ಸುದ್ದಿಗಳು

ಮಠಾಧೀಶರು ಪ್ರವಚನ ನೀಡಬೇಕಷ್ಟೇ: ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ವಿರುದ್ಧ ಹೈಕೋರ್ಟ್‌ ಕಿಡಿನುಡಿ

ಮುಂದಿನ ವರ್ಷದ ಜನವರಿವರೆಗೆ ಧಾರವಾಡ ಪ್ರವೇಶಕ್ಕೆ ನಿರ್ಬಂಧಿಸಿ ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶ ಪ್ರಶ್ನಿಸಿ ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಸಲ್ಲಿಸಿರುವ ಅರ್ಜಿಯ ಆದೇಶವನ್ನು ಹೈಕೋರ್ಟ್‌ ಕಾಯ್ದಿರಿಸಿದೆ.

Bar & Bench

“ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರು ಮಠಾಧೀಶರಾಗಿದ್ದು ಪ್ರವಚನ ನೀಡಬೇಕೆ ವಿನಾ ರಾಜಕೀಯಗೊಳಿಸಬಾರದು” ಎಂದು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಕಟುವಾಗಿ ನುಡಿದಿದೆ.

2026ರ ಜನವರಿವರೆಗೆ ಧಾರವಾಡ ಪ್ರವೇಶಕ್ಕೆ ನಿರ್ಬಂಧಿಸಿ ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶ ಪ್ರಶ್ನಿಸಿ ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

Justice M Nagaprasanna

ಕಾಡಸಿದ್ದೇಶ್ವರ ಸ್ವಾಮೀಜಿ ಪ್ರತಿನಿಧಿಸಿದ್ದ ವಕೀಲ ದಳವಾಯಿ ವೆಂಕಟೇಶ್‌ ಅವರು “ಧಾರವಾಡದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ನವೆಂಬರ್‌ 7ರಂದು ಮುಗಿದಿದೆ. ಬೀದರ್‌ನಲ್ಲಿ ನಡೆದಿದ್ದ ಬಸವ ಸಮಿತಿ ಕಾರ್ಯಕ್ರಮದಲ್ಲಿ ಹಿಂದುತ್ವ ಮತ್ತು ಬಸವತತ್ವ ಬೇರೆ ಬೇರೆ ಎಂದು ಹೇಳಲಾಗಿದ್ದು, ಲಕ್ಷ್ಮಿ ದೇವಿಯನ್ನು ಜೂಲಿ ಲಕ್ಷ್ಮಿ ಇತ್ಯಾದಿ ಎಂದು ಕರೆದಿದ್ದರು. ಇದಕ್ಕೆ ಕಾಡಸಿದ್ದೇಶ್ವರ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ. ಖಂಡಿತವಾಗಿಯೂ ಅವಹೇಳನಕಾರಿ ಪದ ಬಳಸುವುದಿಲ್ಲ. ನವೆಂಬರ್‌ 7ರಂದು ಕಾರ್ಯಕ್ರಮ ಮುಗಿದಿದ್ದು, ಏತಕ್ಕಾಗಿ ಕಾಡಸಿದ್ದೇಶ್ವರ ಸ್ವಾಮೀಜಿ ಅವರನ್ನು 2026 ಜನವರಿ ತಿಂಗಳವರೆಗೆ ನಿರ್ಬಂಧಿಸುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ. ಕಾರಣವನ್ನೂ ನೀಡಿಲ್ಲ. ಕಾರ್ಯಕ್ರಮದ ಬಳಿಕ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ ಎಂದು ಹೇಳುತ್ತಿದ್ದಾರೆ. ಪೂರ್ವಾಗ್ರಹ ಉಂಟು ಮಾಡಬಾರದು” ಎಂದರು.

ರಾಜ್ಯ ಸರ್ಕಾರದ ಪರ ವಕೀಲರು “ಪೊಲೀಸ್‌ ವರಿಷ್ಠಾಧಿಕಾರಿಯ ವರದಿ ಪಡೆದು ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. ಕಾಡಸಿದ್ದೇಶ್ವರ ಸ್ವಾಮೀಜಿಗೆ ಭಾಷೆಯ ಮೇಲೆ ಹಿಡಿತವಿಲ್ಲ. ಮುನ್ನಚ್ಚೆರಿಕೆಯ ಭಾಗವಾಗಿ ನಿರ್ಬಂಧ ವಿಧಿಸಲಾಗಿದೆ. ಸುಪ್ರೀಂ ಕೋರ್ಟ್‌ ಸಹ ಅವರಿಗೆ ಯಾವುದೇ ಪರಿಹಾರ ನೀಡಿಲ್ಲ. ಜನರ ಭಾವನೆಗಳ ಜೊತೆ ಆಟವಾಡಲು ಸ್ವಾಮೀಜಿ ಯತ್ನಿಸುತ್ತಿದ್ದಾರೆ” ಎಂದರು.

ಆಗ ಪೀಠವು “ಎಚ್ಚರಿಕೆಯಿಂದ ಮಾತನಾಡುವಂತೆ ಕಾಡಸಿದ್ದೇಶ್ವರ ಸ್ವಾಮೀಜಿಗೆ ನೀವೇಕೆ ಹೇಳುವುದಿಲ್ಲ. ನೀವು ಮಠಾಧೀಶರಾಗಿರುವುದರಿಂದ ಪ್ರವಚನ ನೀಡಬೇಕು ಅಷ್ಟೆ. ಅದನ್ನು ರಾಜಕೀಯಗೊಳಿಸಬಾರದು. ನಿಮ್ಮ ಹೆಸರು ಅದೃಶ್ಯವಾ?” ಎಂದಿತು.

ಅದಕ್ಕೆ ವೆಂಕಟೇಶ್‌ ಅವರು “ಅದೃಶ್ಯ ಕಾಡಸಿದ್ದೇಶ್ವರ ಮಠ. 600 ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಅವಹೇಳನ ಪದ ಬಳಸದಂತೆ ಅವರಿಗೆ ಸೂಚನೆ ನೀಡುತ್ತೇನೆ. ನ್ಯಾಯಾಲಯದ ಭಾವನೆಯನ್ನು ತಲುಪಿಸುತ್ತೇನೆ” ಎಂದರು.

ಆಗ ಪೀಠವು ಮತ್ತೊಮ್ಮೆ “ಮಠಾಧೀಶರು ಪ್ರವಚನ ನೀಡಬೇಕಷ್ಟೇ” ಎಂದು ಪುನರುಚ್ಚರಿಸಿ, ಪ್ರಕರಣದ ಆದೇಶ ಕಾಯ್ದಿರಿಸಿತು.

ಈ ಹಿಂದೆ ವಿಜಯಪುರಕ್ಕೆ ನಿರ್ಬಂಧ ವಿಧಿಸಿರುವ ಆದೇಶವನ್ನು ಕಲಬುರ್ಗಿ ಪೀಠವು ಎತ್ತಿ ಹಿಡಿದಿತ್ತು. ಈ ಆದೇಶವನ್ನು ಸುಪ್ರೀಂ ಕೋರ್ಟ್‌ ಸಹ ಕಾಯಂಗೊಳಿಸಿದ್ದರಿಂದ ಸ್ವಾಮೀಜಿಗೆ ತೀವ್ರ ಹಿನ್ನಡೆಯಾಗಿತ್ತು.