ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಜಯಲಲಿತಾ ಅವರ ಆಪ್ತೆ ವಿ ಕೆ ಶಶಿಕಲಾ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದಲ್ಲಿದ್ದಾಗ ಐಷಾರಾಮಿ ಸೌಕರ್ಯ ಕಲ್ಪಿಸಲು ಲಂಚ ಪಡೆಯಲಾಗಿತ್ತು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮುಚ್ಚಿದ ಲಕೋಟೆಯಲ್ಲಿ ಈ ಕುರಿತಾದ ವಾಸ್ತವಿಕ ವರದಿ ಸಲ್ಲಿಸುವಂತೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಶುಕ್ರವಾರ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿ ಯಾವುದೇ ತೆರನಾದ ತನಿಖೆ ಕೈಗೊಂಡಿಲ್ಲ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯದ ಗಮನಸೆಳೆದ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಎನ್ ಎಸ್ ಸಂಜಯ್ ಗೌಡ ನೇತೃತ್ವದ ವಿಭಾಗೀಯ ಪೀಠ ಆದೇಶ ಮಾಡಿದೆ.
ಈ ಮಧ್ಯೆ, ತನಿಖೆ ಪೂರ್ಣಗೊಳಿಸಲು ಮತ್ತಷ್ಟು ಕಾಲಾವಕಾಶ ನೀಡುವಂತೆ ಎಸಿಬಿ ಪರ ವಕೀಲರು ನ್ಯಾಯಾಲಯವನ್ನು ಕೋರಿದರು. ತನಿಖೆಯ ವಿಸ್ತೃತ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಆದೇಶಿಸಿದ ಪೀಠವು ಪ್ರಕರಣರ ವಿಚಾರಣೆಯನ್ನು ಆಗಸ್ಟ್ 25ಕ್ಕೆ ಮುಂದೂಡಿತು.
ಎರಡು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಬೇಕು ಎಂದು ಎಸಿಬಿಗೆ ನಿರ್ದೇಶನ ನೀಡಿದ್ದ ನ್ಯಾಯಾಲಯವು ಚೆನ್ನೈ ಮೂಲದ ಶಿಕ್ಷಣ ತಜ್ಞೆ ಕೆ ಎಸ್ ಗೀತಾ ಸಲ್ಲಿಸಿದ್ದ ಮನವಿಯನ್ನು ಜೂನ್ 11ರಂದು ವಿಲೇವಾರಿ ಮಾಡಿತ್ತು. ಪತ್ರಿಕೆಯೊಂದರ ವರದಿ ಪ್ರಸ್ತಾಪಿಸಿ ಎಸಿಬಿಯು ಬೆಳಗಾವಿಯ ಹಿಂಡಲಗಾ ಜೈಲಿನ ಮೇಲೆ ದಾಳಿ ನಡೆಸಿದ್ದರ ಕುರಿತು ಅರ್ಜಿದಾರೆ ತಗಾದೆ ಎತ್ತಿದರು.
2014ರಲ್ಲಿ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಜಯಲಲಿತಾ ಮತ್ತು ಶಶಿಕಲಾ ಸೇರಿದಂತೆ ನಾಲ್ವರು ದೋಷಿಗಳು ಎಂದು ವಿಚಾರಣಾಧೀನ ನ್ಯಾಯಾಲಯ ತೀರ್ಪು ನೀಡಿತ್ತು. ಇದನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು. ಹೀಗಾಗಿ, ಶಶಿಕಲಾ ಅವರು 2017ರ ಫೆಬ್ರುವರಿ 15ರಂದು ಪೊಲೀಸರಿಗೆ ಶರಣಾಗಿ, 2020ರ ಜನವರಿ 21ರ ವರೆಗೆ ಜೈಲು ಶಿಕ್ಷೆ ಪೂರೈಸಿದ್ದರು.
ಈ ನಡುವೆ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಶಿಕಲಾ ಅವರಿಗೆ ವಿಶೇಷ ಸೌಲಭ್ಯ ಕಲ್ಪಿಸಲಾಗಿತ್ತು ಎಂದು ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ಅವರು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ಉಲ್ಲೇಖಿಸಿದ್ದರು. “ಜೈಲಿನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ಶಶಿಕಲಾ ಅವರಿಗೆ ವಿಶೇಷ ಆತಿಥ್ಯ ನೀಡಲಾಗಿತ್ತು” ಎಂದು ಐಪಿಎಸ್ ಅಧಿಕಾರಿ ಡಿ ರೂಪಾ ಆರೋಪಿಸಿದ್ದರು. ಹೀಗಾಗಿ, ಸರ್ಕಾರವು ವಿನಯ್ ಕುಮಾರ್ ನೇತೃತ್ವದಲ್ಲಿ ತನಿಖೆಗಾಗಿ ಸಮಿತಿ ರಚನೆ ಮಾಡಿತ್ತು. ಈ ವರದಿಯನ್ನು ಅರ್ಜಿದಾರರು ತಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದರು.