ನಿವೃತ್ತಿಯ ಹೊಸ್ತಿಲಿನಲ್ಲಿ ನಿಂತಿರುವ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ ಅವರು ಪರಿಶಿಷ್ಟ ಜಾತಿಗಳಿಗೆ ಕೆನೆಪದರ ತತ್ವವನ್ನು ಅನ್ವಯಿಸುವುದನ್ನು ಬೆಂಬಲಿಸಿದ್ದ 2024ರ ತಮ್ಮ ತೀರ್ಪನ್ನು ಶುಕ್ರವಾರ ಸಮರ್ಥಿಸಿಕೊಂಡರು.
ಸಿಜೆಐ ಗವಾಯಿ ಅವರು ತಮ್ಮ ಅಂತಿಮ ಕೆಲಸದ ದಿನದಂದು ಸುಪ್ರೀಂ ಕೋರ್ಟ್‌ನ ಬಾರ್ ಅಸೋಸಿಯೇಷನ್ (ಎಸ್‌ಸಿಬಿಎ) ಆಯೋಜಿಸಿದ್ದ ವಿದಾಯ ಸಮಾರಂಭದಲ್ಲಿ ಮಾತನಾಡುವ ವೇಳೆ ಈ ವಿಚಾರವನ್ನು ಪ್ರಸ್ತಾಪಿಸಿದರು. 2024ರ ತೀರ್ಪಿಗಾಗಿ ತಮ್ಮ ಸಮುದಾಯದಲ್ಲಿಯೇ ತಾವು ತೀವ್ರತರವಾದ ಟೀಕೆಗಳಿಗೆ ಗುರಿಯಾಗಿದ್ದಾಗಿ ಅವರು ತಿಳಿಸಿದರು.
ನ್ಯಾಯಮೂರ್ತಿಗಳು ತಮ್ಮ ತೀರ್ಪನ್ನು ಸಮರ್ಥಿಸಿಕೊಳ್ಳಬೇಕೆನ್ನುವ ನಿರೀಕ್ಷೆಯಿಲ್ಲದಿದ್ದರೂ, ತಾವು ಇನ್ನು ಮುಂದೆ ಯಾವುದೇ ನ್ಯಾಯಾಂಗ ಕೆಲಸವನ್ನು ನಿರ್ವಹಿಸುವುದಿಲ್ಲವಾದ ಕಾರಣ ತಮ್ಮ ತೀರ್ಪಿನ ಬಗ್ಗೆ ಚರ್ಚಿಸುವುದಾಗಿ ಅವರು ಹೇಳಿದರು.
"ತಾವು (ತೀರ್ಪಿನ ವೇಳೆ) ಉದಾಹರಣೆಯೊಂದನ್ನು ನೀಡುತ್ತಾ, ದೆಹಲಿಯ ಅತ್ಯುತ್ತಮ ಕಾಲೇಜುಗಳಲ್ಲಿ ಒಂದಾದ ಸೇಂಟ್ ಸ್ಟೀಫನ್ಸ್‌ನಲ್ಲಿ ಓದುತ್ತಿರುವ (ಪರಿಶಿಷ್ಟ ಸಮುದಾಯದ) ಒಬ್ಬ ಮುಖ್ಯ ಕಾರ್ಯದರ್ಶಿಯವರ ಮಗನನ್ನು ಗ್ರಾಮ ಪಂಚಾಯತ್ ಅಥವಾ ಜಿಲ್ಲಾ ಪರಿಷತ್ ಶಾಲೆಯಲ್ಲಿ ಓದುತ್ತಿರುವ (ಪರಿಶಿಷ್ಟ ಸಮುದಾಯದ) ಕೃಷಿ ಕಾರ್ಮಿಕರೊಬ್ಬರ ಮಗನೊಂದಿಗೆ ಸ್ಪರ್ಧಿಸುವಂತೆ ಮಾಡಬಹುದೇ ಎಂದು ನಾನು ಕೇಳಿದ್ದೆ. ಸಂವಿಧಾನದ 14ನೇ ವಿಧಿಯು ಸಮಾನತೆಯ ಬಗ್ಗೆ ತಿಳಿಸುತ್ತದೆ. ಆದರೆ ಸಮಾನತೆ ಎಂದರೆ ಎಲ್ಲರಿಗೂ ಸಮನಾದ ಉಪಚಾರ ಎಂದರ್ಥವಲ್ಲ. ಎಲ್ಲರಿಗೂ ಸಮಾನ ಉಪಚಾರವನ್ನು ನೀಡಿದರೆ ಅದು ಅಸಮಾನತೆಯನ್ನು ಕಡಿಮೆ ಮಾಡುವ ಬದಲು ಮತ್ತಷ್ಟು ಅಸಮಾನತೆಗೆ ಕಾರಣವಾಗುತ್ತದೆ ಎಂದು ಡಾ. ಅಂಬೇಡ್ಕರ್ ಹೇಳಿದ್ದರು. ಆದ್ದರಿಂದ ಯಾರು ಹಿಂದುಳಿದಿರುತ್ತಾರೋ ಅವರಿಗೆ ವಿಶೇಷ ಉಪಚಾರ ನೀಡುವುದನ್ನು ಸಮಾನತೆಯ ಪರಿಕಲ್ಪನೆಯು ಬೇಡುತ್ತದೆ" ಎಂದು ವಿವರಿಸಿದರು.
