BBMP and Karnataka HC
BBMP and Karnataka HC 
ಸುದ್ದಿಗಳು

ರಸ್ತೆ ಗುಂಡಿ ಪ್ರಕರಣ: ಕಾಮಗಾರಿ ಪರಿಶೀಲಿಸಿ ವರದಿ ಸಲ್ಲಿಸಲು ಎನ್‌ಎಚ್‌ಎಐಗೆ ನಿರ್ದೇಶಿಸಿದ ಹೈಕೋರ್ಟ್‌

Bar & Bench

ಬೆಂಗಳೂರು ನಗರದಲ್ಲಿ ಕೆಟ್ಟದಾಗಿ ನಿರ್ವಹಿಸಿರುವ ರಸ್ತೆಗಳಿಂದ ಹಲವರು ತಮ್ಮ ಅಮೂಲ್ಯ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಬುಧವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್, ರಸ್ತೆ ಗುಂಡಿಗಳ ದುಸ್ಥಿತಿಗೆ ಬಿಬಿಎಂಪಿ ನಿಯೋಜಿಸಿದ ಖಾಸಗಿ ಕಂಪೆನಿ ನಡೆಸಿರುವ ಕಾಮಗಾರಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‌ಎಐ) ನಿರ್ದೇಶಿಸಿದೆ.

ರಸ್ತೆ ಗುಂಡಿಗಳ ಭರ್ತಿಗೆ ಸಂಬಂಧಿಸಿದಂತೆ ವಿಜಯನ್ ಮೆನನ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಇದಕ್ಕೂ ಮುನ್ನ ರಸ್ತೆ ಗುಂಡಿ ಭರ್ತಿಗೆ ಕುರಿತಂತೆ 2019ರಿಂದ ಈವರೆಗೂ ಹೈಕೋರ್ಟ್ ಹಲವು ನಿರ್ದೇಶನಗಳನ್ನು ನೀಡಿದೆ. ಕಳೆದ ಆರೇಳು ವರ್ಷದಿಂದ ಅರ್ಜಿ ಬಾಕಿಯಿದೆ. ಆದರೆ, ಧನಾತ್ಮಕ ಫಲಿತಾಂಶ ಸಿಕ್ಕಿಲ್ಲ. ಆರೇಳು ವರ್ಷ ಕಳೆದ ನಂತರವೂ ಬೆಂಗಳೂರು ನಗರದ ರಸ್ತೆ ಸ್ಥಿತಿ ಸುಧಾರಣೆಯಾಗಿಲ್ಲ. ಆದ್ದರಿಂದ, ನಗರದಲ್ಲಿ ಬಿಬಿಎಂಪಿಯಿಂದ ರಸ್ತೆ ಗುಂಡಿ ಭರ್ತಿ ಕಾಮಗಾರಿ ಗುತ್ತಿಗೆ ಪಡೆದಿರುವ ಅಮೆರಿಕನ್ ರೋಡ್‌ ಟೆಕ್ನಾಲಜೀಸ್‌ ಸರ್ವೀಸ್‌ ಕಂಪೆನಿಯು ಈವರೆಗೆ ನಡೆಸಿರುವ ಕಾರ್ಯದ ಪರಿಶೀಲನೆಯನ್ನು ಎನ್‌ಎಚ್‌ಎಐನ ಮುಖ್ಯ ಎಂಜಿನಿಯರ್ ಅವರು ಖುದ್ದಾಗಿ ನಡೆಸಬೇಕು. ಇಲ್ಲವೇ ಹಿರಿಯ ಅಧಿಕಾರಿಯನ್ನು ನೇಮಿಸಿ ಕಾಮಗಾರಿ ಪರಿಶೀಲಿಸಿ ವರದಿ ಸಲ್ಲಿಸಬೇಕು” ಎಂದು ಪೀಠವು ನಿರ್ದೇಶಿಸಿದೆ.

