ಭಾರತೀಯ ಪ್ರಜೆಯಾಗುವ ಮೂರು ವರ್ಷಗಳ ಮೊದಲು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿತ್ತು ಎಂದು ಆರೋಪಿಸಿ ತಮ್ಮ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲು ಕೋರಿರುವ ಅರ್ಜಿಯು "ಸಂಪೂರ್ಣವಾಗಿ ತಪ್ಪು ಗ್ರಹಿಕೆಯಿಂದ ಕೂಡಿದ್ದು, ಕ್ಷುಲ್ಲಕವೂ, ರಾಜಕೀಯ ಪ್ರೇರಿತವೂ ಆಗಿದೆ ಹಾಗೂ ಕಾನೂನು ಪ್ರಕ್ರಿಯೆಯ ದುರುಪಯೋಗವಾಗಿದೆ" ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹೇಳಿದ್ದಾರೆ.
ಪೌರತ್ವ ಪಡೆಯುವುದಕ್ಕೂ ಮುನ್ನವೇ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಲಾಗಿದೆ ಎನ್ನುವ ಆರೋಪದ ಸಂಬಂಧ ತಮ್ಮ ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರಿ ವಿಕಾಸ್ ತ್ರಿಪಾಠಿ ಎಂಬುವರು ರೌಸ್ ಅವೆನ್ಯೂ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿ ಸಂಬಂಧ ತಾವು ಸಲ್ಲಿಸಿರುವ ಪ್ರತಿಕ್ರಿಯೆಯಲಿ ಸೋನಿಯಾ ಅವರು ಮೇಲಿನಂತೆ ಹೇಳಿದ್ದಾರೆ.
ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಶಾಲ್ ಗೋಗ್ನೆ ಅವರು ಇಂದು ಪ್ರಕರಣದ ವಿಚಾರಣೆ ನಡೆಸಿದರು. ಪ್ರಕರಣದ ಸಂಬಂಧ ಸೋನಿಯಾ ಅವರು ದಾಖಲಿಸಿರುವ ಪ್ರತಿಕ್ರಿಯೆಯನ್ನು ಗಮನಿಸಿದ ನಂತರ, ನ್ಯಾಯಾಧೀಶರು ಫೆಬ್ರವರಿ 21 ರಂದು ವಾದಗಳ ಮಂಡನೆಗಾಗಿ ಅರ್ಜಿಯನ್ನು ಪಟ್ಟಿ ಮಾಡಿದರು.
ತ್ರಿಪಾಠಿ ಅವರು ನೀಡಿದ್ದ ದೂರನ್ನು ಮೊದಲಿಗೆ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ವೈಭವ್ ಚೌರಾಸಿಯಾ ಅವರು ಸೆಪ್ಟೆಂಬರ್ 11, 2025 ರಂದು ವಜಾಗೊಳಿಸಿದ್ದರು. ಆದರೆ, ತ್ರಿಪಾಠಿ ಅವರು ಎಸಿಎಂಎಂ ಆದೇಶದ ವಿರುದ್ಧ ಸೆಷನ್ಸ್ ನ್ಯಾಯಾಲಯದಲ್ಲಿ ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಸೆಷನ್ಸ್ ನ್ಯಾಯಾಲಯವು ಡಿಸೆಂಬರ್ 9, 2025ರಂದು ಸೋನಿಯಾ ಅವರಿಗೆ ನೋಟಿಸ್ ನೀಡಿತ್ತು.
1983ರ ಏಪ್ರಿಲ್‌ನಲ್ಲಿ ಸೋನಿಯಾ ಅವರು ಭಾರತದ ಪೌರತ್ವವನ್ನು ಪಡೆದಿದ್ದಾರಾದರೂ ಅದಕ್ಕೂ ಮುನ್ನವೇ 1980ರಲ್ಲಿ ನವದೆಹಲಿ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅವರ ಹೆಸರನ್ನು ಸೇರಿಸಲಾಗಿತ್ತು ಎಂಬುದು ತ್ರಿಪಾಠಿ ಅವರ ಆರೋಪವಾಗಿದೆ.
ಸೋನಿಯಾ ಅವರ ಹೆಸರನ್ನು 1980ರಲ್ಲಿ ಮತದಾರರ ಪಟ್ಟಿಯಲ್ಲಿ ಸೇರಿಸಲಾಯಿತು, 1982ರಲ್ಲಿ ಅದನ್ನು ತೆಗೆದುಹಾಕಲಾಯಿತು. ನಂತರ 1983 ರಲ್ಲಿ ಮತ್ತೆ ಸೇರಿಸಲಾಯಿತು ಎಂದು ಅವರು ತಮ್ಮ ದೂರಿನಲ್ಲಿ ವಿವರಿಸಿದ್ದರು.
ಈ ಆರೋಪಗಳ ಕುರಿತು ಸಲ್ಲಿಸಿರುವ ತಮ್ಮ ಪ್ರತಿಕ್ರಿಯೆಯಲ್ಲಿ ಸೋನಿಯಾ ಅವರು ತಮ್ಮ ವಿರುದ್ಧದ ದೂರು ಊಹಾಪೋಹಗಳಿಂದ ಕೂಡಿದ್ದು, ಮಾಧ್ಯಮ ವರದಿಗಳು ಮತ್ತು "ಕಾಲ್ಪನಿಕ ಅರ್ಜಿಗಳ" ಮೇಲೆ ಅವಲಂಬಿತವಾಗಿದೆ. ಇದಕ್ಕೆ ಯಾವುದೇ ಮೂಲಭೂತ ದಾಖಲೆಗಳನ್ನು ಪುರಾವೆಯಾಗಿ ನೀಡಿಲ್ಲ ಎಂದು ವಿವರಿಸಿದ್ದಾರೆ.
