BBMP and Karnataka HC 
ಸುದ್ದಿಗಳು

ಗುಂಡಿ ಬಿದ್ದ ರಸ್ತೆಗಳು: ಬಿಬಿಎಂಪಿ ವಿರುದ್ಧ ಹೈಕೋರ್ಟ್‌ ಕೆಂಡಾಮಂಡಲ, ಮುಖ್ಯ ಎಂಜಿನಿಯರ್‌ ಹಾಜರಾತಿಗೆ ನಿರ್ದೇಶನ

“ನೀವು (ಬಿಬಿಎಂಪಿ) ಸಲ್ಲಿಸಿರುವ ಅನುಪಾಲನಾ ವರದಿಯು ಸೋಗಿನಿಂದ ಕೂಡಿದೆ. ರಸ್ತೆಗಳು ಗುಂಡಿ ಮುಕ್ತವಾಗಿವೆ ಎಂದು ಹೇಳುತ್ತೀರಿ. ಇದನ್ನು ಹೇಗೆ ನಂಬಬೇಕು” ಎಂದು ತರಾಟೆಗೆ ತೆಗೆದುಕೊಂಡ ನ್ಯಾಯಾಲಯ.

Siddesh M S

ಬೆಂಗಳೂರು ನಗರದಲ್ಲಿ ಗುಂಡಿ ಬಿದ್ದಿರುವ ರಸ್ತೆಗಳ ನವೀಕರಣ ಮತ್ತು ನಿರ್ಮಾಣಕ್ಕೆ ಸಂಬಂಧಿಸಿದಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಲ್ಲಿಸಿರುವ ವರದಿಯಿಂದ ಅತೃಪ್ತಿಗೊಂಡ ಕರ್ನಾಟಕ ಹೈಕೋರ್ಟ್‌ ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಅವರನ್ನು ಜೈಲಿಗಟ್ಟುವ ಕಠಿಣ ಎಚ್ಚರಿಕೆಯನ್ನು ಗುರುವಾರ ನೀಡಿತು.

ಬೆಂಗಳೂರು ನಗರದ ವ್ಯಾಪ್ತಿಯಲ್ಲಿನ ರಸ್ತೆಗಳ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ವಿಜಯನ್‌ ಮೆನನ್‌ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಬೆಂಗಳೂರು ನಗರದಲ್ಲಿ ಗುಂಡಿ ಬಿದ್ದಿರುವ ರಸ್ತೆಗಳ ನವೀಕರಣ ಮತ್ತು ನಿರ್ಮಾಣಕ್ಕೆ ಸಂಬಂಧಿಸಿದಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಲ್ಲಿಸಿರುವ ಸ್ಥಿತಿಗತಿ ವರದಿ ತೃಪ್ತಿ ತಂದಿಲ್ಲ. ಹೀಗಾಗಿ, ರಸ್ತೆ ನಿರ್ಮಾಣದ ಹೊಣೆಗಾರಿಕೆ ಹೊತ್ತಿರುವ ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಮುಂದಿನ ವಿಚಾರಣೆಯಲ್ಲಿ ವಿಡಿಯೊ ಕಾನ್ಫರೆನ್‌ ಮೂಲಕ ನ್ಯಾಯಾಲಯದ ಮುಂದೆ ಹಾಜರಾಗಬೇಕು” ಎಂದು ನ್ಯಾಯಾಲಯವು ವಿಚಾರಣೆ ವೇಳೆ ಬಿಬಿಎಂಪಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.