“ರಸ್ತೆ ಗುಂಡಿ ಕಾಮಗಾರಿಗೆ ಕುರಿತ ಎಲ್ಲಾ ವರದಿಗಳನ್ನು ಎನ್‌ಎಚ್‌ಎಐ ಮುಖ್ಯ ಎಂಜಿನಿಯರ್‌ಗೆ ಬಿಬಿಎಂಪಿ ಒದಗಿಸಬೇಕು. ವರದಿ ಕೈ ಸೇರಿದ ಬಳಿಕ ಎನ್‌ಎಚ್‌ಎಐ ಮುಖ್ಯ ಎಂಜಿನಿಯರ್ ಅಥವಾ ಅವರು ನಿಯೋಜಿಸಿರುವ ಹಿರಿಯ ಅಧಿಕಾರಿ ಕಾಮಗಾರಿ ನಡೆದ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಕಾರ್ಯದೇಶದ ಅನ್ವಯ ಕಾಮಗಾರಿ ನಡೆದಿದೆಯೇ? ಗುತ್ತಿಗೆದಾರರ ಕೆಲಸ ತೃಪ್ತಿಕರವಾಗಿದೆಯೇ? ಅಲ್ಲದೆ, ಸ್ವತಂತ್ರವಾಗಿ ಅಧ್ಯಯನ, ಅನಿಸಿಕೆ ಅಥವಾ ಸಲಹೆ ಏನಾದರೂ ಇದೆಯೇ ಎಂಬ ಬಗ್ಗೆ ನಾಲ್ಕು ವಾರದಲ್ಲಿ ವರದಿ ಸಲ್ಲಿಸಬೇಕು” ಎಂದು ಪೀಠವು ಆದೇಶದಲ್ಲಿ ಹೇಳಿದೆ.

“ಬಿಬಿಎಂಪಿ ಸಲ್ಲಿಸಿದ ವರದಿ ಪ್ರಕಾರ, ರಸ್ತೆ ಕಾಮಗಾರಿಗಳು ಮತ್ತು ರಸ್ತೆ ಗುಂಡಿ ಭರ್ತಿ ಕೆಲಸವನ್ನು ಖಾಸಗಿ ಗುತ್ತಿಗೆದಾರರಿಗೆ ನೀಡಲಾಗಿದೆ. ಆ ಕಾಮಗಾರಿ ತೃಪ್ತಿಕರವಾಗಿದೆ ಎಂಬುದಾಗಿ ಬಿಬಿಎಂಪಿಯಷ್ಟೇ ಪ್ರಮಾಣೀಕರಿಸಿದೆ. ಆದರೆ, ಕಾಮಗಾರಿಯನ್ನು ಮೂರನೇ ಸಂಸ್ಥೆಯಿಂದ ಯಾವುದೇ ಸ್ವತಂತ್ರ ಅಧ್ಯಯನ ಮಾಡಿಲ್ಲ. ಆದ್ದರಿಂದ, ಎನ್‌ಎಚ್‌ಎಐ ಕಾಮಗಾರಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು” ಎಂದು ನಿರ್ದೇಶಿಸಿ ವಿಚಾರಣೆಯನ್ನು ಡಿಸೆಂಬರ್‌ 7ಕ್ಕೆ ವಿಚಾರಣೆ ಮುಂದೂಡಿದೆ.

“ಬಿಬಿಎಂಪಿ ಅಧಿಕಾರಿಗಳು ಅಥವಾ ಗುತ್ತಿಗೆದಾರರಿಂದ ಯಾವುದೇ ಕರ್ತವ್ಯಲೋಪ ಉಂಟಾಗಿದ್ದರೆ, ಆ ಕುರಿತು ವರದಿಯಲ್ಲಿ ಪ್ರತ್ಯೇಕವಾಗಿ ಉಲ್ಲೇಖಿಸಬೇಕು. ನ್ಯಾಯಾಲಯವು ಹೊರಡಿಸಿರುವ ಈ ಆದೇಶವು ಪಾಲಿಕೆ ಕೈಗೊಂಡಿರುವ ಕಾಮಗಾರಿಗೆ ಯಾವುದೇ ಅಡ್ಡಿ ಉಂಟು ಮಾಡುವುದಿಲ್ಲ. ಕಾಮಗಾರಿಗಳು ಮುಂದುವರಿಯಬೇಕು” ಎಂದು ಸ್ಪಷ್ಟಪಡಿಸಿದೆ.