ಮುಂದುವರೆದು, "ದೂರುದಾರರು ತಮ್ಮದೇ ಆದ ಕಲ್ಪನೆ, ಅಭಿಪ್ರಾಯ ಅಥವಾ ಅನಗತ್ಯ ಊಹೆಗಳ ಆಧಾರದ ಮೇಲೆ ಅಜಾಗರೂಕವಾಗಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ" ಎಂದಿದ್ದಾರೆ. ಆರೋಪಿಸಲಾದ ಮತದಾರರ ನೋಂದಣಿ ಅರ್ಜಿಯನ್ನಾಗಲಿ, ಪೌರತ್ವ ಸಂಬಂಧಿತ ದಾಖಲೆಗಳನ್ನಾಗಲಿ ಅಥವಾ ತಿರುಚಲಾಗಿದೆ ಎನ್ನಲಾದ ನಕಲಿ ದಾಖಲೆಗಳ ಪ್ರತಿಗಳನ್ನಾಗಲಿ ಅರ್ಜಿದಾರರು ತಮ್ಮ ಅರ್ಜಿಯೊಂದಿಗೆ ಸಲ್ಲಿಸಿಲ್ಲ. ಅಂತಹ ಆಕ್ಷೇಪಿತ ದಾಖಲೆಗಳನ್ನು ಕಾನೂನುಬದ್ಧವಾಗಿ ಪಡೆಯುವ ಯಾವುದೇ ಪ್ರಯತ್ನವನ್ನು ಮಾಡಿಲ್ಲ ಎಂದು ಸೋನಿಯಾ ತಮ್ಮ ಅರ್ಜಿಯಲ್ಲಿ ವಾದಿಸಿದ್ದಾರೆ.
ಈ ಆರೋಪಗಳು 1980–83ರ ಘಟನೆಗಳಿಗೆ ಸಂಬಂಧಿಸಿವೆ. ದಶಕಗಳ ಹಿಂದೆ ಕೇಳಿಬಂದಿದ್ದ ವಿವಾದಗಳನ್ನು ಆಧರಿಸಿವೆ ಎಂದು ಸೋನಿಯಾ ಹೇಳಿದ್ದಾರೆ. 40 ವರ್ಷಗಳಿಗೂ ಹೆಚ್ಚು ಕಾಲದ ನಂತರ ಅಂತಹ ಹಕ್ಕುಗಳನ್ನು ಎತ್ತುವುದರಿಂದ ವಿಶ್ವಾಸಾರ್ಹ ಪುರಾವೆಗಳನ್ನು ಒದಗಿಸುವುದು ಅಸಾಧ್ಯವಾಗುತ್ತದೆ. ಸಂವಿಧಾನದ 21ನೇ ವಿಧಿಯನ್ನು ಉಲ್ಲಂಘಿಸಿ, ದುರುದ್ದೇಶಪೂರಿತ ವಿಚಾರಣೆಗೆ ಎಳೆಸಿದಂತಾಗುತ್ತದೆ ಎಂದು ಸೋನಿಯಾ ತಮ್ಮ ಪ್ರತಿಕ್ರಿಯೆಯಲ್ಲಿ ವಿವರಿಸಿದ್ದಾರೆ.
ಮುಂದುವರೆದು, ಪೌರತ್ವಕ್ಕೆ ಸಂಬಂಧಿಸಿದ ಪ್ರಶ್ನೆಗಳು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಮಾತ್ರ ಬರುತ್ತವೆ, ಆದರೆ ಮತದಾರರ ಪಟ್ಟಿಗೆ ಸಂಬಂಧಿಸಿದ ವಿವಾದಗಳು ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಮಾತ್ರ ಮೀಸಲಾಗಿವೆ ಎಂದು ಅವರು ಹೇಳಿದ್ದಾರೆ.
ಹಾಗಾಗಿ, ಭಾರತೀಯ ದಂಡ ಸಂಹಿತೆ (ಐಪಿಸಿ) ಅಥವಾ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಅಡಿಯಲ್ಲಿ ಅಪರಾಧಗಳೆಂದು ಇವುಗಳನ್ನು ಬಿಂಬಿಸಿ ಸಲ್ಲಿಸಲಾಗುವ ಖಾಸಗಿ ದೂರುಗಳನ್ನು ಕ್ರಿಮಿನಲ್ ನ್ಯಾಯಾಲಯಗಳು ಸ್ವೀಕರಿಸಲು ಸಾಧ್ಯವಿಲ್ಲ. ಹಾಗೆ ಮಾಡುವುದರಿಂದ ಅಧಿಕಾರ ಪ್ರತ್ಯೇಕತೆಯ ಸಿದ್ಧಾಂತ ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ನ್ಯಾಯಾಂಗ ಹಸ್ತಕ್ಷೇಪವನ್ನು ನಿಷೇಧಿಸುವ ಸಂವಿಧಾನದ 329 ನೇ ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ವಾದಿಸಿದ್ದಾರೆ.