pregnant woman and Bombay high court
pregnant woman and Bombay high court 
ಸುದ್ದಿಗಳು

ಮಾನಸಿಕ ಆರೋಗ್ಯದ ಮೇಲೆ ಪರಿಣಾಮ: ವಿಚ್ಛೇದನ ಕೋರಿದ್ದ ಮಹಿಳೆಗೆ ಗರ್ಭಪಾತಕ್ಕೆ ಅನುಮತಿಸಿದ ಬಾಂಬೆ ಹೈಕೋರ್ಟ್‌

Bar & Bench

ಪ್ರಕರಣವೊಂದರಲ್ಲಿ ಪತಿಯು ಮಗುವಿನ ಆರೈಕೆಯ ಜವಾಬ್ದಾರಿ ನಿರಾಕರಿಸಿದ ಹಿನ್ನೆಲೆಯಲ್ಲಿ ಪತ್ನಿ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂಬುದನ್ನು ಅರಿತ ಬಾಂಬೆ ಹೈಕೋರ್ಟ್‌ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗಿದ್ದ 23 ವಾರಗಳ ಗರ್ಭಿಣಿಗೆ ಗರ್ಭಪಾತ ಮಾಡಿಸಿಕೊಳ್ಳುವ ಸ್ವಾತಂತ್ರ್ಯವನ್ನು ಈಚೆಗೆ ನೀಡಿತು.

ಗರ್ಭಾವಸ್ಥೆಯ ಜೊತೆಗೆ ನಿರಂತರವಾದ ಕೌಟುಂಬಿಕ ದೌರ್ಜನ್ಯದಿಂದಾಗಿ ತನ್ನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಉಂಟಾಗಿರುವುದರಿಂದ ವೈದ್ಯಕೀಯವಾಗಿ ಗರ್ಭಪಾತ ಮಾಡಿಸಿಕೊಳ್ಳಲು ನಿರ್ದೇಶಿಸಬೇಕು ಎಂದು ಅರ್ಜಿದಾರೆ ಕೋರಿದ್ದರು.

“ಅರ್ಜಿದಾರೆಗೆ ಅನುಮತಿ ನಿರಾಕರಿಸುವುದು ಆಕೆಯ ಗರ್ಭಾವಸ್ಥೆಯನ್ನು ಮುಂದುವರಿಸುವಂತೆ ಒತ್ತಾಯಿಸಿದಂತಾಗುತ್ತದೆ. ಇದು ಕೆಲ ಸಂದರ್ಭದಲ್ಲಿ ಅವಳ ಮೇಲೆ ಗಂಭೀರವಾದ ಹೊರೆಯನ್ನು ಹೊರಿಸುವುದು, ದಬ್ಬಾಳಿಕೆಯಾಗುವುದು ಮಾತ್ರವಲ್ಲದೆ ಆಕೆಯ ಮಾನಸಿಕ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ” ಎಂದು ನ್ಯಾಯಮೂರ್ತಿಗಳಾದ ಉಜ್ಜಲ್‌ ಭುಯಾನ್‌ ಮತ್ತು ಮಾಧವ್‌ ಜೆ ಜಾಮ್‌ದಾರ್‌ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

