Criminal Law
Criminal Law 
ಸುದ್ದಿಗಳು

ಆರೋಪಿಯ ಲಿಖಿತ ಒಪ್ಪಿಗೆ ಪಡೆದ ನಂತರವೇ ಸುಳ್ಳುಪತ್ತೆ ಪರೀಕ್ಷೆ ನಡೆಸಬೇಕು: ಕರ್ನಾಟಕ ಹೈಕೋರ್ಟ್

Bar & Bench

ಆರೋಪಿ ವ್ಯಕ್ತಿಯ ಲಿಖಿತ ಒಪ್ಪಿಗೆ ಪಡೆಯದೆ ಸುಳ್ಳುಪತ್ತೆ (ಪಾಲಿಗ್ರಾಫ್) ಪರೀಕ್ಷೆ ನಡೆಸುವಂತಿಲ್ಲ. ಅಂತೆಯೇ ವ್ಯಕ್ತಿಯ ಮೌನ, ಒಪ್ಪಿಗೆಗೆ ಸಮನಾಗಿರುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಹೇಳಿದೆ.

ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ “ಆರೋಪಿಯ ಅಂತಹ ಒಪ್ಪಿಗೆಯನ್ನು ಸಂಶಯಕ್ಕೆ ಆಸ್ಪದವಿಲ್ಲದಂತೆ ವರ್ಗೀಕರಿಸಬೇಕು ಮತ್ತು ಅವರಿಗೆ ತಿಳಿಸಿಯೇ ಪರೀಕ್ಷೆ ನಡೆಸಬೇಕು. ಅಲ್ಲದೆ ನಂತರ ಉಂಟಾಗುವ ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು. ಆರೋಪಿ ವ್ಯಕ್ತಿ ಪಾಲಿಗ್ರಾಫ್‌ ಪರೀಕ್ಷೆಗೆ ಸಮ್ಮತಿಯನ್ನೂ ನೀಡದೆ ಅಸಮ್ಮತಿಯನ್ನೂ ಸೂಚಿಸದೆ ಮೌನವಾಗಿರುತ್ತಾನೆ ಎಂದಾದರೆ ಅದು ಒಪ್ಪಿಗೆ ಎನಿಸಿಕೊಳ್ಳುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

"ಸಂಬಂಧಪಟ್ಟ ವ್ಯಕ್ತಿಯ ಮೌನ ಅಂತಹ ವ್ಯಕ್ತಿಯ ಪರವಾಗಿ ಒಪ್ಪಿಗೆ ನೀಡುವುದಿಲ್ಲ. ಒಬ್ಬ ವ್ಯಕ್ತಿಯು ಪಾಲಿಗ್ರಾಫ್ ಪರೀಕ್ಷೆ ಪ್ರಕ್ರಿಯೆಯನ್ನು ನಿರಾಕರಿಸಿದರೆ, ಅಂತಹ ಯಾವುದೇ ಪಾಲಿಗ್ರಾಫ್ ಪರೀಕ್ಷೆ ಕೈಗೊಳ್ಳುವಂತಿಲ್ಲ. ಒಂದುವೇಳೆ ಕೈಗೊಂಡರೂ ಕೂಡ, ಪರೀಕ್ಷೆ ಫಲಿತಾಂಶ ಅನೂರ್ಜಿತವಾಗಲಿದೆ. ಅದನ್ನು ನ್ಯಾಯಾಲಯ ಪರಿಗಣಿಸಲಾಗುವುದಿಲ್ಲ"ಎಂದು ತೀರ್ಪು ಹೇಳಿದೆ.

2018 ರ ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಪಾರ್ಟಿ ಆಯೋಜಕ ವೀರೇಂದ್ರ ಖನ್ನಾ ಎಂಬುವವರ ವಿರುದ್ಧ ವಿಚಾರಣಾ ನ್ಯಾಯಾಲಯವೊಂದು ಪಾಲಿಗ್ರಾಫ್‌ ಪರೀಕ್ಷೆಗೆ ಒಳಪಡಬೇಕು. ಜೊತೆಗೆ ಸ್ಮಾರ್ಟ್‌ಫೋನ್‌ ಬಯೋಮೆಟ್ರಿಕ್ ಪಾಸ್‌ವರ್ಡ್‌ ಮತ್ತು ಹಾಗೂ ಇಮೇಲ್‌ ಪಾಸ್‌ವರ್ಡ್‌ ನೀಡಿ ಪೊಲೀಸರ ತನಿಖೆಗೆ ಸಹಕರಿಸುವಂತೆ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಖನ್ನಾ ಹೈಕೋರ್ಟ್‌ ಮೊರೆ ಹೋಗಿದ್ದರು.

ಸಂಬಂಧಪಟ್ಟ ನ್ಯಾಯಾಲಯದ ಲಿಖಿತ ಅನುಮತಿಯಿಲ್ಲದೆ, ಆರೋಪಿಗಳ ಸ್ಮಾರ್ಟ್‌ಫೋನ್‌ಗಳು ಅಥವಾ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಂದ ವಶಪಡಿಸಿಕೊಂಡ ಖಾಸಗಿ ಡೇಟಾವನ್ನು ಮೂರನೇ ವ್ಯಕ್ತಿಗೆ ಬಹಿರಂಗಪಡಿಸಲು ತನಿಖಾಧಿಕಾರಿಗೆ ಯಾವುದೇ ಹಕ್ಕಿಲ್ಲ ಎನ್ನುವ ಮಹತ್ವದ ತೀರ್ಪನ್ನು ಸಹ ನ್ಯಾಯಾಲಯ ಇದೇ ಆದೇಶದಲ್ಲಿ ತಿಳಿಸಿತ್ತು.

ಪ್ರಾಸಿಕ್ಯೂಷನ್‌ ಯಾವುದೇ ಅರ್ಜಿ ಸಲ್ಲಿಸದಿದ್ದರೂ ತ್ವರಿತ ನ್ಯಾಯಾಲಯ ಪಾಲಿಗ್ರಾಫ್ ಪರೀಕ್ಷೆಗೆ ನಿರ್ದೇಶನ ನೀಡಿದೆ. ಅಲ್ಲದೆ ಅರ್ಜಿದಾರರಿಗಾಗಲೀ ಅಥವಾ ಅವರ ಪರ ವಕೀಲರಿಗಾಗಲೀ ವಿಚಾರಣೆಗೆ ಅವಕಾಶ ನೀಡಿಲ್ಲ ಮತ್ತು ಪರೀಕ್ಷೆಗೆ ಅವರಿಂದ ಒಪ್ಪಿಗೆಯನ್ನೂ ಪಡೆದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಸೆಲ್ವಿ ಮತ್ತೊಬ್ಬರು ಹಾಗೂ ಕರ್ನಾಟಕ ಸರ್ಕಾರ ಮತ್ತಿತರರ ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿದ್ದ ತೀರ್ಪನ್ನು ಆಧರಿಸಿದ ಹೈಕೋರ್ಟ್‌ ಕೆಳಹಂತದ ನ್ಯಾಯಾಲಯ ನೀಡಿದ್ದ ಆದೇಶವನ್ನು ತಳ್ಳಿಹಾಕಿತು.