H D Revanna and Bengaluru city civil court 
ಸುದ್ದಿಗಳು

ಪ್ರಜ್ವಲ್‌ ಲೈಂಗಿಕ ಹಗರಣ: ಮಧ್ಯಂತರ ಜಾಮೀನು ಕೋರಿ ಜನಪ್ರತಿನಿಧಿಗಳ ನ್ಯಾಯಾಲಯದ ಮೆಟ್ಟಿಲೇರಿದ ಎಚ್‌ ಡಿ ರೇವಣ್ಣ

Bar & Bench

ಪ್ರಜ್ವಲ್‌ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ಹಾಗೂ ಬಂಧನ ಭೀತಿ ಎದುರಿಸುತ್ತಿರುವ ಹೊಳೆನರಸೀಪುರದ ಜೆಡಿಎಸ್‌ ಶಾಸಕ ಎಚ್‌ ಡಿ ರೇವಣ್ಣ ಮಧ್ಯಂತರ ಜಾಮೀನು ಕೋರಿ ಗುರುವಾರ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ವಿಶೇಷ ನ್ಯಾಯಾಲಯವು ವ್ಯಾಪ್ತಿ ಹೊಂದಿದ ನ್ಯಾಯಾಲಯಕ್ಕೆ ದೂರಿನಲ್ಲಿ ಐಪಿಸಿ ಸೆಕ್ಷನ್‌ 376 (ಅತ್ಯಾಚಾರ) ಅನ್ವಯಿಸಲು ಕೋರಿರುವ ನಡುವೆ ರೇವಣ್ಣ ಮಧ್ಯಂತರ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಎಚ್‌ ಡಿ ರೇವಣ್ಣ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ವಿಚಾರಣೆ ನಡೆಸಿದರು.

ಅರ್ಜಿದಾರರನನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಮೂರ್ತಿ ಡಿ. ನಾಯ್ಕ್‌ “ಅರ್ಜಿಯ ಜೊತೆಗೆ ಮಧ್ಯಂತರ ಜಾಮೀನು ಅರ್ಜಿ ಸಲ್ಲಿಸಲಾಗಿದೆ. ಅರ್ಜಿದಾರರ ವಿರುದ್ಧ ಅಪರಾಧಗಳು ಜಾಮೀನು ಮಂಜೂರು ಮಾಡುವಂಥಾಗಿವೆ. ತನಿಖಾ ಸಂಸ್ಥೆಯು ವ್ಯಾಪ್ತಿ ಹೊಂದಿದ ನ್ಯಾಯಾಲಯಕ್ಕೆ ಐಪಿಸಿ ಸೆಕ್ಷನ್‌ 376 ಅನ್ವಯಿಸಲು ಅನುಮತಿ ಕೋರಿದೆ. ಜೆಎಂಎಫ್‌ಸಿ ನ್ಯಾಯಾಲಯ ಅನುಮತಿ ನೀಡಿರುವುದನ್ನು ಇನ್ನಷ್ಟೇ ಪಡೆದುಕೊಳ್ಳಬೇಕಿದೆ” ಎಂದು ಹೇಳಿದ್ದಾರೆ.

ಇದನ್ನು ಪರಿಗಣಿಸಿರುವ ನ್ಯಾಯಾಲಯವು ಪ್ರತಿವಾದಿ ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ನೋಟಿಸ್‌ ಜಾರಿ ಮಾಡಿತು. ಈ ಸಂದರ್ಭದಲ್ಲಿ ಅರ್ಜಿದಾರರ ಪರ ಹಿರಿಯ ವಕೀಲರು ಸದರಿ ಪ್ರಕರಣಕ್ಕೆ ವಿಶೇಷ ಸರ್ಕಾರಿ ಅಭಿಯೋಜಕರನ್ನು (ಎಸ್‌ಪಿಪಿ) ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಈ ವಾದವನ್ನು ಪರಿಗಣಿಸಿ ಎಸ್‌ಪಿಪಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಆಕ್ಷೇಪಣೆ ಸಲ್ಲಿಸಲು ಅರ್ಜಿಯ ಪ್ರತಿಯನ್ನು ಎಸ್‌ಪಿಪಿ ನೀಡಲು ಅರ್ಜಿದಾರರಿಗೆ ಅನುಮತಿಸಲಾಗಿದೆ ಎಂದು ನ್ಯಾಯಾಲಯ ಹೇಳಿದ್ದು, ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.

ಸಂತ್ರಸ್ತ ಮಹಿಳೆ ನೀಡಿದ ದೂರಿನ ಅನ್ವಯ ಹಾಸನ ಜಿಲ್ಲೆಯ ಹೊಳೆನರಸೀಪುರ ಟೌನ್‌ ಠಾಣೆಯಲ್ಲಿ ಪ್ರಜ್ವಲ್‌ ರೇವಣ್ಣ ಮತ್ತು ಅವರ ತಂದೆ ಮಾಜಿ ಸಚಿವ ಎಚ್‌ ಡಿ ರೇವಣ್ಣ ವಿರುದ್ಧ ಏಪ್ರಿಲ್‌ 28ರಂದು ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 354(ಎ), 354(ಡಿ), 506, 509 ಅಡಿ ಎಫ್‌ಐಆರ್‌ ದಾಖಲಾಗಿದೆ. ಇದರ ತನಿಖೆಯನ್ನು ಹಿರಿಯ ಐಪಿಎಸ್‌ ಅಧಿಕಾರಿ ಬಿ ಕೆ ಸಿಂಗ್‌ ನೇತೃತ್ವದ ವಿಶೇಷ ತನಿಖಾ ತಂಡ ಆರಂಭಿಸಿದೆ.