<div class="paragraphs"><p>Karnataka HC and Loksabha Member Prajwal Revanna</p></div>

Karnataka HC and Loksabha Member Prajwal Revanna

 
ಸುದ್ದಿಗಳು

ಪ್ರಜ್ವಲ್‌ ರೇವಣ್ಣ ಆಯ್ಕೆ ಪ್ರಶ್ನಿಸಿರುವ ಅರ್ಜಿ ವಿಚಾರಣೆ: ಪರಾಜಿತ ಅಭ್ಯರ್ಥಿ ಸತೀಶ್‌ಗೆ ಪೊಲೀಸರ ಮೂಲಕ ಸಮನ್ಸ್

Bar & Bench

ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್‌ ಸಂಸದ ಪ್ರಜ್ವಲ್ ರೇವಣ್ಣ ಆಯ್ಕೆ ಅಸಿಂಧುಗೊಳಿಸಲು ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಪ್ರಕರಣದ ಐದನೇ ಪ್ರತಿವಾದಿ ಆರ್ ಜಿ ಸತೀಶ್‌ (ಕಣದಲ್ಲಿದ್ದ ಪರಾಜಿತ ಅಭ್ಯರ್ಥಿ) ಖುದ್ದು ಸಮನ್ಸ್‌ ಪಡೆಯಲು ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಪೊಲೀಸರ ಮುಖಾಂತರ ಸಮನ್ಸ್‌ ಜಾರಿಗೆ ಹೈಕೋರ್ಟ್‌ ಸೂಚಿಸಿದೆ.

ಚುನಾವಣಾ ತಕರಾರು ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಕೆ ನಟರಾಜನ್ ಅವರಿದ್ದ ಏಕಸದಸ್ಯ ಪೀಠಕ್ಕೆ ಶುಕ್ರವಾರ ಪರಾಜಿತ ಬಿಜೆಪಿ ಅಭ್ಯರ್ಥಿ ಎ ಮಂಜು ಪರ ವಕೀಲ ಎಂ ಆರ್ ವಿಜಯಕುಮಾರ್ ಅವರು ಪ್ರಮಾಣ ಪತ್ರ ಸಲ್ಲಿಸಿದರು. ಇದನ್ನು ಪರಿಶೀಲಿಸಿದ ಪೀಠವು ಸಮನ್ಸ್‌ ಪಡೆಯಲು ನಿರಾಕರಿಸಿದ್ದ ಸತೀಶ್‌ ಅವರಿಗೆ ಪೊಲೀಸರ ಮುಖಾಂತರ ಸಮನ್ಸ್ ಜಾರಿಗೆ ಆದೇಶಿಸಿ ಫೆಬ್ರವರಿ 14ಕ್ಕೆ ವಿಚಾರಣೆ ಮುಂದೂಡಿದೆ.

ಪ್ರಕರಣದ ಹಿನ್ನೆಲೆ .

ಕಳೆದ ಲೋಕಸಭೆ ಚುನಾವಣೆ ವೇಳೆ ಪ್ರಜ್ವಲ್‌ ಅವರು ನಾಮಪತ್ರ ಸಲ್ಲಿಸುವಾಗ ಪೂರ್ಣಪ್ರಮಾಣದಲ್ಲಿ ಆಸ್ತಿ ವಿವರ ಘೋಷಿಸಿಲ್ಲ ಎಂದು ಅರ್ಜಿದಾರರಾದ ಬಿಜೆಪಿಯ ಪರಾಜಿತ ಅಭ್ಯರ್ಥಿ ಎ. ಮಂಜು ದೂರಿದ್ದರು. ಆದರೆ ಜ. 17ರಂದು ರಾಜ್ಯ ಹೈಕೋರ್ಟ್‌ ಅವರ ಅರ್ಜಿಯನ್ನು ವಜಾಗೊಳಿಸಿತ್ತು. ’ಅರ್ಜಿ ದೋಷಪೂರಿತವಾಗಿದೆ. ಇದರಲ್ಲಿನ ಲೋಪಗಳನ್ನು ಸರಿಪಡಿಸಲು ಕಾಲಾವಕಾಶ ನೀಡಿದ ನಂತರವೂ ಕಾಲಮಿತಿಯಲ್ಲಿ ಅವುಗಳನ್ನು ಸರಿಪಡಿಸಿಲ್ಲ‘ ಎಂದು ಹೇಳಿತ್ತು. ಹೈಕೋರ್ಟ್‌ ಆದೇಶ ಪ್ರಶ್ನಿಸಿ ಮಂಜು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು.

ಚುನಾವಣೆ ನಡೆದು ಇದಾಗಲೇ ಎರಡೂವರೆ ವರ್ಷ ಕಳೆದಿರುವುದರಿಂದ ಪ್ರಕರಣವನ್ನು ಹೊಸದಾಗಿ ಗಣನೆಗೆ ತೆಗೆದುಕೊಳ್ಳಬೇಕು ಎಂದು ಹೈಕೋರ್ಟ್‌ಗೆ ಸೂಚಿಸಿದ ಪೀಠ ಅಫಿಡವಿಟ್‌ನಲ್ಲಿನ ಲೋಪವನ್ನು ಸರಿಪಡಿಸಿ ಹದಿನೈದು ದಿನಗಳಲ್ಲಿ ಹೊಸ ಅಫಿಡವಿಟ್‌ ಸಲ್ಲಿಸಲು ಮಂಜು ಅವರಿಗೆ ಅನುಮತಿಸಿತ್ತು.