Gehana Vashist, Mumbai Sessions Court 
ಸುದ್ದಿಗಳು

ಕುಂದ್ರಾಗೆ ಬೆಂಬಲ ನೀಡಿದ್ದಕ್ಕೆ ಮುಂಬೈ ಪೊಲೀಸರು ಟಾರ್ಗೆಟ್‌ ಮಾಡುತ್ತಿದ್ದಾರೆ: ಮುಂಬೈ ನ್ಯಾಯಾಲಯಕ್ಕೆ ನಟಿ ಗೆಹನಾ

ತನ್ನನ್ನು ಬಂಧಿಸಬಾರದೆಂದರೆ ₹ 15 ಲಕ್ಷ ನೀಡಬೇಕು ಎಂದು ಪೊಲೀಸರು ಬೇಡಿಕೆ ಇರಿಸಿದ್ದರು. ರಾಜ್ ಕುಂದ್ರಾಗೆ ಬೆಂಬಲ ನೀಡಿದ್ದರಿಂದ ಪ್ರಕರಣ ದಾಖಲಿಸಲಾಗಿದೆ ಎಂದು ಆಕೆಯ ಪರ ವಕೀಲರು ವಾದಿಸಿದರು.

Bar & Bench

ನೀಲಿಚಿತ್ರ ತಯಾರಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ರಾಜ್‌ ಕುಂದ್ರಾ ಅವರಿಗೆ ಬೆಂಬಲ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಮುಂಬೈ ಪೊಲೀಸರು ಹೊಸ ಪ್ರಕರಣ ದಾಖಲಿಸಿದ್ದಾರೆ ಎಂದು ಪ್ರಕರಣದ ಮತ್ತೊಬ ಆರೋಪಿ ನಟಿ ಗೆಹನಾ ವಸಿಷ್ಠ್‌ ಮುಂಬೈನ ನ್ಯಾಯಾಲಯವೊಂದಕ್ಕೆ ತಿಳಿಸಿದ್ದಾರೆ.

ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ವೇಳೆ ಅವರು ಈ ವಾದ ಮಂಡಿಸಿದರು. ತನ್ನನ್ನು ಬಂಧಿಸಬಾರದೆಂದರೆ ₹ 15 ಲಕ್ಷ ನೀಡಬೇಕು ಎಂದು ಪೊಲೀಸರು ಬೇಡಿಕೆ ಗೆಹನಾಗೆ ಬೇಡಿಕೆ ಇರಿಸಿದ್ದರು. ರಾಜ್‌ ಕುಂದ್ರಾಗೆ ಗೆಹನಾ ಬೆಂಬಲ ನೀಡಿದ್ದರಿಂದ ಆಕೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಆಕೆಯ ಪರ ವಕೀಲ ಸುನಿಲ್‌ ಕುಮಾರ್‌ ವಾದಿಸಿದರು.

ಗೆಹನಾ ಪರ ವಕೀಲರ ವಾದಗಳೇನು?

  • ಗೆಹನಾ ವಿರುದ್ಧ ದೂರುನೀಡಿರುವವರು ಸಂತ್ರಸ್ತೆ ಎಂಬ ನೆಲೆಯಲ್ಲಿ ದೂರು ದಾಖಲಾಗಿದೆ. ಆದರೆ ದೂರುದಾರರನ್ನು ಗೆಹನಾ ಎಂದಿಗೂ ಅಶ್ಲೀಲ ಚಲನಚಿತ್ರಗಳಲ್ಲಿ ನಟಿಸುವಂತೆ ಒತ್ತಾಯಿಸಿರಲಿಲ್ಲ.

  • ದೂರುದಾರೆಯು ಸುಮಾರು 100ರಷ್ಟು ಅಶ್ಲೀಲ ಚಿತ್ರಗಳಲ್ಲಿ ನಟಿಸಿರು ವೃತ್ತಿಪರ ಪೋರ್ನ್ ನಟಿಯಾಗಿದ್ದು ಆಕೆಯ ಪ್ರಾಮಾಣಿಕತೆ ಪ್ರಶ್ನಾರ್ಹ.

  • ಬೇರೆ ಅಶ್ಲೀಲ ಚಿತ್ರ ತಯಾರಕರ ವಿರುದ್ಧ ಪೊಲೀಸರು ಒಂದೇ ಒಂದು ಪ್ರಕರಣವನ್ನು ಕೂಡ ಏಕೆ ದಾಖಲಿಸಿಲ್ಲ? ಇದು ಕಾನೂನಿನ ಸಂಪೂರ್ಣ ದುರುಪಯೋಗ. ಖ್ಯಾತನಾಮರಾಗಿರುವುದರಿಂದ ಗೆಹನಾ ಅವರನ್ನು ಗುರಿಯಾಗಿಸಿಕೊಳ್ಳಲಾಗಿದೆ.

  • ಕುಂದ್ರಾ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡ ಒಂದು ವರ್ಷದ ಬಳಿಕ ದೂರುದಾರೆ ದೂರು ದಾಖಲಿಸಿದ್ದಾರೆ.

  • ದೂರುದಾರೆ ಮುಂಬೈನಲ್ಲಿ ವಾಸಿಸುತ್ತಿರುವ ವೃತ್ತಿಪರ ನಟಿ; ಹಳ್ಳಿ ಹೆಂಗಸಲ್ಲ. 'ಆರೋಪಿತ ಅಶ್ಲೀಲ' ದೃಶ್ಯಗಳಲ್ಲಿ ನಟಿಸಲು ಆಕೆ ತನ್ನ ಒಪ್ಪಿಗೆ ನೀಡಿದ್ದಳು. ಆಕೆ ನಟಿಸಬೇಕಿರುವುದು ಕುಂದ್ರಾಗೆ ಸೇರಿದ ಹಾಟ್‌ಶಾಟ್ ಮೊಬೈಲ್‌ ಅಪ್ಲಿಕೇಷನ್‌ಗಾಗಿ ಎಂದು ತಿಳಿಸಲಾಗಿತ್ತು.

  • ಅನೇಕ ಸಿಬ್ಬಂದಿ ಇರುವ ಸೆಟ್‌ನಲ್ಲಿ ಚಿತ್ರೀಕರಣ ಮಾಡುವಾಗ, ದೂರುದಾರರಿಗೆ ಬೆದರಿಕೆ ಬಂದಿದ್ದಲ್ಲಿ, ಆಕೆ ಸಹಾಯ ಪಡೆಯಬಹುದಾಗಿತ್ತು ಮತ್ತು ತನ್ನ ಫೋನ್‌ನಿಂದ ಆಕೆ ಪೊಲೀಸರಿಗೆ ಕರೆ ಮಾಡಬಹುದಿತ್ತು.

  • ತಾನು ತಿಳಿಸಿದ ನಿರ್ದಿಷ್ಟ ಚಲನಚಿತ್ರದ ಬಳಿಕವೂ ದೂರುದಾರೆ ಇತರೆ ಚಿತ್ರಗಳಲ್ಲಿ ನಟಿಸಿದ್ದಾರೆ.

  • "ಒಟಿಟಿ ವೇದಿಕೆಯಲ್ಲಿ ಚಲನಚಿತ್ರ ಬಿಡುಗಡೆ ಮಾಡುವ ಮೊದಲು, ಸಿನಿಮಾ ಡಬ್ ಮಾಡಲಾಗಿದೆ. ಆದ್ದರಿಂದ ದೂರುದಾರೆಗೆ ತನ್ನ ಸಿನಿಮಾ ಸಾರ್ವಜನಿಕವಾಗಿ ಪ್ರದರ್ಶನವಾಗುತ್ತದೆ ಎಂದು ಕೂಡ ತಿಳಿದಿತ್ತು.

  • ಗೆಹನಾ ಈಗಾಗಲೇ 4 ತಿಂಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ. ಪೊಲೀಸರು ಅವರು ಬಂಧನದಲ್ಲಿದ್ದ ವೇಳೆ ತನಿಖೆ ಅಥವಾ ವಿಚಾರಣೆ ನಡೆಸಬಹುದಿತ್ತು.

  • ನಟಿ ಮುಂಬೈನ ಖಾಯಂ ಪ್ರಜೆಯಾಗಿದ್ದು ತನಿಖೆಗೆ ಸಹಕರಿಸುತ್ತಾರೆ ತಮ್ಮ ಮೇಲೆ ವಿಧಿಸಲಾದ ಷರತ್ತುಗಳನ್ನು ಪಾಲಿಸುತ್ತಾರೆ.

ಗೆಹನಾ ವಿರುದ್ಧ ಜುಲೈ 27ರಂದು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 292, 293 (ಅಶ್ಲೀಲ ಸಾಮಾಗ್ರಿಗಳ ಮಾರಾಟ), ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್‌ಗಳಾದ 67, 67ಎ (ಲೈಂಗಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಸಾಮಾಗ್ರಿಗಳ ಪ್ರಸಾರ) ಮತ್ತು ಮಹಿಳೆಯನ್ನು ಅಸಭ್ಯವಾಗಿ ಬಿಂಬಿಸುವ (ನಿಯಂತ್ರಣ) ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ಮಹಿಳೆಯರನ್ನು ತನ್ನ ನಿರ್ದೇಶನದ ಅಶ್ಲೀಲ ಚಿತ್ರಗಳಲ್ಲಿ ನಟಿಸಲು ಬೆದರಿಕೆ, ಬಲವಂತ, ಅಮಿಷಗಳನ್ನು ಗೆಹನಾ ಒಡ್ಡುತ್ತಿದ್ದರು ಎಂದು ಆಕೆಯ ವಿರುದ್ಧ ದೂರುದಾರೆ ದೂರು ದಾಖಲಿಸಿದ್ದರು.

ಈ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಕೋರಿ ಗೆಹನಾ ಅರ್ಜಿ ಸಲ್ಲಿಸಿದ್ದರು. ಜಾಮೀನು ನೀಡಿಕೆ ಕುರಿತಾದ ವಿಚಾರಣೆಯು ಬಾಕಿ ಇರುವಾಗ ತನ್ನನ್ನು ಬಂಧನದಿಂದ ರಕ್ಷಿಸುವಂತೆಯೂ ಸಹ ಗೆಹನಾ ಸೆಷನ್ಸ್‌ ನ್ಯಾಯಾಲಯವನ್ನು ಕೋರಿದ್ದರು. ಆದರೆ ಸೆಷನ್ಸ್ ನ್ಯಾಯಾಧೀಶೆ ಸೋನಾಲಿ ಅಗರ್ವಾಲ್ ಅವರು ಆಕೆಗೆ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿದ್ದರು.