“ಬೆಂಗಳೂರು ನಗರದ 1,344.84 ಕಿ ಮೀ ಪ್ರಮುಖ ರಸ್ತೆಯ ಪೈಕಿ 1,314 ಕಿ ಮೀ ರಸ್ತೆಯಲ್ಲಿ ಗುಂಡಿ ಮುಚ್ಚಲಾಗಿದೆ. 12,529.79 ಕಿ ಮೀ ವಲಯ ರಸ್ತೆಯ ಪೈಕಿ 12,046.82 ಕಿ ಮೀ ಕೆಲಸ ಮಾಡಲಾಗಿದೆ. ಇದರಲ್ಲಿ 30 ಕಿ ಮೀ ಪ್ರಮುಖ ರಸ್ತೆ ಮತ್ತು 482 ಕಿ ಮೀ ವಲಯ ರಸ್ತೆಗಳಲ್ಲಿ ಗುಂಡಿ ಮುಚ್ಚುವ ಕೆಲಸ ಮಾಡಲಾಗಿಲ್ಲ ಎಂದು ಬಿಬಿಎಂಪಿ ತಾನು ಸಲ್ಲಿಸಿರುವ ಸ್ಥಿತಿಗತಿ ವರದಿಯಲ್ಲಿ ಉಲ್ಲೇಖಿಸಿದೆ. ಇದರಿಂದ ಬಿಬಿಎಂಪಿ ಗುಂಡಿ ಮುಚ್ಚಿಲ್ಲ ಎಂಬುದು ಸ್ಪಷ್ಟವಾಗಿದೆ. ಪೈಪ್‌ಲೈನ್‌ ಮತ್ತಿತರ ಕೆಲಸಕ್ಕಾಗಿ ಬೆಸ್ಕಾಂ, ಬೆಂಗಳೂರು ಜಲ ಸರಬರಾಜು ಮತ್ತು ಒಳಚರಂಡಿ ಮಂಡಳಿ ಮತ್ತು ಜಿಎಐಎಲ್‌ ಸಂಸ್ಥೆಗಳು ರಸ್ತೆ ಅಗೆದಿದ್ದು, ಅವುಗಳು ನಿಗದಿತ ಕಾಲಮಿತಿಯಲ್ಲಿ ರಸ್ತೆ ಪುನರ್‌ ನಿರ್ಮಾಣ ಮಾಡಿಲ್ಲ” ಎಂದು ಸ್ಥಿತಿಗತಿ ವರದಿಯಲ್ಲಿ ತಿಳಿಸಲಾಗಿದೆ.

“ಬಿಬಿಎಂಪಿ ಅನುಮತಿ ಪಡೆದು ರಸ್ತೆ ಅಗೆದಿರುವ ಸಂಸ್ಥೆಗಳು ಅವುಗಳನ್ನು ನಿಗದಿತ ಕಾಲಮಿತಿಯಲ್ಲಿ ಪುನರ್‌ ನಿರ್ಮಾಣ ಮಾಡದಿರುವುದಕ್ಕೆ ಸಂಬಂಧಿಸಿದಂತೆ ಯಾವ ಕ್ರಮಕೈಗೊಳ್ಳಲಾಗಿದೆ ಎಂಬುದನ್ನು ತೃಪ್ತಿದಾಯಕವಾಗಿ ವಿವರಿಸಲಾಗಿಲ್ಲ. ರಸ್ತೆ ಗುಂಡಿ ಮುಚ್ಚಲು ಯಾವ ವಿಧಾನ ಅಳವಡಿಸಿಕೊಳ್ಳಲಾಗಿದೆ ಎಂದು ವಿವರಿಸಿಲ್ಲ. ಏಜೆನ್ಸಿಗಳು ಮತ್ತು ಬಿಬಿಎಂಪಿ ನಡುವಿನ ಸಮನ್ವಯತೆ ಇಲ್ಲ ಹಾಗೂ ರಸ್ತೆ ಗುಂಡಿ ಮುಚ್ಚಲು ಅಳವಡಿಸಿಕೊಂಡಿರುವ ತಂತ್ರಜ್ಞಾನವು ಸರಿಯಿಲ್ಲ ಎಂಬುದು ತಿಳಿದಿದೆ. ಹೀಗಾಗಿ, ಬಿಬಿಎಂಪಿ ವಕೀಲರು ಸಲ್ಲಿಸಿರುವ ವರದಿಯು ತೃಪ್ತಿದಾಯಕವಾಗಿಲ್ಲ” ಎಂದು ನ್ಯಾಯಾಲಯ ಆದೇಶದಲ್ಲಿ ಸ್ಪಷ್ಟಪಡಿಸಿತು.

