Karnataka HC and Prajwal Revanna 
ಸುದ್ದಿಗಳು

[ಆಜೀವ ಸೆರೆವಾಸ] ತನಿಖೆಗೆ ಅಸಹಕಾರ ತೋರಿದ, ವಿಚಾರಣೆ ವಿಳಂಬಗೊಳಿಸಿದ ಪ್ರಜ್ವಲ್‌ ಜಾಮೀನಿಗೆ ಅನರ್ಹ: ಸರ್ಕಾರದ ವಾದ

ಅಜೀವ ಸೆರೆವಾಸ ಶಿಕ್ಷೆ ಬದಿಗೆ ಸರಿಸಿ, ಜಾಮೀನು ಮಂಜೂರು ಮಾಡಬೇಕು ಎಂದು ಕೋರಿ ಪ್ರಜ್ವಲ್‌ ರೇವಣ್ಣ ಸಲ್ಲಿಸಿರುವ ಕ್ರಿಮಿನಲ್‌ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಕೆ ಎಸ್‌ ಮುದಗಲ್‌ ಮತ್ತು ಟಿ ವೆಂಕಟೇಶ್‌ ನಾಯಕ್‌ ಅವರ ವಿಭಾಗೀಯ ಪೀಠ ನಡೆಸಿತು.

Bar & Bench

ಮನೆಕೆಲಸದ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಯಾಗಿರುವ, ಪ್ರಭಾವಿ ರಾಜಕೀಯ ಕುಟುಂಬದ ಕುಡಿಯಾಗಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಪ್ರಕರಣದಲ್ಲಿ ವಿಚಾರಣೆ ಮುಂದುವರಿಸುವುದನ್ನು ತಡೆಯಲು 10-12 ಬಾರಿ ಪ್ರಯತ್ನ ಮಾಡಿದ್ದರು. ಹೀಗಾಗಿ ಅವರಿಗೆ ಜಾಮೀನು ನೀಡಬಾರದು ಎಂದು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ನಲ್ಲಿ ಸೋಮವಾರ ಪ್ರಬಲ ವಾದ ಮಂಡಿಸಿತು.

ಆಜೀವ ಸೆರೆವಾಸ ಶಿಕ್ಷೆ ಬದಿಗೆ ಸರಿಸಿ, ಜಾಮೀನು ಮಂಜೂರು ಮಾಡಬೇಕು ಎಂದು ಕೋರಿ ಪ್ರಜ್ವಲ್‌ ರೇವಣ್ಣ ಸಲ್ಲಿಸಿರುವ ಕ್ರಿಮಿನಲ್‌ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಕೆ ಎಸ್‌ ಮುದಗಲ್‌ ಮತ್ತು ಟಿ ವೆಂಕಟೇಶ್‌ ನಾಯಕ್‌ ಅವರ ವಿಭಾಗೀಯ ಪೀಠ ನಡೆಸಿತು.

ವಿಶೇಷ ತನಿಖಾ ದಳದ (ಎಸ್‌ಐಟಿ) ಪರವಾಗಿ ವಾದಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ.ರವಿವರ್ಮ ಕುಮಾರ್‌ ಅವರು “ವಿಚಾರಣಾ ನ್ಯಾಯಾಲಯದಲ್ಲಿ ವಿಚಾರಣೆಯನ್ನು ವಿಳಂಬಗೊಳಿಸಲು ಪ್ರಜ್ವಲ್‌ 10-12 ಬಾರಿ ಪ್ರಯತ್ನ ಮಾಡಿದ್ದಾರೆ. ಪ್ರಜ್ವಲ್‌ ಕೋರಿಕೆಯ ಮೇರೆಗೆ ಹಲವು ವಿಚಾರಣೆ ಮುಂದೂಡಲ್ಪಟ್ಟಿದೆ. ಇದಕ್ಕೂ ಮುನ್ನ, ಕೃತ್ಯ ನಡೆಸಿ ದೇಶ ತೊರೆದು ತನಿಖೆಗೂ ಪ್ರಜ್ವಲ್‌ ಸವಾಲು ಎಸೆದಿದ್ದರು. ಸಂತ್ರಸ್ತೆಯರ ಜೊತೆಗಿನ ಲೈಂಗಿಕ ಕೃತ್ಯ ಸೆರೆ ಹಿಡಿದಿದ್ದ ಫೋನ್‌ ಅನ್ನು ಪ್ರಜ್ವಲ್‌ ತನಿಖಾಧಿಕಾರಿಗಳಿಗೆ ಒಪ್ಪಿಸಿಲ್ಲ. ಜರ್ಮನಿಯಲ್ಲಿ ತನ್ನ ಫೋನ್‌ ಕಳೆದು ಹೋಗಿದೆ ಎಂದು ಪ್ರಜ್ವಲ್‌ ಹೇಳಿದ್ದಾರೆ. ಇದು ಈತನ ನಡತೆ” ಎಂದು ಆಕ್ಷೇಪಿಸಿದರು.

“ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬಲಾಢ್ಯನಾಗಿರುವ ಪ್ರಜ್ವಲ್‌ನ ಅಜ್ಜ ಮಾಜಿ ಪ್ರಧಾನಿಯಾಗಿದ್ದು, ಆತನ ಚಿಕ್ಕಪ್ಪ ಹಾಲಿ ಕೇಂದ್ರ ಸಚಿವರು ಮತ್ತು ಮಾಜಿ ಮುಖ್ಯಮಂತ್ರಿಯಾಗಿದ್ದಾರೆ.. ಆತನ ತಂದೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಕೃತ್ಯದ ಮಾಹಿತಿ ನೀಡಲು ಬಂದ ಸಂತ್ರಸ್ತೆಗೆ ಅಂದಿನ ಜಿಲ್ಲಾಧಿಕಾರಿ ಸೇರಿ ಯಾರೂ ನೆರವು ನೀಡಿಲ್ಲ. ಬಲಾಢ್ಯರಾಗಿರುವುದರಿಂದಲೇ ಆಕೆಯ ಧ್ವನಿಯನ್ನು ಹತ್ತಿಕ್ಕಲಾಗಿತ್ತು” ಎಂದರು.

“ಹಾಲಿ ಪ್ರಕರಣದಲ್ಲಿ ಪ್ರಜ್ವಲ್‌ಗೆ ಜಾಮೀನು ಮಂಜೂರು ಮಾಡಿದರೆ ಸಂತ್ರಸ್ತೆಯನ್ನು ಅಪಹರಿಸಿದ ಆರೋಪದ ಪ್ರಕರಣ ಎದುರಿಸುತ್ತಿರುವ ಆತನ ತಂದೆ ಎಚ್‌ ಡಿ ರೇವಣ್ಣ ಮತ್ತು ಆತನ ತಾಯಿ ಭವಾನಿ ಅವರ ಜಾಮೀನು ಕೋರಿಕೆ ಮೇಲೆ ಆದೇಶವು ಪ್ರಭಾವ ಬೀರಲಿದ್ದು, ಪ್ರಜ್ವಲ್‌ ಇದೇ ಕೃತ್ಯ ಮುಂದುವರಿಸುವ ಸಾಧ್ಯತೆ ಇದೆ. ಹೀಗಾಗಿ, ಆತ ಜಾಮೀನಿಗೆ ಅರ್ಹನಾಗಿಲ್ಲ” ಎಂದು ಆಕ್ಷೇಪಿಸಿದರು.

“ಅತ್ಯಂತ ಘನಘೋರ ಮತ್ತು ಹೀನ ಕೃತ್ಯ ಎಸಗಿರುವ ಪ್ರಜ್ವಲ್‌ಗೆ ಜಾಮೀನು ಮಂಜೂರು ಮಾಡಿ, ಆತ ಸಮಾಜದ ಮುಖ್ಯವಾಹಿನಿಗೆ ಬರಲು ಅವಕಾಶ ಮಾಡಿಕೊಟ್ಟರೆ ಸಮಾಜಕ್ಕೆ ಯಾವ ಸಂದೇಶ ರವಾನೆಯಾಗಲಿದೆ? ಜಾಮೀನು ನೀಡುವುದು ನಿಯಮ, ವಿಶೇಷ ಸಂದರ್ಭದಲ್ಲಿ ಜೈಲು ಶಿಕ್ಷೆ ವಿಧಿಸಬೇಕು ಎಂಬ ನಿಯಮ ಇರುವುದು ಸತ್ಯ. ಆದರೆ, ಈ ಪ್ರಕರಣದಲ್ಲಿ ಪ್ರಜ್ವಲ್‌ ಜಾಮೀನಿಗೆ ಖಂಡಿತವಾಗಿಯೂ ಅರ್ಹನಾಗಿಲ್ಲ. ಈ ಹಂತದಲ್ಲಿ ವಿಚಾರಣಾಧೀನ ನ್ಯಾಯಾಲಯದ ತೀರ್ಪಿನಲ್ಲಿ ದೋಷ ಹುಡುಕಬಾರದು” ಎಂದರು.

ಸರ್ಕಾರದ ಆಕ್ಷೇಪಣೆಯನ್ನು ದಾಖಲಿಸಿಕೊಂಡ ನ್ಯಾಯಾಲಯವು ವಿಚಾರಣೆಯನ್ನು ನಾಳೆಗೆ ಮುಂದೂಡಿತು.