ಮಾನಸಿಕ ಆರೋಗ್ಯವು ಮನೋರೋಗಕ್ಕಿಂತ ಹೆಚ್ಚು ಮುಖ್ಯವಾಗಿದೆ. ಇದು ಮಹಿಳೆಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಲಿದ್ದು, ವೈದ್ಯಕೀಯ ಗರ್ಭಪಾತ ಕಾಯಿದೆಯ ಸೆಕ್ಷನ್‌ 3(2)(ಬಿ)(ಐ) ಅಡಿ 20 ವಾರಗಳಿಗಿಂತ ಹೆಚ್ಚಿನ ಗರ್ಭಧಾರಣೆಯನ್ನು ಗರ್ಭಪಾತ ಮಾಡಿಸುವಾಗ ಮಾನಸಿಕ ಆರೋಗ್ಯವನ್ನು ಪರಿಗಣಿಸಬೇಕೆ ವಿನಾ ಮನೋರೋಗವನ್ನಲ್ಲ ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರೆಯು ಪತಿಯಿಂದ ಕೌಟುಂಬಿಕ ಕಿರುಕುಳಕ್ಕೆ ಒಳಗಾಗಿದ್ದು, ಸಕ್ಷಮ ಮ್ಯಾಜಿಸ್ಟ್ರೇಟ್‌ ಮುಂದೆ ದೂರು ದಾಖಲಿಸಿದ್ದಾರೆ. ವಿಚ್ಛೇದನ ಮೂಲಕ ವಿವಾಹ ಬಂಧನ ಅಳಿಸಿಹಾಕುವ ಸಂಬಂಧ ಅವರು ಅರ್ಜಿ ಸಲ್ಲಿಸಿದ್ದಾರೆ ಎಂದು ಮನವಿದಾರೆ ಪರ ವಕೀಲೆ ಅದಿತಿ ಸಕ್ಸೇನಾ ನ್ಯಾಯಾಲಯದ ಗಮನಸೆಳೆದರು.

ಮಗು ಜನಿಸಿದರೂ ಪತಿ ಕಡೆಯಿಂದ ಪತ್ನಿಗೆ ಆರ್ಥಿಕ ಮತ್ತು ಭಾವನಾತ್ಮಕ ಬೆಂಬಲ ದೊರೆಯುವುದಿಲ್ಲ. ಯಾವುದೇ ಆದಾಯದ ಮೂಲ ಇಲ್ಲದಿರುವುದರಿಂದ ಮಗುವನ್ನು ಬೆಳೆಸುವುದು ಕಷ್ಟವಾಗಲಿದೆ ಎಂದರು.

“ಗರ್ಭಧಾರಣೆ ಮುಂದುವರಿಸುವ ಸಂಬಂಧ ಮಹಿಳೆಯ ಮಾನಸಿಕ ಸಾಮರ್ಥ್ಯ ಮಾಪನ ಮಾಡಲು ರಚಿಸಲಾಗಿದ್ದ ಜೆ ಜೆ ಆಸ್ಪತ್ರೆಯ ವೈದ್ಯಕೀಯ ಮಂಡಳಿ ವರದಿ ಸಲ್ಲಿಸಿದ್ದು, ವೈವಾಹಿಕ ಬದುಕಿನಲ್ಲಿ ಏರುಪೇರಾಗಿರುವುದರಿಂದ ಅರ್ಜಿದಾರೆ ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾರೆ” ಎಂದು ಹೇಳಿದೆ.

ಎಲ್ಲ ವಿಚಾರ ಮತ್ತು ಪರಿಸ್ಥಿತಿಯನ್ನು ಪರಿಗಣಿಸಿರುವ ಪೀಠವು ತಡಮಾಡದೇ ಮುಂಬೈನ ಡಾ. ಆರ್‌ ಎನ್‌ ಕೂಪರ್‌ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸಿಕೊಳ್ಳುವ ಸ್ವಾತಂತ್ರ್ಯವನ್ನು ಅರ್ಜಿದಾರೆಗೆ ಕಲ್ಪಿಸಿದೆ. ಈಚೆಗೆ ಕೇರಳ ಹೈಕೋರ್ಟ್‌ ಸಹ 22 ವಾರಗಳ ಮಾನಸಿಕವಾಗಿ ಸ್ಥಿರತೆಹೊಂದಿರದ ಗರ್ಭಿಣಿಗೆ ಗರ್ಭಪಾತಕ್ಕೆ ಅನುಮತಿಸಿದ್ದನ್ನು ಇಲ್ಲಿ ನೆನೆಯಬಹುದು.