Karnataka HC and Prajwal Revanna 
ಸುದ್ದಿಗಳು

ಪ್ರಜ್ವಲ್‌ ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣ: ನಾಲ್ವರು ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Bar & Bench

ಪ್ರಜ್ವಲ್‌ ರೇವಣ್ಣ ಅವರ ಅಶ್ಲೀಲ ಫೋಟೊ ಹಾಗೂ ವಿಡಿಯೊ ಹಂಚಿದ ಆರೋಪದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ನಾಲ್ವರು ಆರೋಪಿಗಳು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ಮಂಗಳವಾರ ಜೂನ್‌ 3ಕ್ಕೆ ಮುಂದೂಡಿದೆ.

ಆರೋಪಿಗಳಾದ ನವೀನ್‌ ಗೌಡ ಅಲಿಯಾಸ್‌ ಎನ್‌ ಆರ್‌ ನವೀನ್‌ ಕುಮಾರ್‌, ಎನ್‌ ಕಾರ್ತಿಕ್‌, ಬಿ ಸಿ ಚೇತನ್‌ ಕುಮಾರ್‌ ಮತ್ತು ಎಚ್‌ ವಿ ಪುಟ್ಟರಾಜು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ಜಿ ಉಮಾ ಅವರ ಏಕಸದಸ್ಯ ಪೀಠ ನಡೆಸಿತು.

ಆಕ್ಷೇಪಣೆ ಸಲ್ಲಿಸಲು ಸರ್ಕಾರಿ ವಕೀಲರು ಕಾಲಾವಕಾಶ ಕೋರಿದರು. ಜೊತೆಗೆ, ವಿಚಾರಣೆ ವೇಳೆ ಖುದ್ದು ಹಾಜರಾಗಿದ್ದ ಪ್ರಕರಣದ ದೂರುದಾರ ಎಂ ಜಿ ಪೂರ್ಣಚಂದ್ರ ತೇಜಸ್ವಿ, ತಮ್ಮ ಪರ ವಕೀಲರನ್ನು ನಿಯೋಜಿಸಿಕೊಳ್ಳಲು ಸಮಯಾವಕಾಶ ನೀಡಲು ಕೋರಿದರು.

ಆರೋಪಿ ಚೇತನ್‌ ಕುಮಾರ್‌ ಪರ ವಕೀಲರು, ಇಂದು ವಿಚಾರಣೆಗೆ ಹಾಜರಾಗುವಂತೆ ಚೇತನ್‌ ಕುಮಾರ್‌ಗೆ ಎಸ್‌ಐಟಿ ತನಿಖಾಧಿಕಾರಿ ನೋಟಿಸ್‌ ನೀಡಿದ್ದಾರೆ. ಪದೇ ಪದೇ ನೋಟಿಸ್‌ ನೀಡುತ್ತಿದ್ದು, ಅವರಿಗೆ ಬಂಧನ ಭೀತಿ ಎದುರಾಗಿದೆ. ಆದ್ದರಿಂದ, ಅರ್ಜಿಯನ್ನು ತ್ವರಿತವಾಗಿ ವಿಚಾರಣೆ ನಡೆಸಬೇಕು ಎಂದು ಕೋರಿದರು.

ಈ ಮನವಿ ಪರಿಗಣಿಸಿದ ಪೀಠವು ವಿಚಾರಣೆಯನ್ನು ಜೂನ್‌ 3ಕ್ಕೆ (ಸೋಮವಾರ) ಮುಂದೂಡಿತು. ಈ ನಡುವೆ, ನವೀನ್‌ ಕುಮಾರ್‌ ಮತ್ತು ಚೇತನ್‌ ಅವರನ್ನು ಎಸ್‌ಐಟಿ ಬಂಧಿಸಿದೆ ಎನ್ನಲಾಗಿದ್ದು, ಅವರ ಜಾಮೀನು ಅರ್ಜಿ ಅಸ್ತಿತ್ವ ಕಳೆದುಕೊಳ್ಳಲಿದೆ.

ಪ್ರಕರಣದ ಹಿನ್ನೆಲೆ: ಪ್ರಕರಣ ಸಂಬಂಧ ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್‌ ಹಾಗೂ ಬಿಜೆಪಿ ಚುನಾವಣಾ ಏಜೆಂಟ್‌ ಆಗಿದ್ದ ಎಂ ಜಿ ಪೂರ್ಣಚಂದ್ರ ತೇಜಸ್ವಿ, ಹಾಸನ ಸಿಇಎನ್‌ ಪೊಲೀಸ್‌ ಠಾಣೆಗೆ 2024ರ ಏಪ್ರಿಲ್‌ 23ರಂದು ದೂರು ನೀಡಿದ್ದರು. ಆರೋಪಿ ನವೀನ್‌ ಗೌಡ ಹಾಗೂ ಇತರರು ಏಪ್ರಿಲ್‌ 21ರಂದು ಸಂಜೆ 6.30ರಿಂದ ಪ್ರಜ್ವಲ್‌ ರೇವಣ್ಣ ಅವರ ನಕಲಿ ಅಶ್ಲೀಲ ಭಾವಚಿತ್ರ ಮತ್ತು ವಿಡಿಯೊ ಒಳಗೊಂಡ ಸಿಡಿ ಹಾಗೂ ಪೆನ್‌ಡ್ರೈವ್‌ ಸಿದ್ಧಪಡಿಸಿಕೊಂಡು ಹಾಸನದಲ್ಲಿ ಮನೆ ಮನೆಗೆ ತೆರಳಿ ಮತದಾರರಿಗೆ ಹಂಚಿದ್ದಾರೆ. ವಾಟ್ಸಪ್‌/ಮೊಬೈಲ್‌ಗಳಲ್ಲಿ ತೋರಿಸಿ, ಪ್ರಜ್ವಲ್‌ಗೆ ಮತ ಹಾಕದಂತೆ ಪ್ರಚೋದಿಸುತ್ತಿದ್ದಾರೆ ಎಂದು ದೂರಿದ್ದರು.

ಪೊಲೀಸರು ಆರೋಪಿಗಳ ವಿರುದ್ಧ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಲು ಸುಳ್ಳು ಹೇಳಿಕೆ ಪ್ರಕಟಿಸಿದ, ವಿದ್ಯುನ್ಮಾನ ರೂಪದಲ್ಲಿ ಅಶ್ಲೀಲ ಫೋಟೊ ಹಾಗೂ ವಿಡಿಯೊ ಪ್ರಕಟಿಸಿದ ಮತ್ತು ರವಾನಿಸಿದ ಆರೋಪ ಸಂಬಂಧ ಎಫ್‌ಐಆರ್‌ ದಾಖಲಿಸಿದ್ದರು. ಬಂಧನ ಭೀತಿ ಎದುರಾದ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಹಾಸನದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮೇ 8ರಂದು ತಿರಸ್ಕರಿಸಿತ್ತು. ಇದರಿಂದ ಅವರು ಹೈಕೊರ್ಟ್‌ ಮೊರೆ ಹೋಗಿದ್ದಾರೆ.