Praveen Nettaru
Praveen Nettaru 
ಸುದ್ದಿಗಳು

ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣ: ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ ಎನ್‌ಐಎ

Bar & Bench

ಬಿಜೆಪಿಯ ಕಾರ್ಯಕರ್ತ, ದಕ್ಷಿಣ ಕನ್ನಡ ಜಿಲ್ಲೆಯ ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) 20 ಆರೋಪಿಗಳ ವಿರುದ್ಧ ವಿಶೇಷ ನ್ಯಾಯಾಲಯಕ್ಕೆ ಶುಕ್ರವಾರ ಆರೋಪ ಪಟ್ಟಿ ಸಲ್ಲಿಸಿದೆ.

ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ ಕಾರ್ಯಕರ್ತರು 2022ರ ಜುಲೈ 26ರಂದು ಮಾರಕಾಸ್ತ್ರಗಳಿಂದ ಪ್ರವೀಣ್‌ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದರು. ಸಮಾಜದಲ್ಲಿ ಭಯ ಹುಟ್ಟಿಸಲು ಈ ಕೃತ್ಯ ನಡೆಸಲಾಗಿತ್ತು ಎಂದು ಆರೋಪಿಸಲಾಗಿದೆ. ಈ ಸಂಬಂಧ ಜುಲೈ 27ರಂದು ಮಂಗಳೂರಿನ ಬೆಳ್ಳಾರೆ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ಆಗಸ್ಟ್‌ 4ರಂದು ಎನ್‌ಐಎ ಮತ್ತೆ ಪ್ರಕರಣ ದಾಖಲಿಸಿಕೊಂಡಿತ್ತು.

ಆರೋಪಿಗಳ ವಿರುದ್ಧ 120ಬಿ, 153ಎ, 302 ಮತ್ತು 34 ಹಾಗೂ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ-1967 ಸೆಕ್ಷನ್‌ಗಳಾದ 16, 18 ಹಾಗೂ ಶಸ್ತ್ರಾಸ್ತ್ರ ಕಾಯಿದೆ ಸೆಕ್ಷನ್‌ 25(1)(ಎ) ಅಡಿ ಅಪರಾಧಗಳಿಗೆ ಆರೋಪ ಪಟ್ಟಿ ಸಲ್ಲಿಸಲಾಗಿದೆ.

ದಕ್ಷಿಣ ಕನ್ನಡದ ಮಹಮ್ಮದ್‌ ಶಿಯಾಬ್‌ (33), ಅಬ್ದುಲ್‌ ಬಶೀರ್‌ (29), ರಿಯಾಜ್‌ (28), ಮುಸ್ತಾಫಾ ಪೈಚಾರ್‌ ಅಲಿಯಾಸ್‌ ಮಹ್ಮದ್‌ ಮುಸ್ತಾಫ್‌ (43), ಮಸೂದ್‌ ಕೆ ಎ (40), ಕೊಡಾಜೆ ಮೊಹಮ್ಮದ್‌ ಶರೀಫ್‌ (53), ಅಬೂಬ್ಕರ್‌ ಸಿದ್ದಿಕ್, ನೌಫಾಲ್‌ ಎಂ, ಇಸ್ಮಾಯಿಲ್‌ ಶಫಿ, ಕೆ ಮಹಮ್ಮದ್‌ ಇಕ್ಬಾಲ್‌, ಶಹೀದ್‌ ಎಂ (38), ಮಹಮ್ಮದ್‌ ಶಫೀಕ್‌ ಜಿ (28), ಉಮರ್‌ ಫಾರೂಕ್‌ ಎಂ ಆರ್‌ (22), ಅಬ್ದುಲ್‌ ಕಬೀರ್‌ (33), ಮುಹಮ್ಮದ್‌ ಇಬ್ರಾಹಿಂ ಷಾ, ಸೈನುಲ್‌ ಅಬಿಡ್‌ ವೈ (23), ಶೇಖ್‌ ಸದ್ದಾಂ ಹುಸೇನ್‌ (28), ಜಾಕೀರ್‌ (30), ಎನ್‌ ಅಬ್ದುಲ್‌ ಹ್ಯಾರಿಸ್‌ (40) ಮತ್ತು ಕೊಡಗಿನ ಥುಫಾಲಿ ಎಂ ಎಚ್‌ ಅವರು ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.

ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿರುವ ಆರೋಪಿಗಳ ಪೈಕಿ ಮುಸ್ತಾಫಾ ಪೈಚಾರ್‌, ಮಸೂದ್‌ ಕೆ ಎ, ಕೊಡಾಜೆ ಮೊಹಮ್ಮದ್‌ ಶರೀಫ್‌, ಅಬೂಬ್ಕರ್‌ ಸಿದ್ದಿಕ್‌, ಉಮ್ಮರ್‌ ಫಾರೂಕ್‌ ಎಂ ಆರ್‌, ಥುಫಾಲಿ ಎಂ ಎಚ್‌ ನಾಪತ್ತೆಯಾಗಿದ್ದು, ಅವರ ಬಂಧನಕ್ಕೆ ಬಹುಮಾನ ಘೋಷಿಸಲಾಗಿದೆ.

ಇದೇ ವೇಳೆ, ಪಿಎಫ್‌ಐ ತನ್ನ ಕಾರ್ಯಸೂಚಿಯ ಭಾಗವಾಗಿ, ಸಮಾಜದಲ್ಲಿ ಭಯ, ಕೋಮು ದ್ವೇಷ, ಬಿಗುವಿನ ವಾತಾವರಣ ಸೃಷ್ಟಿಸಲು ಹಾಗೂ 2047ರ ವೇಳೆಗೆ ಇಸ್ಲಾಮಿಕ್‌ ಆಡಳಿತ ಜಾರಿಗೊಳಿಸುವ ನಿಟ್ಟಿನಲ್ಲಿ ಹತ್ಯಾ ತಂಡಗಳ (ಕಿಲ್ಲರ್‌ ಸ್ಕ್ವಾಡ್‌) ಮೂಲಕ ನಿರ್ದಿಷ್ಟ ವ್ಯಕ್ತಿಗಳನ್ನು ಕೊಲೆ ಮಾಡುವುದರ ಭಾಗವಾಗಿ ಪ್ರವೀಣ್‌ ಹತ್ಯೆ ಮಾಡಲಾಗಿದೆ ಎಂದು ಎನ್‌ಐಎ ತನಿಖೆಯ ವೇಳೆ ತಿಳಿದು ಬಂದಿರುವುದಾಗಿ ಕೆಲ ಮಾಧ್ಯಮಗಳು ವರದಿ ಮಾಡಿವೆ.

ಈ ಸೇವಾ ತಂಡದ ಸದಸ್ಯರಿಗೆ ಶಸ್ತ್ರಾಸ್ತ್ರ, ದಾಳಿಯ ತರಬೇತಿ, ನಿರ್ದಿಷ್ಟ ಗುಂಪು ಅಥವಾ ಸಮುದಾಯಗಳ ನಾಯಕರ ಮೇಲೆ ನಿಗಾ ಇಡುವುದು, ಕೊಲ್ಲ ಬೇಕಾದವರನ್ನು ಗುರುತಿಸುವುದರ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಹಿರಿಯ ಪಿಎಫ್‌ಐ ನಾಯಕರ ನಿರ್ದೇಶನದಂತೆ ಹತ್ಯಾ ತಂಡಗಳ ಸದಸ್ಯರು ಗುರುತಿಸಲಾದ ನಾಯಕರನ್ನು ಹತ್ಯೆ ಮಾಡುತ್ತಾರೆ ಎಂದು ತನಿಖೆಯಿಂದ ತಿಳಿದು ಬಂದಿರುವುದಾಗಿ ಎನ್‌ಐಎ ವಿವರಿಸಿದೆ ಎನ್ನಲಾಗಿದೆ.

ಬೆಂಗಳೂರು, ಸುಳ್ಯ ಪಟ್ಟಣ ಹಾಗೂ ಬೆಳ್ಳಾರೆಯಲ್ಲಿ ಪಿತೂರಿ ಸಭೆ ನಡೆದಿದ್ದು, ಜಿಲ್ಲಾ ಹತ್ಯಾ ತಂಡದ ಮುಸ್ತಾಫಾ ಪೈಚಾರ್‌ಗೆ ನಿರ್ದಿಷ್ಟ ಸಮುದಾಯದ ಪ್ರಮುಖ ನಾಯಕರನ್ನು ಕೊಲೆ ಮಾಡಲು ಸೂಚಿಸಲಾಗಿತ್ತು. ಇದರ ಭಾಗವಾಗಿ ಬಿಜೆಪಿಯ ಜಿಲ್ಲಾ ಯುವ ಮೋರ್ಚಾ ಮುಖಂಡ ಪ್ರವೀಣ್‌ ನೆಟ್ಟಾರು ಅವರನ್ನು ಸಾರ್ವಜನಿಕವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ಎನ್‌ಐಎ ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ಮಾಧ್ಯಮ ವರದಿಗಳಲ್ಲಿ ಉಲ್ಲೇಖಿಸಲಾಗಿದೆ.