“ರಸ್ತೆ ಗುಂಡಿ ಮುಚ್ಚಲು ಮತ್ತು ರಸ್ತೆ ನಿರ್ಮಾಣ ಮಾಡಲು ತಜ್ಞರ, ನೈಪುಣ್ಯತೆ ಹೊಂದಿರುವ ಸಂಸ್ಥೆಗಳ ನೇಮಕ, ರಸ್ತೆ ನಿರ್ಮಿಸಲು ಬಿಬಿಎಂಪಿ ಅಳವಡಿಸಿಕೊಂಡಿರುವ ನಿಯಮಾವಳಿ, ರಸ್ತೆ ಅಗೆದು ತಮ್ಮ ಕೆಲಸ ಪೂರೈಸಿದ ಬಳಿಕ ನಿಯಮಿತ ಕಾಲಮಿತಿಯಲ್ಲಿ ಬೆಸ್ಕಾಂ, ಜಲಮಂಡಳಿ ಮತ್ತಿತರ ಸಂಸ್ಥೆಗಳು ರಸ್ತೆ ಪುನರ್‌ ನಿರ್ಮಾಣ ಮಾಡುವುದಕ್ಕೆ ಸಂಬಂಧಿಸಿದ ನೀತಿಯನ್ನು ಅಧಿಕೃತವಾಗಿ ಬಿಬಿಎಂಪಿ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಮುಂದಿನ ವಿಚಾರಣೆಯಲ್ಲಿ ಬಿಬಿಎಂಪಿ ಮುಖ್ಯ ಎಂಜಿನಿಯರ್‌ ವಿಚಾರಣೆಗೆ ಹಾಜರಾಗಬೇಕು” ಎಂದು ಪೀಠವು ಆದೇಶಿಸಿದ್ದು, ವಿಚಾರಣೆಯನ್ನು ಫೆಬ್ರವರಿ 7ಕ್ಕೆ ಮುಂದೂಡಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲೆ ಅನುರಾಧಾ ಅವರು, “ರಸ್ತೆ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ಯಾವ ವಿಧಾನ ಅನುಸರಿಸಲಾಗುತ್ತಿದೆ ಎಂಬುದನ್ನು ಉಲ್ಲೇಖಿಸಿ ಅನುಪಾಲನಾ ವರದಿ ಸಲ್ಲಿಸಲು ಬಿಬಿಎಂಪಿಗೆ ನಿರ್ದೇಶಿಸಬೇಕು” ಎಂದು ಕೋರಿದರು.

ಇದಕ್ಕೆ ಸಿಜೆ ಅವಸ್ಥಿ ಅವರು ಬಿಬಿಎಂಪಿ ವಕೀಲ ಕೆ ಎನ್‌ ಪುಟ್ಟೇಗೌಡ ಅವರನ್ನು ಉದ್ದೇಶಿಸಿ “ರಸ್ತೆ ಗುಂಡಿ ಮುಚ್ಚಲು ಯಾವ ತಂತ್ರಜ್ಞಾನ ಅಳವಡಿಸಿಕೊಂಡಿದ್ದೀರಿ? ಗುಂಡಿ ಮುಚ್ಚಿದ ಮೇಲೆ ಅವುಗಳೇಕೆ ಬಹುಕಾಲ ಬರುವುದಿಲ್ಲ. ಪ್ರತಿ ಮಳೆಗಾಲದಲ್ಲಿ ಗುಂಡಿ ಬೀಳುವುದೇಕೆ? ಇದು ನಿಮ್ಮ ಕೆಲಸ ಗುಣಮಟ್ಟ ತೋರಿಸುತ್ತದೆ” ಎಂದು ಖಾರವಾಗಿ ನುಡಿದರು.

