“ಕಾನೂನು ಪದವಿ ಪೂರೈಸದೇ ವಕೀಲರ ಸಮವಸ್ತ್ರ ಧರಿಸಿ ಕೋರ್ಟ್‌ಗೆ ಹಾಜರಾಗುವ ನಕಲಿ ವಕೀಲರ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ರಾಜ್ಯ ವಕೀಲರ ಪರಿಷತ್ ಎಚ್ಚರಿಸಿದೆ.
ಈ ಸಂಬಂಧ ಹೈಕೋರ್ಟ್ ರಿಜಿಸ್ಟ್ರಾರ್ ಅವರಿಗೆ ಪತ್ರ ಬರೆದಿರುವ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಎಸ್ ಎಸ್ ಮಿಟ್ಟಲಕೋಡ ಅವರು ನಕಲಿ ವಕೀಲರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ವಿಚಾರಣಾಧೀನ ನ್ಯಾಯಾಲಯಗಳ ನ್ಯಾಯಾಧೀಶರಿಗೆ ಸೂಕ್ತ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.
“ಸನ್ನದು ಇಲ್ಲದ ಅನುಮಾನಸ್ಪಾದವಾದ ವ್ಯಕ್ತಿಗಳು ಕಂಡು ಬಂದಲ್ಲಿ ಅವರ ಹೆಸರು, ಭಾವಚಿತ್ರ, ನೋಂದಣಿ ಸಂಖ್ಯೆ ಮತ್ತು ಸ್ಥಳದ ಮಾಹಿತಿಯನ್ನು kar_barcouncil@yahoo.comಗೆ ಇ-ಮೇಲ್ ಮಾಡಬಹುದು” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದೆಲ್ಲದರ ಮಧ್ಯೆ, ಬೆಂಗಳೂರಿನ ವಕೀಲೆ ಡಿ ಪೂಜಾ ಕುಮಾರಿ ಅವರು ತುಮಕೂರಿನ ಸೈಯದ್ ಸಾದದ್ ಎಂಬವರು ತನ್ನ ಸನ್ನದು ನಂಬರ್ ಬಳಕೆ ಮಾಡಿ, ಕಳೆದ ಎರಡು ವರ್ಷಗಳಿಂದ ವಕೀಲಿಕೆ ನಡೆಸುತ್ತಿದ್ದಾರೆ. ತುಮಕೂರಿನ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ನ್ಯಾಯಾಲಯ, ಜಿಲ್ಲಾ ನ್ಯಾಯಾಲಯ ಮತ್ತು ಉಪನೋಂದಣಾಧಿಕಾರಿ ಕಚೇರಿಯಲ್ಲಿ ಹಲವು ದಾಖಲೆಗಳನ್ನು ನೋಂದಾಯಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು.
ದೂರಿನ ಆಧಾರದಲ್ಲಿ ಸೈಯದ್ ಸಾದದ್ ವಿರುದ್ಧ ತುಮಕೂರು ನಗರ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್‌ಗಳಾದ 319(2), 318(4), 336(2), 340(2) ಅಡಿ ಪ್ರಕರಣ ದಾಖಲಿಸಲಾಗಿದೆ.