಸ್‌ಐಆರ್ ಪ್ರಕ್ರಿಯೆಯನ್ನು ಪ್ರತ್ಯೇಕವಾಗಿ ಪ್ರಶ್ನಿಸಬಹುದಾದರೂ ಈ ಅರ್ಜಿ ಎಸ್‌ಐಆರ್ ಪ್ರಕ್ರಿಯೆಯನ್ನು ಮುಂದೂಡುವಂತೆ ಮಾತ್ರ ಕೇಳುತ್ತಿದೆ ಎಂದು ಅದು ಹೇಳಿತ್ತು.
ಇಡೀ ಎಸ್‌ಐಆರ್ ಜಾರಿಗೆ ತರುವುದನ್ನೇ ಪ್ರಶ್ನಿಸಿ ಸಿಪಿಎಂ, ಸಿಪಿಐ ಹಾಗೂ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನಾಯಕ ಪಿ ಕೆ ಕುನ್ಹಾಲಿಕುಟ್ಟಿ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಅರ್ಜಿಗಳ ಕುರಿತು ನವೆಂಬರ್ 21ರಂದು ನ್ಯಾಯಾಲಯ ನೋಟಿಸ್ ಜಾರಿ ಮಾಡಿತ್ತು.
ಇಸಿಐ ಕಳೆದ ಜೂನ್‌ನಲ್ಲಿ ವಿಶೇಷ ಆಮೂಲಾಗ್ರ ಪರಿಷ್ಕರಣೆಗೆ ನಿರ್ದೇಶಿಸಿತ್ತು. ಆದೇಶ ಪ್ರಶ್ನಿಸಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ನ್ಯಾಷನಲ್ ಫೆಡರೇಶನ್ ಫಾರ್ ಇಂಡಿಯನ್ ವುಮೆನ್ ಸೇರಿದಂತೆ ಹಲವು ವ್ಯಕ್ತಿಗಳು ಸಂಘ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಎದುರು ನೋಡುತ್ತಿದ್ದವು.
ಆದರೂ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡದ ಹಿನ್ನೆಲೆಯಲ್ಲಿ ಬಿಹಾರದಲ್ಲಿ ಎಸ್‌ಐಆರ್‌ಗೆ ಚಾಲನೆ ದೊರೆತಿತ್ತು. ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇದ್ದರೂ ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್ ನಡೆಸುವಂತೆ ಇಸಿಐ ಅಕ್ಟೋಬರ್ 27, 2025ರಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ತಮಿಳುನಾಡಿನ ಡಿಎಂಕೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಬಿಹಾರದಲ್ಲಿ ಎಸ್‌ಐಆರ್ ಪೂರ್ಣಗೊಂಡಿದೆ.