H D Revanna and Karnataka HC 
ಸುದ್ದಿಗಳು

ಪ್ರಜ್ವಲ್‌ ಅನರ್ಹತೆ ಪ್ರಕರಣ: ರೇವಣ್ಣ, ಸೂರಜ್‌ ಪರ ಹೈಕೋರ್ಟ್‌ಗೆ ವಕಾಲತ್ತು ಸಲ್ಲಿಕೆ

ಚುನಾವಣಾ ಅಕ್ರಮ ಎಸಗಿದ ಹಿನ್ನೆಲೆಯಲ್ಲಿ ಹಾಸನ ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್‌ ರೇವಣ್ಣ ಆಯ್ಕೆಯಾಗಿರುವುದನ್ನು ಅಸಿಂಧುಗೊಳಿಸಿ ಹೈಕೋರ್ಟ್‌ 2023ರ ಸೆಪ್ಟೆಂಬರ್‌ 1ರಂದು ತೀರ್ಪು ನೀಡಿತ್ತು.

Bar & Bench

ಕಳೆದ ಹಾಸನ ಲೋಕಸಭಾ ಕ್ಷೇತ್ರ ಚುನಾವಣೆ ವೇಳೆ ಪ್ರಜ್ವಲ್‌ ರೇವಣ್ಣ ಆಯ್ಕೆಯಾಗಲು ಅಕ್ರಮ ಎಸಗಿದ ಆರೋಪದ ಮೇಲೆ ಜನಪ್ರತಿನಿಧಿಗಳ ಕಾಯಿದೆ ಅಡಿ ಕಾನೂನು ಕ್ರಮ ಜರುಗಿಸಲು ಮಾಜಿ ಸಚಿವ ಹಾಗೂ ಹೊಳೆನರಸೀಪುರ ಶಾಸಕ ಎಚ್‌ ಡಿ ರೇವಣ್ಣ ಮತ್ತು ಸೂರಜ್‌ ರೇವಣ್ಣಗೆ ನೋಟಿಸ್‌ ಜಾರಿಯಾದ ಹಿನ್ನೆಲೆಯಲ್ಲಿ ಅವರ ಪರ ವಕೀಲರು ಶುಕ್ರವಾರ ಕರ್ನಾಟಕ ಹೈಕೋರ್ಟ್‌ನಲ್ಲಿ ವಕಾಲತ್ತು ಹಾಕಿದ್ದಾರೆ.

ಚುನಾವಣಾ ಅಕ್ರಮ ಎಸಗಿದ ಹಿನ್ನೆಲೆಯಲ್ಲಿ ಹಾಸನ ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್‌ ರೇವಣ್ಣ ಆಯ್ಕೆಯಾಗಿರುವುದನ್ನು ಅಸಿಂಧುಗೊಳಿಸಿ ಹೈಕೋರ್ಟ್‌ 2023ರ ಸೆಪ್ಟೆಂಬರ್‌ 1ರಂದು ತೀರ್ಪು ನೀಡಿತ್ತು. ಅಲ್ಲದೇ, ಚುನಾವಣೆಯಲ್ಲಿ ಪ್ರಜ್ವಲ್‌ ಗೆಲುವು ಸಾಧಿಸಲು ಅಕ್ರಮ ಎಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಸೂರಜ್‌ ರೇವಣ್ಣ ಮತ್ತು ಎಚ್‌ ಡಿ ರೇವಣ್ಣ ಅವರ ವಿರುದ್ಧ ಜನ ಪ್ರತಿನಿಧಿಗಳ ಕಾಯಿದೆ ಸೆಕ್ಷನ್‌ 99(1)(ಎ)(2) ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲು ಹೈಕೋರ್ಟ್‌ ಷೋಕಾಸ್‌ ನೋಟಿಸ್‌ ಜಾರಿಗೊಳಿಸಲು ಆದೇಶಿಸಿತ್ತು. ಅದರಂತೆ ಅವರಿಬ್ಬರಿಗೂ 2023ರ ಸೆಪ್ಟೆಂಬರ್‌ 13ರಂದು ಹೈಕೋರ್ಟ್‌ನಿಂದ ನೋಟಿಸ್‌ ಜಾರಿಯಾಗಿತ್ತು.

ಈ ಹಿನ್ನೆಲೆಯಲ್ಲಿ ಶುಕ್ರವಾರ ಎಚ್‌ ಡಿ ರೇವಣ್ಣ ಮತ್ತು ಅವರ ಪುತ್ರ ಸೂರಜ್‌ ರೇವಣ್ಣ ಅವರ ಪರ ವಕೀಲ ಎ ವಿ ನಿಶಾಂತ್‌ ಹಾಜರಾಗಿ ವಕಾಲತ್ತು ಜೊತೆಗೆ ಮೆಮೊ ಸಲ್ಲಿಸಿದರು.

ಆಗ ಪೀಠವು, "ನೋಟಿಸ್‌ ಪಡೆದವರು ಎಲ್ಲಿ?" ಎಂದು ಕೇಳಿತು. ಅದಕ್ಕೆ ಉತ್ತರಿಸಿದ ವಕೀಲ ನಿಶಾಂತ್‌, ನೋಟಿಸ್‌ ಪಡೆದವರ ಪರ ತಾವು ವಕಾಲತ್ತು ಸಲ್ಲಿಸುತ್ತಿದ್ದೇವೆ. ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿದೆ. ಸೂರಜ್‌ ಮತ್ತು ಎಚ್‌ ಡಿ ರೇವಣ್ಣ ಅವರ ವಿರುದ್ಧದ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ಕೋರ್ಟ್‌ 2023ರ ಸೆಪ್ಟೆಂಬರ್‌ 18ರಂದು ತಡೆಯಾಜ್ಜೆ ನೀಡಿದೆ ಎಂದು ತಿಳಿಸಿ ಮೊಮೊ ಸಲ್ಲಿಸಿದರು. ಜೊತೆಗೆ, ಸುಪ್ರಿಂ ಕೋರ್ಟ್‌ನ ಮಧ್ಯಂತರ ಆದೇಶದ ವಿವರಗಳನ್ನು ಓದಿ ನ್ಯಾಯಾಲಯಕ್ಕೆ ತಿಳಿಸಿದರು.

ಆ ಮೊಮೊವನ್ನು ದಾಖಲಿಸಿಕೊಂಡ ನ್ಯಾಯಮೂರ್ತಿ ಕೆ ನಟರಾಜನ್‌ ಅವರ ನೇತೃತ್ವದ ಪೀಠವು ಸುಪ್ರೀಂ ಕೋರ್ಟ್‌ನಿಂದ ಯಾವುದಾದರೂ ಆದೇಶ ಪ್ರಕಟವಾದ ನಂತರ ಪ್ರಕರಣವನ್ನು ವಿಚಾರಣೆಗೆ ನಿಗದಿಪಡಿಸಬೇಕು ಎಂದು ಕೋರ್ಟ್‌ ರಿಜಿಸ್ಟ್ರಿಗೆ ಸೂಚಿಸಿ, ವಿಚಾರಣೆ ಮುಂದೂಡಿತು.