H D Revanna, Suraj Revanna and A Manju and Karnataka HC 
ಸುದ್ದಿಗಳು

ಪ್ರಜ್ವಲ್‌ ಅನರ್ಹತೆ: ಎಚ್‌ ಡಿ ರೇವಣ್ಣ, ಸೂರಜ್‌, ಎ ಮಂಜುಗೆ ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್‌ ಆದೇಶ

ತಮ್ಮ ಸದಸ್ಯತ್ವ ರದ್ದತಿ ಕೋರಿ ಎ ಮಂಜು ಸಲ್ಲಿಸಿದ್ದ ಅರ್ಜಿಗೆ ಪ್ರತಿಯಾಗಿ ಪ್ರಜ್ವಲ್‌ ಅವರು ಎ ಮಂಜು ಅವರ ವಿರುದ್ಧ ಅನರ್ಹತೆ ದಾವೆ ಹೂಡಿದ್ದರು (ರಿಕ್ರಿಮಿನೇಷನ್‌ ಅರ್ಜಿ). ಇದನ್ನು ನ್ಯಾಯಾಲಯವು ಪುರಸ್ಕರಿಸಿದೆ.

Bar & Bench

ಚುನಾವಣಾ ಅಕ್ರಮ ಪ್ರಕರಣದಲ್ಲಿ ಹಾಸನ ಸಂಸದ ಪ್ರಜ್ವಲ್‌ ರೇವಣ ಅವರನ್ನು ಅನರ್ಹಗೊಳಿಸಿರುವ ಕರ್ನಾಟಕ ಹೈಕೋರ್ಟ್‌ ಮಾಜಿ ಸಚಿವ ಹಾಗೂ ಪ್ರಜ್ವಲ್‌ ತಂದೆ ಎಚ್‌ ಡಿ ರೇವಣ್ಣ ಮತ್ತು ಅವರ ಸಹೋದರ ಹಾಗೂ ವಿಧಾನ ಪರಿಷತ್‌ ಸದಸ್ಯ ಸೂರಜ್‌ ರೇವಣ್ಣ ಹಾಗೂ ಅರ್ಜಿದಾರ ಹಾಗೂ ಜೆಡಿಎಸ್‌ ಶಾಸಕರಾಗಿರುವ ಎ ಮಂಜು ಅವರಿಗೆ ಶುಕ್ರವಾರ ನೋಟಿಸ್‌ ಜಾರಿಗೊಳಿಸಲು ರಿಜಿಸ್ಟ್ರಿಗೆ ಆದೇಶಿಸಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಜಿತರಾಗಿದ್ದ ಎ ಮಂಜು ಮತ್ತು ಜಿ ದೇವರಾಜೇಗೌಡ ಅವರು ಸಲ್ಲಿಸಿದ್ದ‌ ಚುನಾವಣಾ ಅರ್ಜಿಗೆ ಸಂಬಂಧಿಸಿದಂತೆ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಕೆ ನಟರಾಜನ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಇಂದು ಪ್ರಕಟಿಸಿತು.

ಚುನಾವಣಾ ಪ್ರಕ್ರಿಯಾ ಸಂಹಿತೆ (ಎಲೆಕ್ಷನ್‌ ಪ್ರೊಸೀಜರ್‌ ಕೋಡ್‌) ಸೆಕ್ಷನ್‌ 99 (1) ಅಡಿ ಎಚ್‌ ಡಿ ರೇವಣ್ಣ ಮತ್ತು ಸೂರಜ್‌ ರೇವಣ್ಣ ಹಾಗೂ ಅರ್ಜಿದಾರ ಎ ಮಂಜು ಅವರು ಚುನಾವಣಾ ಅಕ್ರಮದಲ್ಲಿ ಭಾಗಿಯಾಗಿದ್ದು, ಚುನಾವಣಾ ಸಂಹಿತೆ ನಿಯಮ ಸೆಕ್ಷನ್‌ 99ರ ಅಡಿ ಮೂವರಿಗೂ ನೋಟಿಸ್‌ ಜಾರಿ ಮಾಡುವ ಮೂಲಕ ರಿಜಿಸ್ಟ್ರಿಯು ನಿಯಮ ಪಾಲಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

ಇದಲ್ಲದೇ, ತಮ್ಮ ಸದಸ್ಯತ್ವ ರದ್ದತಿ ಕೋರಿ ಎ ಮಂಜು ಸಲ್ಲಿಸಿದ್ದ ಅರ್ಜಿಗೆ ಪ್ರತಿಯಾಗಿ ಪ್ರಜ್ವಲ್‌ ಅವರು ಎ ಮಂಜು ಅವರ ವಿರುದ್ಧ ಅನರ್ಹತೆ ದಾವೆ ಹೂಡಿದ್ದರು (ರಿಕ್ರಿಮಿನೇಷನ್‌ ಅರ್ಜಿ). ಇದನ್ನು ನ್ಯಾಯಾಲಯವು ಪುರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಆರು ವರ್ಷ ಸ್ಪರ್ಧಿಸುವಂತಿಲ್ಲ ಎಂಬ ನಿಯಮವು ಎ ಮಂಜು ಅವರಿಗೂ ಅನ್ವಯಿಸಲಿದೆ. ಹಾಲಿ ಅರಕಲಗೂಡು ಜೆಡಿಎಸ್‌ ಶಾಸಕರಾಗಿರುವ ಎ ಮಂಜು ಆಯ್ಕೆ ರದ್ದಾಗಲಿದೆ ಎಂದು ದೇವರಾಜೇಗೌಡ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ಅವರು ಬಾರ್‌ ಅಂಡ್‌ ಬೆಂಚ್‌ಗೆ ತಿಳಿಸಿದ್ದಾರೆ.