Government of National Capital Territory of Delhi (Amendment) Act 2023  
ಸುದ್ದಿಗಳು

ಜಿಎನ್‌ಸಿಟಿಡಿ ಹಾಗೂ ಡಿಜಿಟಲ್ ವೈಯಕ್ತಿಕ ಮಾಹಿತಿ ರಕ್ಷಣೆಗೆ ಸಂಬಂಧಿಸಿದ ಎರಡು ಮಸೂದೆಗಳಿಗೆ ರಾಷ್ಟ್ರಪತಿ ಅಂಕಿತ

Bar & Bench

ದೆಹಲಿಯ ರಾಷ್ಟ್ರ ರಾಜಧಾನಿ ಪ್ರದೇಶ ಸರ್ಕಾರ (ತಿದ್ದುಪಡಿ) ಕಾಯಿದೆ- 2023 ಹಾಗೂ ಡಿಜಿಟಲ್‌ ವೈಯಕ್ತಿಕ ಮಾಹಿತಿ ರಕ್ಷಣೆ ಮಸೂದೆ- 2023ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶುಕ್ರವಾರ ಅಂಕಿತ ಹಾಕಿದ್ದಾರೆ.

ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ ಸರ್ಕಾರ (ತಿದ್ದುಪಡಿ) ಮಸೂದೆ 2023ನ್ನು ಆಗಸ್ಟ್ 7ರಂದು ರಾಜ್ಯಸಭೆ ಅಂಗೀಕರಿಸಿತ್ತು. ಮೇ 19ರಂದು ಭಾರತದ ರಾಷ್ಟ್ರಪತಿಗಳು ಘೋಷಿಸಿದ್ದ ದೆಹಲಿ ಸೇವೆಗಳಿಗೆ ಸಂಬಂಧಿಸಿದ ಸುಗ್ರೀವಾಜ್ಞೆ ಬದಲಿಗೆ ಈ ಮಸೂದೆ ಮಂಡನೆಯಾಗಿದ್ದು ಅಂಕಿತ ದೊರೆತಿದೆ.

ದೆಹಲಿ ಸೇವೆಗಳ ಮಸೂದೆಯನ್ನು ಈಗ ದೆಹಲಿಯ ರಾಷ್ಟ್ರ ರಾಜಧಾನಿ ಪ್ರದೇಶ (ತಿದ್ದುಪಡಿ) ಕಾಯಿದೆ- 2023 ಎಂದು ಹೆಸರಿಸಲಾಗಿದ್ದು, ಅಧಿಸೂಚನೆಯ ಪ್ರಕಾರ ಮೇ 19, 2023ರಿಂದ ಜಾರಿಯಲ್ಲಿದೆ ಎಂದು ಪರಿಗಣಿಸಲಾಗುತ್ತದೆ.

ಮಸೂದೆಯನ್ನು ರಾಜ್ಯಸಭೆ ಆಗಸ್ಟ್ 7ರಂದು ಅಂಗೀಕರಿಸಿತ್ತು. ಒಟ್ಟು 131 ಸಂಸದರು ಮಸೂದೆ ಅಂಗೀಕಾರದ ಪರವಾಗಿ ಮತ ಚಲಾಯಿಸಿದರೆ 102 ಸಂಸದರು ವಿರುದ್ಧವಾಗಿ ಮತ ಚಲಾಯಿಸಿದ್ದರು. ಇದಕ್ಕೂ ಮುನ್ನ ಅಂದರೆ ಆಗಸ್ಟ್ 3ರಂದು ಲೋಕಸಭೆ ಧ್ವನಿಮತದ ಮೂಲಕ ಮಸೂದೆಯನ್ನು ಅಂಗೀಕರಿಸಿತ್ತು.

ಮಸೂದೆಯು ರಾಷ್ಟ್ರೀಯ ರಾಜಧಾನಿ ನಾಗರಿಕ ಸೇವಾ ಪ್ರಾಧಿಕಾರ (ಪ್ರಾಧಿಕಾರ) ರಚನೆಗೆ ಅವಕಾಶ ನೀಡುತ್ತದೆ. ದೆಹಲಿ ಮುಖ್ಯಮಂತ್ರಿ ಅವರು ಪ್ರಾಧಿಕಾರದ ಪದನಿಮಿತ್ತ ಅಧ್ಯಕ್ಷರಾಗಿದ್ದರೆ ಮುಖ್ಯ ಕಾರ್ಯದರ್ಶಿ ಈ ಸಂಸ್ಥೆಯ ಪದನಿಮಿತ್ತ ಸದಸ್ಯರಾಗಿರುತ್ತಾರೆ. ದೆಹಲಿ ಸರ್ಕಾರದ ಪ್ರಧಾನ ಗೃಹ ಕಾರ್ಯದರ್ಶಿ ಪ್ರಾಧಿಕಾರದ ಪದನಿಮಿತ್ತ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

DIGITAL PERSONAL DATA PROTECTION BILL, 2023

ಡಿಜಿಟಲ್‌ ವೈಯಕ್ತಿಕ ಮಾಹಿತಿ ರಕ್ಷಣಾ ಮಸೂದೆ

ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದ್ದ ಡಿಜಿಟಲ್‌ ವೈಯಕ್ತಿಕ ಮಾಹಿತಿ ರಕ್ಷಣಾ ಮಸೂದೆಗೆ ಕೂಡ ರಾಷ್ಟ್ರಪತಿಯವರು ಶುಕ್ರವಾರ ಒಪ್ಪಿಗೆ ನೀಡಿದರು.

