BBMP 
ಸುದ್ದಿಗಳು

[ರಸ್ತೆ ಗುಂಡಿ ಪ್ರಕರಣ] ನ್ಯಾಯಾಲಯದ ಆದೇಶ ಪಾಲಿಸಲು ಬಿಬಿಎಂಪಿ ಸಂಪೂರ್ಣ ವಿಫಲ: ಹೈಕೋರ್ಟ್‌

ಬೆಂಗಳೂರಿನಲ್ಲಿ ರಸ್ತೆಗುಂಡಿ ಮುಚ್ಚಲು ಬಿಬಿಎಂಪಿ ಸಮರ್ಪಕ ತಂತ್ರಜ್ಞಾನ ಬಳಸುತ್ತಿಲ್ಲ. ಕಳೆದ ವಾರವೂ ಮಹಿಳೆಯೊಬ್ಬರು ರಸ್ತೆಗುಂಡಿಗೆ ಬಲಿಯಾಗಿದ್ದಾರೆ ಎಂದು ಪೀಠದ ಗಮನಸೆಳೆದ ಅರ್ಜಿದಾರರ ಪರ ವಕೀಲರು.

Siddesh M S

ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿ ಮುಚ್ಚುವ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶ ಪಾಲನೆಯಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಸಂಪೂರ್ಣ ವಿಫಲವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಗುರುವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಬೆಂಗಳೂರು ನಗರದ ವ್ಯಾಪ್ತಿಯಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚುವುದಕ್ಕೆ ಸಂಬಂಧಿಸಿದಂತೆ ವಿಜಯನ್ ಮೆನನ್ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌.ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲೆ ಎಸ್‌ ಆರ್‌ ಅನುರಾಧಾ ಅವರು “ಬೆಂಗಳೂರು ನಗರದಲ್ಲಿನ ರಸ್ತೆ ಗುಂಡಿಗಳಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ರಸ್ತೆಗುಂಡಿಗಳನ್ನು ಮುಚ್ಚುವುದಕ್ಕಾಗಿ ಬಿಬಿಎಂಪಿಯು ಸಮರ್ಪಕ ತಂತ್ರಜ್ಞಾನ ಬಳಕೆ ಮಾಡಿಕೊಂಡಿಲ್ಲ. ಕಳೆದ ವಾರವೂ ಮಹಿಳೆಯೊಬ್ಬರು ರಸ್ತೆಗುಂಡಿಗೆ ಬಲಿಯಾಗಿದ್ದಾರೆ” ಎಂದು ಪೀಠದ ಗಮನಸೆಳೆದರು.

ಅಮೆರಿಕನ್‌ ರೋಡ್‌ ಟೆಕ್ನಾಲಜೀಸ್‌ ಸಲ್ಯೂಷನ್ಸ್‌ ಪ್ರತಿನಿಧಿಸಿದ್ದ ಹಿರಿಯ ವಕೀಲೆ ಜಯ್ನಾ ಕೊಠಾರಿ ಅವರು “ನ್ಯಾಯಾಲಯದ ನಿರ್ದೇಶನವನ್ನು ಕಂಪೆನಿಯು ಪಾಲಿಸಿದ್ದು, ರಸ್ತೆ ಗುಂಡಿಗಳನ್ನು ಮುಚ್ಚಿದೆ. ಈ ಸಂಬಂಧ ಬಿಬಿಎಂಪಿಯಿಂದ ಹಣ ಪಾವತಿಯಾಗಬೇಕಿದೆ” ಎಂದರು.

ಬಿಬಿಎಂಪಿ ಪ್ರತಿನಿಧಿಸಿದ್ದ ವಕೀಲ ವಿ ಶ್ರೀನಿಧಿ ಅವರು “ರಸ್ತೆ ಗುಂಡಿ ಮುಚ್ಚಿರುವುದಕ್ಕೆ ಸಂಬಂಧಿಸಿದಂತೆ ಮೆಮೊ ಸಲ್ಲಿಸಿದರು. ವೈಯಕ್ತಿವಾದ ಅನಿವಾರ್ಯ ಕಾರಣಗಳಿಂದ ಇಂದು ವಾದ ಮಂಡನೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ವಿಚಾರಣೆ ಮುಂದೂಡಬೇಕು” ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠವು “ಮೆಮೊ ಆಧರಿಸಿ ನಿರ್ದೇಶನ ನೀಡಲಾಗದು. ಸಂಬಂಧಪಟ್ಟ ಅಧಿಕಾರಿಯು ಅಫಿಡವಿಟ್‌ ಸಲ್ಲಿಸಬೇಕು. ಕಾಲಕಾಲಕ್ಕೆ ತಕ್ಕಂತೆ ಈ ನ್ಯಾಯಾಲಯವು ನೀಡಿರುವ ನಿರ್ದೇಶನಗಳನ್ನು ಬಿಬಿಎಂಪಿ ಪಾಲಿಸಿಲ್ಲ. ರಸ್ತೆ ಗುಂಡಿಗಳ ಮುಚ್ಚುವ ಪ್ರಕ್ರಿಯೆಯಲ್ಲಿ ಬಿಬಿಎಂಪಿ ಸಂಪೂರ್ಣ ವಿಫಲವಾಗಿದೆ” ಎಂದು ಹೇಳಿ, ವಿಚಾರಣೆಯನ್ನು ನವೆಂಬರ್ 2ಕ್ಕೆ ಮುಂದೂಡಿತು.