ಲೈಂಗಿಕ ಹಗರಣದಲ್ಲಿ ಆರೋಪಿಯಾಗಿರುವ ಜೆಡಿಎಸ್‌ನಿಂದ ಅಮಾನತುಗೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ಅವರು ರಾಜ್ಯ ಸರ್ಕಾರ ನೇಮಿಸಿರುವ ವಿಶೇಷ ತನಿಖಾ ದಳದ (ಎಸ್‌ಐಟಿ) ಮುಂದೆ ಹಾಜರಾಗಲು ಏಳು ದಿನಗಳ ಕಾಲಾವಕಾಶ ಕೋರಿದ್ದಾರೆ.
ಪ್ರಜ್ವಲ್ ಮತ್ತು ಎಚ್ ಡಿ ರೇವಣ್ಣ ಅವರ ವಕೀಲ ಜಸ್ ಲೆಕ್ಸ್‌ನ ಜಿ ಅರುಣ್ ಅವರು ಎಸ್‌ಐಟಿಯ ಪೊಲೀಸ್ ಉಪ ಅಧೀಕ್ಷಕರು ಮತ್ತು ತನಿಖಾಧಿಕಾರಿಗಳಿಗೆ ಪತ್ರ ಬರೆದಿದ್ದು, ಪ್ರಜ್ವಲ್ ಸದ್ಯ ಬೆಂಗಳೂರಿನಿಂದ ಹೊರಗಿದ್ದಾರೆ. ತಮ್ಮ ಮುಂದೆ ಹಾಜರಾಗಲು ಅವರಿಗೆ ಏಳು ದಿನಗಳ ಕಾಲಾವಕಾಶ ನೀಡಬೇಕು ಎಂದು ಕೋರಿದ್ದಾರೆ.
ಏಪ್ರಿಲ್ 30ರಂದು ಎಸ್‌ಐಟಿ ಅಧಿಕಾರಿಗಳು ಸಿಆರ್‌ಪಿಸಿ ಸೆಕ್ಷನ್ 41(ಎ) ಅಡಿ 24 ತಾಸುಗಳಲ್ಲಿ ತಮ್ಮ ಮುಂದೆ ಹಾಜರಾಗಿ, ಹೇಳಿಕೆ ನೀಡುವಂತೆ ಹೊಳೆನರಸೀಪುರದ ರೇವಣ್ಣ ಅವರ ಮನೆಯ ಬಾಗಿಲಿಗೆ ನೋಟಿಸ್ ಅಂಟಿಸಿದ್ದರು.
ಈ ಮಧ್ಯೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪ್ರಜ್ವಲ್ ರೇವಣ್ಣ ದೇಶಕ್ಕೆ ಮರಳುವುದನ್ನು ಖಾತರಿಪಡಿಸುವಂತೆ ಪತ್ರ ಮುಖೇನ ಕೋರಿದ್ದಾರೆ.
ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಪಡಿಸಿ, ದೇಶಕ್ಕೆ ಮರಳುವುದನ್ನು ಖಾತರಿಪಡಿಸುವ ಮೂಲಕ ನೆಲದ ಕಾನೂನು ಎದುರಿಸಲು ನೆರವಾಗಿ ಎಂದು ಪ್ರಧಾನಿಗೆ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಇದಕ್ಕೆ ಅಗತ್ಯವಾದ ಮಾಹಿತಿಯನ್ನು ಹಾಗೂ ಕಾನೂನು ಔಪಚಾರಿಕತೆಗಳನ್ನು ಕರ್ನಾಟಕದ ಎಸ್‌ಐಟಿ ಪೂರೈಸಲಿದೆ ಎಂದು ಅವರು ಈ ವೇಳೆ ಹೇಳಿದ್ದಾರೆ.
ಈ ನಡುವೆ, ಪ್ರಜ್ವಲ್ ರೇವಣ್ಣ ಮತ್ತು ಎಚ್ ಡಿ ರೇವಣ್ಣ ವಿರುದ್ಧ ಹೊಳೆನರಸೀಪುರದ ಟೌನ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳು ಗಂಭೀರ ಸ್ವರೂಪದವಲ್ಲ. ಎಲ್ಲವೂ ಜಾಮೀನು ದೊರೆಯಬಹುದಾದ ಪ್ರಕರಣಗಳಾಗಿವೆ. ಒಂದೊಮ್ಮೆ ಪ್ರಜ್ವಲ್ ಮತ್ತು ರೇವಣ್ಣ ಅವರು ಎಫ್‌ಐಆರ್‌ಗೆ ತಡೆಯಾಜ್ಞೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದರೆ ಎಸ್‌ಐಟಿಯು ಸಿಆರ್‌ಪಿಸಿ ಸೆಕ್ಷನ್ 41(ಎ) ಅಡಿ ಪ್ರಜ್ವಲ್ ಮತ್ತು ರೇವಣ್ಣ ಅವರಿಗೆ ನೀಡಿರುವ ನೋಟಿಸ್‌ಗೂ ತಡೆ ಬೀಳಲಿದೆ ಎಂದು ಕಾನೂನು ತಜ್ಞರು ಹೇಳಿದ್ದಾರೆ.