Praveen Nettaru
Praveen Nettaru 
ಸುದ್ದಿಗಳು

ಪ್ರವೀಣ್‌ ಕೊಲೆ ಪ್ರಕರಣ: ಐವರು ಆರೋಪಿಗಳ ವಿರುದ್ಧ ಸಾರ್ವಜನಿಕ ಘೋಷಣೆ ಆದೇಶ ಮಾಡಿದ ವಿಶೇಷ ಎನ್‌ಐಎ ನ್ಯಾಯಾಲಯ

Bar & Bench

ಬಿಜೆಪಿಯ ಕಾರ್ಯಕರ್ತ, ದಕ್ಷಿಣ ಕನ್ನಡ ಜಿಲ್ಲೆಯ ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣದಲ್ಲಿ ನಾಪತ್ತೆಯಾಗಿರುವ ಐವರು ಆರೋಪಿಗಳ ವಿರುದ್ಧ ವಿಶೇಷ ಎನ್‌ಐಎ ನ್ಯಾಯಾಲಯವು ಈಚೆಗೆ ಸಾರ್ವಜನಿಕ ಘೋಷಣೆ ಹೊರಡಿಸುವಂತೆ ಆದೇಶ ಮಾಡಿದೆ.

ಎನ್‌ಐಎ ತನಿಖಾಧಿಕಾರಿಯಾದ ಎಂ ಷಣ್ಮುಗಂ ಅವರು ನಾಪತ್ತೆಯಾದ ಆರೋಪಿಗಳ ವಿರುದ್ಧ ಸಾರ್ವಜನಿಕ ಘೋಷಣೆ ಆದೇಶ ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ಎನ್‌ಐಎ ನ್ಯಾಯಾಲಯದ ನ್ಯಾಯಾಧೀಶರಾದ ಸಿ ಎಂ ಗಂಗಾಧರ ಅವರು ಪುರಸ್ಕರಿಸಿದ್ದಾರೆ.

ನಾಲ್ಕನೇ ಆರೋಪಿ ಮುಸ್ತಾಫಾ ಪೈಚರ್‌ ಅಲಿಯಾಸ್‌ ಮೊಹಮ್ಮದ್‌ ಮುಸ್ತಾಫ ಎಸ್‌, ಐದನೇ ಆರೋಪಿ ಮಸೂದ್‌ ಕೆ ಎ, ಆರನೇ ಆರೋಪಿ ಕೊಡಾಜೆ ಮೊಹಮ್ಮದ್‌ ಶರೀಫ್‌, ಏಳನೇ ಆರೋಪಿ ಅಬೂಬ್ಕರ್‌ ಸಿದ್ದಿಕ್‌ ಮತ್ತು 13ನೇ ಆರೋಪಿ ಉಮರ್‌ ಫಾರೂಕ್‌ ಎಂ ಆರ್‌ ಅವರ ವಿರುದ್ಧ ಜಾಮೀನುರಹಿತ ವಾರೆಂಟ್‌ (ಎನ್‌ಬಿಡಬ್ಲ್ಯು) ವಾಪಸ್‌ ಆಗಿದೆ. 24.02.2023, 28.02.2023, 07.03.2023, 05.04.2023, 04.05.2023 ಮತ್ತು 01.06.2023ರಂದು ಎನ್‌ಬಿಡಬ್ಲ್ಯು ಜಾರಿ ಮಾಡಲಾಗಿದೆ. ಹಲವು ಪ್ರಯತ್ನಗಳ ಬಳಿಕವೂ ಆರೋಪಿಗಳು ನಾಪತ್ತೆಯಾಗಿದ್ದು, ಬಂಧನದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಹೀಗಾಗಿ, ಆರೋಪಿಗಳ ವಿರುದ್ಧ ಸಾರ್ವಜನಿಕ ಘೋಷಣೆ ಹೊರಡಿಸಲು ಸೂಚಿಸಲಾಗಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ತಿಳಿಸಿದೆ.

ದಕ್ಷಿಣ ಕನ್ನಡದ ಮಹಮ್ಮದ್‌ ಶಿಯಾಬ್‌ (33), ಅಬ್ದುಲ್‌ ಬಶೀರ್‌ (29), ರಿಯಾಜ್‌ (28), ಮುಸ್ತಾಫಾ ಪೈಚಾರ್‌ ಅಲಿಯಾಸ್‌ ಮಹ್ಮದ್‌ ಮುಸ್ತಾಫ್‌ (43), ಮಸೂದ್‌ ಕೆ ಎ (40), ಕೊಡಾಜೆ ಮೊಹಮ್ಮದ್‌ ಶರೀಫ್‌ (53), ಅಬೂಬ್ಕರ್‌ ಸಿದ್ದಿಕ್, ನೌಫಾಲ್‌ ಎಂ, ಇಸ್ಮಾಯಿಲ್‌ ಶಫಿ, ಕೆ ಮಹಮ್ಮದ್‌ ಇಕ್ಬಾಲ್‌, ಶಹೀದ್‌ ಎಂ (38), ಮಹಮ್ಮದ್‌ ಶಫೀಕ್‌ ಜಿ (28), ಉಮರ್‌ ಫಾರೂಕ್‌ ಎಂ ಆರ್‌ (22), ಅಬ್ದುಲ್‌ ಕಬೀರ್‌ (33), ಮುಹಮ್ಮದ್‌ ಇಬ್ರಾಹಿಂ ಷಾ, ಸೈನುಲ್‌ ಅಬಿಡ್‌ ವೈ (23), ಶೇಖ್‌ ಸದ್ದಾಂ ಹುಸೇನ್‌ (28), ಜಾಕೀರ್‌ (30), ಎನ್‌ ಅಬ್ದುಲ್‌ ಹ್ಯಾರಿಸ್‌ (40) ಮತ್ತು ಕೊಡಗಿನ ಥುಫಾಲಿ ಎಂ ಎಚ್‌ ಅವರು ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.

ಆರೋಪಿಗಳ ವಿರುದ್ಧ 120ಬಿ, 153ಎ, 302 ಮತ್ತು 34 ಹಾಗೂ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ-1967 ಸೆಕ್ಷನ್‌ಗಳಾದ 16, 18 ಹಾಗೂ ಶಸ್ತ್ರಾಸ್ತ್ರ ಕಾಯಿದೆ ಸೆಕ್ಷನ್‌ 25(1)(ಎ) ಅಡಿಯ ಅಪರಾಧಗಳಿಗಾಗಿ ಆರೋಪ ಪಟ್ಟಿ ಸಲ್ಲಿಸಲಾಗಿದೆ.