ಸುದ್ದಿಗಳು

ಎಲ್ಲರಿಗೂ ಲಸಿಕೆ ದೊರೆಯಲಿ ಎಂದು ಪ್ರಾರ್ಥಿಸೋಣ, ನಂತರವಷ್ಟೇ ಭೌತಿಕ ವಿಚಾರಣೆ ಆರಂಭಿಸಬಹುದು: ನ್ಯಾ. ಡಿ ವೈ ಚಂದ್ರಚೂಡ್

Bar & Bench

ಎಲ್ಲರಿಗೂ ಲಸಿಕೆ ದೊರೆಯುವಂತಾಗಿ ಭೌತಿಕ ವಿಚಾರಣೆಗೆ ನ್ಯಾಯಾಲಯಗಳು ಮರಳುವಂತಾಗಲಿ ಎಂದು ಸುಪ್ರೀಂ ಕೋರ್ಟ್‌ ನ್ಯಾ. ಡಿ ವೈ ಚಂದ್ರಚೂಡ್‌ ಅವರು ಮಂಗಳವಾರ ಪ್ರಕರಣದ ವಿಚಾರಣೆಯೊಂದರ ವೇಳೆ ಆಶಿಸಿದರು.

ಈ ವರ್ಷದ ಆಗಸ್ಟ್‌ ತಿಂಗಳಿಗೆ ಪಟ್ಟಿ ಮಾಡಲಾಗಿರುವ ಪ್ರಕರಣವೊಂದರ ವಿಚಾರಣೆ ನಡೆಸುವ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಈ ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಜರಾದ ವಕೀಲರೊಬ್ಬರು, “ಆಗಸ್ಟ್‌ ವೇಳೆಗೆ ಭೌತಿಕ ವಿಚಾರಣೆ ನಡೆಯಲಿ ಎಂದು ನಾವು ದೇವರನ್ನು ಪ್ರಾರ್ಥಿಸೋಣ” ಎಂದರು.

ಇದಕ್ಕೆ ಸ್ಪಂದಿಸಿದ ನ್ಯಾಯಮೂರ್ತಿಗಳು “ಎಲ್ಲರಿಗೂ ಲಸಿಕೆ ದೊರೆಯಲಿ ಎಂದು ಪ್ರಾರ್ಥಿಸೋಣ, ನಂತರವಷ್ಟೇ ಭೌತಿಕ ವಿಚಾರಣೆ ಆರಂಭಿಸಬಹುದು” ಎಂದು ಪ್ರತಿಕ್ರಿಯಿಸಿದರು. ದೇಶದ ಕೋವಿಡ್‌ ಪರಿಸ್ಥಿತಿ ನಿರ್ವಹಣೆ ಕುರಿತು ದಾಖಲಿಸಿಕೊಳ್ಳಲಾಗಿರುವ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆಯನ್ನು ನ್ಯಾ. ಚಂದ್ರಚೂಡ್‌ ನೇತೃತ್ವದ ನ್ಯಾ. ಎಲ್‌ ನಾಗೇಶ್ವರ ರಾವ್‌, ನ್ಯಾ. ರವೀಂದ್ರ ಭಟ್‌ ಅವರನ್ನು ಒಳಗೊಂಡ ಪೀಠ ವಿಚಾರಣೆ ನಡೆಸುವ ವೇಳೆ ಈ ಭಾವನೆ ವ್ಯಕ್ತವಾಯಿತು.

ಕೋವಿಡ್‌ ಲಸಿಕೆ ಬೆಲೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತಳೆದಿರುವ ದ್ವಿಮುಖ ನೀತಿಯನ್ನು ಸೋಮವಾರ ಪ್ರಶ್ನಿಸಿದ್ದ ಪೀಠ “ದೊಡ್ಡ ಪ್ರಮಾಣದಲ್ಲಿ ಖರೀದಿ ಮಾಡುತ್ತಿರುವುದರಿಂದ ಕಡಿಮೆ ಬೆಲೆಗೆ ಪಡೆಯುತ್ತಿರುವುದಾಗಿ ಕೇಂದ್ರ ಹೇಳುತ್ತಿದೆ. ಇದು ತರ್ಕಬದ್ಧವಾಗಿದ್ದರೆ ರಾಜ್ಯಗಳು ಏಕೆ ಹೆಚ್ಚಿನ ಬೆಲೆ ನೀಡಬೇಕು? ದೇಶಾದ್ಯಂತ ಲಸಿಕೆಗಳಿಗೆ ಒಂದೇ ಬೆಲೆ ನಿಗದಿಯಾಗಬೇಕು. ಕಳೆದ ಎರಡು ತಿಂಗಳಲ್ಲಿ ಸಾಂಕ್ರಾಮಿಕ ಉಲ್ಬಣಿಸಿದೆ” ಎಂದಿತ್ತು. ಡಿಜಿಟಲ್‌ ಕಂದರದಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಲಸಿಕೆ ಪಡೆಯಲು ಜನ ಎದುರಿಸುತ್ತಿರುವ ಸಮಸ್ಯೆಗಳನ್ನು ಪ್ರಸ್ತಾಪಿಸಿ ಬೇಗ ಎಚ್ಚೆತ್ತುಕೊಳ್ಳಿ ಎಂದು ಕಿವಿಮಾತು ಹೇಳಿತ್ತು.

ಕಳೆದ ಮಾರ್ಚ್‌ 15ರಿಂದ ಸೀಮಿತ ರೀತಿಯಲ್ಲಿ ಭೌತಿಕ ವಿಚಾರಣೆ ಆರಂಭಿಸಲು ಸುಪ್ರೀಂಕೋರ್ಟ್‌ ಮುಂದಾಗಿತ್ತು. ಅಲ್ಲದೆ ಭೌತಿಕ ಮತ್ತು ವರ್ಚುವಲ್‌ ವಿಚಾರಣೆಗಳೆರಡಕ್ಕೂ ಆಸ್ಪದ ಕೊಡುವ ಹೈಬ್ರಿಡ್‌ ವ್ಯವಸ್ಥೆಯನ್ನು ಕೂಡ ಅಳವಡಿಸಿಕೊಂಡಿತ್ತು. ಆದರೆ ಕೋವಿಡ್‌ ಎರಡನೇ ಅಲೆಯಿಂದಾಗಿ ಸೋಂಕು ಉಲ್ಪಣಿಸಿದ ಪರಿಣಾಮ ತಮ್ಮ ಮನೆಗಳಿಂದಲೇ ವೀಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡೆಸಲು ಮುಂದಾಯಿತು.