ವಿಧೇಯಕವನ್ನು ಆಗಸ್ಟ್ 9ರಂದು ರಾಜ್ಯಸಭೆ ಸರ್ವಾನುಮತದಿಂದ ಅಂಗೀಕರಿಸಿದರೆ, ಲೋಕಸಭೆ ಆಗಸ್ಟ್ 7 ರಂದು ಧ್ವನಿ ಮತದ ಮೂಲಕ ಮಸೂದೆಯನ್ನು ಅಂಗೀಕರಿಸಿತು, ಆದರೆ ವಿರೋಧ ಪಕ್ಷದ ನಾಯಕರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಡಿಜಿಟಲ್ ವೈಯಕ್ತಿಕ ಮಾಹಿತಿಯನ್ನು ಕಾನೂನು ಬದ್ಧವಾಗಿ ಬಳಸುವ ಅಗತ್ಯತೆಗಳ ಜೊತೆಗೆ ಮಾಹಿತಿ ರಕ್ಷಿಸುವ ವ್ಯಕ್ತಿಗಳ ಹಕ್ಕನ್ನೂ ಕಾಯ್ದುಕೊಳ್ಳುವ ಮೂಲಕ ಡಿಜಿಟಲ್‌ ವೈಯಕ್ತಿಕದತ್ತಾಂಶ ನಿರ್ವಹಿಸುವ ಗುರಿ ಮಸೂದೆಯದ್ದಾಗಿದೆ.

ತಮ್ಮ ವೈಯಕ್ತಿಕ ದತ್ತಾಂಶವನ್ನು ರಕ್ಷಿಸುವ ವ್ಯಕ್ತಿಗಳ ಹಕ್ಕಿಗೆ ಮಾನ್ಯತೆ ನೀಡುವ ಜೊತೆಗೆ ಕಾನೂನುಬದ್ಧ ಉದ್ದೇಶಗಳಿಗಾಗಿ ಮತ್ತು ಅದಕ್ಕೆ ಸಂಬಂಧಿಸಿದ ಅಥವಾ ಪ್ರಾಸಂಗಿಕ ವಿಷಯಗಳಿಗಾಗಿ ಅಂತಹ ವೈಯಕ್ತಿಕ ಮಾಹಿತಿಯನ್ನು ಪ್ರಕ್ರಿಯೆಗೊಳಪಡಿಸುವ ಅಗತ್ಯತೆಗಾಗಿ ಮಸೂದೆ ರೂಪುಗೊಂಡಿದೆ ಎಂದು ಮಸೂದೆಯ ಪಠ್ಯದಲ್ಲಿ ತಿಳಿಸಲಾಗಿದೆ.

ಆನ್‌ಲೈನ್ ಮತ್ತು ಡಿಜಿಟಲೀಕರಣಗೊಂಡ ಆಫ್‌ಲೈನ್ ದತ್ತಾಂಶ ಸೇರಿದಂತೆ ಭಾರತದಲ್ಲಿ ಡಿಜಿಟಲ್ ವೈಯಕ್ತಿಕ ಮಾಹಿತಿ ದತ್ತಾಂಶ ಸಂಸ್ಕರಣೆಗೆ ಮಸೂದೆಯು ಅನುವು ಮಾಡಿಕೊಡುತ್ತದೆ. ಇದು ಭಾರತೀಯ ಸರಕುಗಳು ಅಥವಾ ಸೇವೆಗಳನ್ನು ನೀಡುವುದಕ್ಕಾಗಿ ಭಾರತದ ಹೊರಗಿನ ಪ್ರಕ್ರಿಯೆಗೂ ವಿಸ್ತರಣೆಯಾಗುತ್ತದೆ.

ಸ್ವಯಂಪ್ರೇರಿತವಾಗಿ ಮಾಹಿತಿ ಹಂಚಿಕೊಳ್ಳುವಿಕೆ ಇಲ್ಲವೇ ಪ್ರಭುತ್ವ -ಸಂಬಂಧಿತ ಪ್ರಕ್ರಿಯೆಯಂತಹ ವಿನಾಯಿತಿಗಳ ಹೊರತಾಗಿ ಕಾನೂನುಬದ್ಧ ಪ್ರಕ್ರಿಯೆಗಾಗಿ ವೈಯಕ್ತಿಕ ಮಾಹಿತಿ ಪಡೆಯಲು ಸಮ್ಮತಿ ಅಗತ್ಯವಿದೆ.