ಇದಕ್ಕೂ ಮುನ್ನ ಬಿಬಿಎಂಪಿ ಪ್ರತಿನಿಧಿಸಿದ್ದ ವಕೀಲ ವಿ ಶ್ರೀನಿಧಿ ಅವರು “ಬಿಬಿಎಂಪಿ ಪ್ರಧಾನ ಎಂಜಿನಿಯರ್‌ ಬಿ ಎಸ್‌ ಪ್ರಹ್ಲಾದ್‌ ಅವರು ಅನುಪಾಲನಾ ವರದಿ ಸಲ್ಲಿಸಿದ್ದಾರೆ” ಎಂದರು. ಇದನ್ನು ಪರಿಶೀಲಿಸಿದ ಪೀಠವು “ಹದಗೆಟ್ಟ ರಸ್ತೆಯಿಂದ ಮತ್ತು ರಸ್ತೆ ಗುಂಡಿಯಿಂದ ನಾಗರಿಕರು ತಮ್ಮ ಅಮೂಲ್ಯ ಜೀವ ಕಳೆದುಕೊಳ್ಳುತ್ತಿದ್ದಾರೆ. ರಸ್ತೆಗಳನ್ನು ಕೆಟ್ಟದಾಗಿ ನಿರ್ವಹಿಸಿರುವುದರ ಪರಿಣಾಮ ಹಲವರು ತಮ್ಮ ಅಮೂಲ್ಯ ಪ್ರಾಣ ಕಳೆದುಕೊಂಡಿದ್ದಾರೆ. ನ್ಯಾಯಾಲಯ ನೀಡಿರುವ ಆದೇಶಗಳು ಕಾಗದದ ಮೇಲೆ ಮಾತ್ರ ಇವೆ. ಆದೇಶಗಳನ್ನು ಸೂಕ್ತವಾಗಿ ಬಿಬಿಎಂಪಿ ಪಾಲಿಸಿಲ್ಲ. ರಸ್ತೆ ಗುಂಡಿ ಮುಚ್ಚುವುದು ಬಿಬಿಎಂಪಿಯ ಸಾಂವಿಧಾನಿಕ ಹೊಣೆಯಾಗಿದೆ. ಆದರೆ, ಪ್ರತಿ ವರ್ಷ ರಸ್ತೆ ಮುಚ್ಚಲಾಗುತ್ತಿದೆ. ನಂತರ ರಸ್ತೆ ಗುಂಡಿಗಳು ಏರ್ಪಡುತ್ತಿವೆ. ಮತ್ತೆ ಗುಂಡಿ ಮುಚ್ಚಲಾಗುತ್ತಿದೆ. ಈ ಬೆಳವಣಿಗೆಯನ್ನು ಸಹಿಸಲಾಗದು” ಎಂದು ಪೀಠವು ಕಟುವಾಗಿ ಟೀಕಿಸಿತು.

“ಯಾವ ರಸ್ತೆಯಲ್ಲಿ ಎಷ್ಟು ಭಾರದ ವಾಹನಗಳು ಸಂಚರಿಸಲಿವೆ. ಬಿಬಿಎಂಪಿ ರಸ್ತೆ ಗುಂಡಿ ಮುಚ್ಚಿರುವುದು ವಾಹನದ ಭಾರ ತಡೆಯಲಿದಿಯೇ ಎಂಬುದನ್ನು ಪರಿಶೀಲನೆ ನಡೆಸಿ ದೃಢೀಕರಿಸಲು ಯಾವುದೇ ಪ್ರತ್ಯೇಕ ಸಂಸ್ಥೆಯಿಲ್ಲ. ಇನ್ನೂ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗೆ ಬಿಬಿಎಂಪಿಯೇ ದೃಢೀಕರಣ ನೀಡಿದೆ. ಹೀಗಿರುವಾಗ ಕಾಮಗಾರಿ ಗುಣಮಟ್ಟದಿಂದ ಕೂಡಿದೆ ಎಂಬುದನ್ನು ಹೇಗೆ ನಂಬಲು ಸಾಧ್ಯವಾಗುತ್ತದೆ” ಎಂದು ಪೀಠ ಕಟುವಾಗಿ ಪ್ರಶ್ನಿಸಿತು.