"ಪರಿಶಿಷ್ಟ ವರ್ಗಕ್ಕೆ ಸೇರಿದ ಬುಡಕಟ್ಟು ಪ್ರದೇಶದಲ್ಲಿ ವಾಸಿಸುವ, ಉನ್ನತ ಶಿಕ್ಷಣಕ್ಕೆ ಯಾವುದೇ ಅವಕಾಶವಿಲ್ಲದ ಹುಡುಗನೊಬ್ಬನನ್ನು, ತನ್ನ ತಂದೆಯ ಹುದ್ದೆ ಮತ್ತು ಸಾಧನೆಗಳಿಂದಾಗಿ ಅತ್ಯುತ್ತಮ ಶಾಲೆ ಮತ್ತು ಅತ್ಯುತ್ತಮ ಶಿಕ್ಷಣದ ಲಭ್ಯತೆ ಹೊಂದಿರುವ ನನ್ನ ಮಗನೊಂದಿಗೆ ಸ್ಪರ್ಧಿಸುವಂತೆ ಮಾಡಬಹುದೇ ಎನ್ನುವ ಪ್ರಶ್ನೆಯನ್ನು ನನ್ನನ್ನು ನಾನೇ ಕೇಳಿಕೊಳ್ಳುತ್ತೇನೆ... ಅದು ನಿಜವಾದ ಅರ್ಥದಲ್ಲಿ ಸಮಾನತೆಯೇ ಅಥವಾ ಅದು ಅಸಮಾನತೆಯನ್ನು ವಿಸ್ತರಿಸುತ್ತದೆಯೇ?" ಎಂದು ಅವರು ಪ್ರಶ್ನಿಸಿದರು.
ಪರಿಶಿಷ್ಟ ವರ್ಗಕ್ಕೆ ಸೇರಿದ ಬುಡಕಟ್ಟು ಪ್ರದೇಶದಲ್ಲಿ ವಾಸಿಸುವ, ಉನ್ನತ ಶಿಕ್ಷಣಕ್ಕೆ ಯಾವುದೇ ಅವಕಾಶವಿಲ್ಲದ ಹುಡುಗನೊಬ್ಬನನ್ನು, ತನ್ನ ತಂದೆಯ ಹುದ್ದೆ ಮತ್ತು ಸಾಧನೆಗಳಿಂದಾಗಿ ಅತ್ಯುತ್ತಮ ಶಾಲೆ ಮತ್ತು ಅತ್ಯುತ್ತಮ ಶಿಕ್ಷಣದ ಲಭ್ಯತೆ ಹೊಂದಿರುವ ನನ್ನ ಮಗನೊಂದಿಗೆ ಸ್ಪರ್ಧಿಸುವಂತೆ ಮಾಡಬಹುದೇ ಎನ್ನುವ ಪ್ರಶ್ನೆಯನ್ನು ನನ್ನನ್ನು ನಾನೇ ಕೇಳಿಕೊಳ್ಳುತ್ತೇನೆ...ಸಿಜೆಐ ಬಿ ಆರ್ ಗವಾಯಿ
ದಲಿತ ಸಮುದಾಯದಿಂದ ಬಂದಿರುವ ತಮ್ಮ ಗುಮಾಸ್ತರೊಬ್ಬರು ತಮ್ಮ ತೀರ್ಪನ್ನು ಓದಿದ ನಂತರ ಇನ್ನು ಮುಂದೆ ಪರಿಶಿಷ್ಟ ಜಾತಿಗಳಿಗೆ ಲಭ್ಯವಿರುವ ಮೀಸಲಾತಿಯ ಪ್ರಯೋಜನವನ್ನು ತಾನು ಪಡೆಯದಿರಲು ನಿರ್ಧರಿಸಿರುವುದಾಗಿ ಹೇಳಿದ್ದನ್ನು ಸಹ ಅವರು ವಿವರಿಸಿದರು.
