Karnataka HC and Prajwal Revanna
Karnataka HC and Prajwal Revanna 
ಸುದ್ದಿಗಳು

ಲೋಕಸಭಾ ಸದಸ್ಯತ್ವ ಅನರ್ಹತೆ: ಆದೇಶಕ್ಕೆ ತಡೆ ಕೋರಿ ಹೈಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ ಪ್ರಜ್ವಲ್‌ ರೇವಣ್ಣ

Bar & Bench

ಚುನಾವಣೆಯಲ್ಲಿ ಅಕ್ರಮ ಎಸಗಿದ ಆರೋಪದ ಮೇಲೆ ಹಾಸನ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ತಾವು ಆಯ್ಕೆಯಾಗಿರುವುದನ್ನು ಅನರ್ಹಗೊಳಿಸಿರುವ ಆದೇಶಕ್ಕೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವರೆಗೂ ತಡೆಯಾಜ್ಞೆ ನೀಡಬೇಕು ಎಂದು ಕೋರಿ ಪ್ರಜ್ವಲ್ ರೇವಣ್ಣ ಕರ್ನಾಟಕ ಹೈಕೋರ್ಟ್‌ಗೆ ಸೋಮವಾರ ಮಧ್ಯಂತ ಅರ್ಜಿ ಸಲ್ಲಿಸಿದ್ದಾರೆ.

ಹಾಸನ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಸಂಸದರಾಗಿ ಪ್ರಜ್ವಲ್ ರೇವಣ್ಣ ಆಯ್ಕೆಯಾಗಿರುವುದನ್ನು ಅನರ್ಹಗೊಳಿಸಿ ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠವು ಸೆಪ್ಟೆಂಬರ್‌ 1ರಂದು ಆದೇಶಿಸಿತ್ತು. ಈ ಆದೇಶದ ಪ್ರತಿಯನ್ನು ಸಂಸತ್ ಸ್ಪೀಕರ್‌ಗೆ ಕಳುಹಿಸಲು ರಿಜಿಸ್ಟ್ರಿಗೆ ನಿರ್ದೇಶಿಸಿತ್ತು. ಇದರಿಂದ ಹೈಕೋರ್ಟ್ ಆದೇಶ ರದ್ದು ಕೋರಿ ಸುಪ್ರಿಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಪ್ರಜ್ವಲ್ ತೀರ್ಮಾನ ಮಾಡಿದ್ದಾರೆ.

ಆದರೆ, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದರ ಒಳಗೆ ಲೋಕಸಭೆಯ ಸ್ಪೀಕರ್ ತಮ್ಮ ಸದಸ್ಯತ್ವ ಅನರ್ಹಗೊಳಿಸಬಹುದು ಎಂದು ಆತಂಕ ವ್ಯಕ್ತಪಡಿಸಿರುವ ಪ್ರಜ್ವಲ್‌ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವವರೆಗೆ ಸೆಪ್ಟೆಂಬರ್‌ 1ರ ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿ ಹೈಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.

ಪ್ರಜ್ವಲ್ ಪರ ವಕೀಲ ಎಂ ಕೇಶವ ರೆಡ್ಡಿ ಅವರು ಅರ್ಜಿ ಸಲ್ಲಿಸಿದ್ದು ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

ಕಳೆದ ಲೋಕಸಭೆ ಚುನಾವಣೆ ವೇಳೆ ಪ್ರಜ್ವಲ್ ರೇವಣ್ಣ ಅವರು ನಾಮಪತ್ರ ಸಲ್ಲಿಸುವಾಗ ಪೂರ್ಣ ಪ್ರಮಾಣದಲ್ಲಿ ಆಸ್ತಿ ವಿವರ ಘೋಷಿಸಿಲ್ಲ. ಚುನಾವಣೆ ಸಂದರ್ಭದಲ್ಲಿ ಹಲವು ಅಕ್ರಮ ನಡೆಸಿದ್ದಾರೆ. ಹಾಗಾಗಿ, ಅವರ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಕೋರಿ ಬಿಜೆಪಿಯ ಪರಾಜಿತ ಅಭ್ಯರ್ಥಿ ಎ.ಮಂಜು ಹಾಗೂ ಬಿಜೆಪಿ ಮುಖಂಡರೂ ಆದ ವಕೀಲ ದೇವರಾಜೇಗೌಡ ಹೈಕೋರ್ಟ್‌ಗೆ 2019ರಲ್ಲಿ ಪ್ರತ್ಯೇಕ ಚುನಾವಣಾ ಅರ್ಜಿ ಸಲ್ಲಿಸಿದ್ದರು.

ಅರ್ಜಿಗಳನ್ನು ಭಾಗಶಃ ಪುರಸ್ಕರಿಸಿದ್ದ ಹೈಕೋರ್ಟ್, ಪ್ರಜ್ವಲ್ ರೇವಣ್ಣ ಚುನಾವಣಾ ಅಕ್ರಮ ನಡೆಸಿದ್ದಾರೆ ಎಂದು ತೀರ್ಮಾನಿಸಿತ್ತು. ಜೊತೆಗೆ, ಅವರ ಆಯ್ಕೆಯನ್ನು ಅಸಿಂಧುಗೊಳಿಸಿ ಸೆಪ್ಟೆಂಬರ್‌ 1ರಂದು ಆದೇಶಿಸಿತ್ತು. ಅಲ್ಲದೆ, ಚುನಾವಣಾ ಅಕ್ರಮದಲ್ಲಿ ಶಾಮೀಲಾಗಿರುವ ಕಾರಣಕ್ಕೆ ಪ್ರಜ್ವಲ್ ಅವರ ತಂದೆ ಎಚ್ ಡಿ ರೇವಣ್ಣ ಮತ್ತು ಸಹೋದರ ಸೂರಜ್ ರೇವಣ್ಣಗೆ ನೋಟಿಸ್ ಸಹ ಜಾರಿಗೊಳಿಸಿತ್ತುದ.