“ನೀವು (ಬಿಬಿಎಂಪಿ) ಸಲ್ಲಿಸಿರುವ ಅನುಪಾಲನಾ ವರದಿಯು ಸೋಗಿನಿಂದ ಕೂಡಿದೆ. ರಸ್ತೆಗಳು ಗುಂಡಿ ಮುಕ್ತವಾಗಿವೆ ಎಂದು ಹೇಳುತ್ತೀರಿ. ಇದನ್ನು ಹೇಗೆ ನಂಬಬೇಕು” ಎಂದು ಮುಖ್ಯ ನ್ಯಾಯಮೂರ್ತಿಗಳು ತರಾಟೆಗೆ ತೆಗೆದುಕೊಂಡರು.

ಬಿಬಿಎಂಪಿ ವಕೀಲ ಪುಟ್ಟೇಗೌಡ ಅವರು “ಬೆಂಗಳೂರಿನ ಹಿಂದಿನ ಜನಸಂಖ್ಯೆ 40-50 ಲಕ್ಷ ಇತ್ತು. ಈಗ ಅದು 1.3 ಕೋಟಿಗೆ ಏರಿಕೆಯಾಗಿದೆ. ರಸ್ತೆಗಳ ಮೇಲೆ ಒತ್ತಡ ಹೆಚ್ಚಾಗಿದೆ. ಪ್ರಮುಖ ರಸ್ತೆಗಳನ್ನು ಟೆಂಡರ್‌ ಶ್ಯೂರ್‌, ವೈಟ್‌ ಟ್ಯಾಪಿಂಗ್‌ ಮೂಲಕ ನಿರ್ಮಿಸಲಾಗುತ್ತಿದೆ. ಸಮಸ್ಯೆ ಇರುವುದು ವಲಯ ರಸ್ತೆಗಳಲ್ಲಿ ಮಾತ್ರ” ಎಂದು ಸಮಜಾಯಿಷಿ ನೀಡಲು ಸಾಕಷ್ಟು ಪ್ರಯತ್ನ ಮಾಡಿದರು. ಇದ್ಯಾವುದರಿಂದಲೂ ಪೀಠವು ಸಂತೃಪ್ತವಾಗಲಿಲ್ಲ.

ಮುಖ್ಯ ಎಂಜಿನಿಯರ್‌ರನ್ನು ಜೈಲಿಗಟ್ಟುವ ಎಚ್ಚರಿಕೆ

ರಸ್ತೆಗಳ ನಿರ್ಮಾಣ, ನಿರ್ವಹಣೆಯ ಹೊಣೆಗಾರಿಕೆ ಮುಖ್ಯ ಎಂಜಿಯರ್‌ ಮೇಲಿರುತ್ತದೆ. ಹೀಗಾಗಿ, ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಲು ನಿರ್ದೇಶಿಸಿ ಆ ಬಳಿಕ ಅವರನ್ನು ಜೈಲಿಗೆ ಅಟ್ಟಲಾಗುವುದು. ಈ ರೀತಿ ಕೆಲಸ ಮಾಡಲು ಅವಕಾಶ ಮಾಡಿಕೊಡಲಾಗದು. ನಿಮ್ಮ ಸ್ಥಿತಿಗತಿ ವರದಿಯನ್ನು ನಾವು ತಿರಸ್ಕರಿಸಿದ್ದೇವೆ. ಮುಖ್ಯ ಎಂಜಿನಿಯರ್‌ ಅನ್ನು ಜೈಲಿಗೆ ಕಳುಹಿಸಿದರೆ ಅವರಿಗೆ ನ್ಯಾಯಾಲಯ ಎಂದರೆ ಏನು ಎಂದು ಅರ್ಥವಾಗುತ್ತದೆ ಎಂದು ಪೀಠವು ಆಕ್ರೋಶದಿಂದ ನುಡಿಯಿತು.