"ಕೆಲವೊಮ್ಮೆ ರಾಜಕೀಯವು ತರ್ಕಕ್ಕಿಂತ ಹೆಚ್ಚು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದರೆ ನಾನು ಆ ತೀರ್ಪನ್ನು ಬರೆದಾಗ ನನಗೆ ಸಂತೋಷವಾಗಿದೆ. ನಾನು ಈ ತೀರ್ಪನ್ನು ಬರೆದ ನಂತರ ಪರಿಶಿಷ್ಟ ಜಾತಿಗೆ ಸೇರಿದ ಮಹಾರಾಷ್ಟ್ರದ ಹಿರಿಯ ಅಧಿಕಾರಿಯೊಬ್ಬರ ಮಗನಾಗಿದ್ದ ನನ್ನ ಸ್ವಂತ ಕಾನೂನು ಗುಮಾಸ್ತರೊಬ್ಬರು, 'ನಾನು ಉತ್ತಮ ಶಿಕ್ಷಣವನ್ನು ಪಡೆಯುತ್ತಿದ್ದರೂ ಪರಿಶಿಷ್ಟ ಜಾತಿಯ ಸವಲತ್ತನ್ನು ಪಡೆಯುತ್ತಿದ್ದುದು ನನ್ನನ್ನು ಕಾಡುತ್ತಿತ್ತು' ಎಂದು ಹೇಳಿದರು. 'ಇನ್ನು ಮುಂದೆ' ತಾನು ಪರಿಶಿಷ್ಟ ಜಾತಿಗೆ ದೊರೆಯುವ ಯಾವುದೇ ಪ್ರಯೋಜನವನ್ನು ಪಡೆಯುವುದಿಲ್ಲ' ಎಂದು ಹೇಳಿದರು. ಹಾಗಾಗಿ, ಆ ಒಬ್ಬ ಹುಡುಗನಿಗೆ ಅರ್ಥವಾಗಿದ್ದನ್ನು ನಮ್ಮ ರಾಜಕಾರಣಿಗಳೇಕೆ ಅರ್ಥಮಾಡಿಕೊಳ್ಳಲು ನಿರಾಕರಿಸುತ್ತಾರೆ ಎನ್ನುವುದಕ್ಕೆ ಕಾರಣಗಳು ಅವರಿಗಷ್ಟೇ ತಿಳಿದಿವೆ," ಎಂದು ಸಿಜೆಐ ಹೇಳಿದರು.
ತಾವು ಸಾಗಿಬಂದ ಹಾದಿಯನ್ನು ಮೆಲುಕು ಹಾಕಿದ ಸಿಜೆಐ ಗವಾಯಿ ತಮ್ಮ ಪೋಷಕರಿಗೆ ಹಾಗೂ ಭಾರತದ ಸಂವಿಧಾನಕ್ಕೆ ಕೃತಜ್ಞತೆ ಸಲ್ಲಿಸಿದರು. ಸಂವಿಧಾನದ ಮೌಲ್ಯಗಳನ್ನು ತಮ್ಮ ತಂದೆ ಆರಂಭದಿಂದಲೂ ತಮ್ಮ ಮನಸ್ಸಿನಲ್ಲಿ ಬೇರೂರಿಸಿದ್ದಾರೆ ಎಂದು ಅವರು ಹೇಳಿದರು.
"ನನ್ನ ಪೋಷಕರು ನನಗೆ ನೀಡಿದ ಮೌಲ್ಯಗಳು ಯಾವಾಗಲೂ ನನ್ನೊಂದಿಗೆ ಉಳಿಯುತ್ತವೆ. ನಾನು ಅವರಿಗೆ ಯಾವಾಗಲೂ ಕೃತಜ್ಞನಾಗಿರುತ್ತೇನೆ" ಎಂದು ಅವರು ಹೇಳಿದರು.
ಸಿಜೆಐ ಗವಾಯಿ ಅವರು ತಾನು 18 ವರ್ಷಗಳ ಕಾಲ ವಕೀಲಿಕೆ ಮಾಡಿದ್ದಾಗಿಯೂ ಮತ್ತು 22 ವರ್ಷ ಮತ್ತು ಆರು ದಿನಗಳ ಕಾಲ ನ್ಯಾಯಾಧೀಶರಾಗಿ ಕೆಲಸ ನಿರ್ವಹಿಸಿದ್ದಾಗಿಯೂ ಮಾಹಿತಿ ಹಂಚಿಕೊಂಡರು. "40 ವರ್ಷಗಳಿಗೂ ಹೆಚ್ಚು ಕಾಲದ ಈ ಪ್ರಯಾಣದಲ್ಲಿ, ನಾನು ಯಾವಾಗಲೂ ಸಂವಿಧಾನದಿಂದ ಪ್ರೇರಿತನಾಗಿದ್ದೇನೆ. ಬಾರ್‌ನ ಸದಸ್ಯರಾಗಿ ನಿಮ್ಮಲ್ಲಿ ಪ್ರತಿಯೊಬ್ಬರೂ ಯಾವಾಗಲೂ ನನ್ನ ಹೃದಯಕ್ಕೆ ಹತ್ತಿರವಾಗಿದ್ದೀರಿ" ಎಂದು ಅವರು ಹೇಳಿದರು.
ತಮ್ಮ ಈವರೆಗಿನ ಪಯಣದಲ್ಲಿ ಯಾವಾಗಲೂ ತೆಗೆದುಕೊಂಡ ಪ್ರಮಾಣವಚನಕ್ಕೆ ಬದ್ಧವಾಗಿರಲು ಪ್ರಯತ್ನಿಸಿದ್ದಾಗಿ ಅವರು ತಿಳಿಸಿದರು.