ಒಕ್ಕೂಟ ವ್ಯವಸ್ಥೆ ಮತ್ತು ರಾಜ್ಯ ವ್ಯವಹಾರಗಳಲ್ಲಿ ರಾಜ್ಯಪಾಲರ ಪಾತ್ರದ ಸುತ್ತ ಮತ್ತೆ ಚರ್ಚೆ ಹುಟ್ಟುಹಾಕುವಂತಹ ತೀರ್ಪೊಂದನ್ನು ಸುಪ್ರೀಂ ಕೋರ್ಟ್ ಗುರುವಾರ ನೀಡಿದ್ದು ಶಾಸಕಾಂಗ ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಒಪ್ಪಿಗೆ ನೀಡುವ ವಿಚಾರವಾಗಿ ತಾನು ಏಪ್ರಿಲ್ 8ರಂದು ನೀಡಿದ್ದ ನಿರ್ದೇಶನಗಳು ತಪ್ಪಾಗಿದ್ದು ಅವು ಸಂವಿಧಾನ ಮತ್ತು ಅಧಿಕಾರ ಪ್ರತ್ಯೇಕತೆಗೆ ವಿರುದ್ಧ ಎಂದು ತೀರ್ಪು ನೀಡಿದೆ.
ಹಿಂದಿನ ತೀರ್ಪಿನಲ್ಲಿ ಕಾಲಮಿತಿ ನಿಗದಿಪಡಿಸಿರುವುದು ಮತ್ತು ರಾಷ್ಟ್ರಪತಿ ಇಲ್ಲವೇ ರಾಜ್ಯಪಾಲರು ಗಡುವಿನೊಳಗೆ ಮಸೂದೆಗಳಿಗೆ ಅಂಕಿತ ಹಾಕದಿದ್ದರೆ ಅದನ್ನು ಸಮ್ಮತಿ ಪಡೆದಿದೆ ಎಂದು ಭಾವಿಸಿ ಜಾರಿಗೆ ತರಲಾಗುತ್ತದೆ ಎಂದು ಹೇಳಿರುವುದು ರಾಜ್ಯಪಾಲರು ಇಲ್ಲವೇ ರಾಷ್ಟ್ರಪತಿಗಳ ಅಧಿಕಾರವನ್ನು ನ್ಯಾಯಾಲಯ ಕಸಿದುಕೊಳ್ಳುವುದಕ್ಕೆ ಸಮನಾಗಿದ್ದು ಇದಕ್ಕೆ ಅನುಮತಿ ನೀಡಲಾಗದು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ , ವಿಕ್ರಮ್ ನಾಥ್ , ಪಿ ಎಸ್ ನರಸಿಂಹ ಹಾಗೂ ಅತುಲ್ ಎಸ್. ಚಂದೂರ್‌ಕರ್ ಅವರಿದ್ದ ಪೀಠ ತಿಳಿಸಿದೆ.
ಸಂವಿಧಾನದ 200 ಮತ್ತು 201ನೇ ವಿಧಿಯಡಿ ನಿರ್ದಿಷ್ಟ ಕಾಲಮಿತಿಯ ನಂತರ ಅಂಕಿತವಿಲ್ಲದೆಯೂ ಅನುಮೋದನೆ ದೊರೆತಿದೆ ಎಂದು ಪರಿಭಾವಿಸುವುದು (ಡೀಮ್ಡ್ ಅಸೆಂಟ್) ಸಂವಿಧಾನ ಸಮ್ಮತವಲ್ಲ. ಏಕೆಂದರೆ ಸಾಂವಿಧಾನಿಕ ಅಧಿಕಾರಿಗಳಾದ ರಾಜ್ಯಪಾಲರು ಇಲ್ಲವೇ ರಾಷ್ಟ್ರಪತಿಗಳ ಸ್ಥಾನದಲ್ಲಿ ನ್ಯಾಯಾಲಯ ಕುಳಿತಂತಾಗುತ್ತದೆ. ಇದು ಸಂವಿಧಾನದ ಆಶಯ ಮತ್ತು ಅಧಿಕಾರ ಪ್ರತ್ಯೇಕತಾ ಸಿದ್ಧಾಂತಕ್ಕೆ ವಿರುದ್ಧ ಎಂದು ಅದು ಹೇಳಿದೆ.
ಮಸೂದೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ ಮಸೂದೆ ಕಾನೂನಾಗಿ ಜಾರಿಗೆ ಬಂದಾಗ ಮಾತ್ರ ಪರಿಶೀಲನೆ ನಡೆಸಬಹುದು. ಮಸೂದೆಗೆ ಅಂಕಿತ ಹಾಕುವುದು ವಿಳಂಬವಾಗಿರುವ ಸಂದರ್ಭದಲ್ಲಿ ನ್ಯಾಯಾಲಯ ಸೂಕ್ತ ಅವಧಿಯೊಳಗೆ ಕ್ರಮ ಕೈಗೊಳ್ಳಿ ಎಂಬ ಸೀಮಿತ ಹಸ್ತಕ್ಷೇಪ ಮಾಡಬಹುದು ಎಂದಿದೆ.
ಆದರೆ ರಾಜ್ಯಪಾಲರು ಸೂಪರ್ ಮುಖ್ಯಮಂತ್ರಿಯಂತೆ ವರ್ತಿಸಬಾರದು ಎಂದು ಎಚ್ಚರಿಕೆ ನೀಡಿರುವ ಪೀಠ ರಾಜ್ಯವೊಂದರಲ್ಲಿ ಎರಡು ಕಾರ್ಯಾಂಗ ಕೇಂದ್ರಗಳು ಇರುವಂತಿಲ್ಲ ಎಂದು ಕೂಡ ಅದು ಎಚ್ಚರಿಕೆ ನೀಡಿದೆ.
ನ್ಯಾಯಾಲಯದ ಪ್ರಮುಖ ಅವಲೋಕನಗಳು
ರಾಜ್ಯ ವಿಧಾನಮಂಡಲ ಅಂಗೀಕರಿಸಿದ ಮಸೂದೆಗಳ ಬಗ್ಗೆ ರಾಜ್ಯಪಾಲರು ಅಥವಾ ರಾಷ್ಟ್ರಪತಿಗಳು ಕ್ರಮ ಕೈಗೊಳ್ಳುವುದಕ್ಕೆ ನ್ಯಾಯಾಲಯ ಯಾವುದೇ ಗಡುವು ನಿಗದಿಪಡಿಸಲು ಸಾಧ್ಯವಿಲ್ಲ.
ರಾಜ್ಯಪಾಲರು/ರಾಷ್ಟ್ರಪತಿಗಳು ನಿಗದಿತ ಸಮಯದೊಳಗೆ ಕಾರ್ಯನಿರ್ವಹಿಸಲು ವಿಫಲರಾಗಿದ್ದಾರೆ ಎಂಬ ಕಾರಣಕ್ಕೆ ಅಂತಹ ಮಸೂದೆ ಜಾರಿಗೆ ಅವರ ಒಪ್ಪಿಗೆ ಪಡೆಯಲಾಗಿದೆ ಎಂದು ಭಾವಿಸುವಂತಿಲ್ಲ.
ಮಸೂದೆಗೆ ಸಂಬಂಧಿಸಿದಂತೆ ರಾಷ್ಟ್ರಪತಿ ಇಲ್ಲವೇ ರಾಜ್ಯಪಾಲರು ಕೂಗೊಂಡ ಕ್ರಮಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿಲ್ಲ.
ಮಸೂದೆ ಕಾನೂನಾದ ನಂತರವಷ್ಟೇ ನ್ಯಾಯಾಲಯದೆದುರು ಅದನ್ನು ಪ್ರಶ್ನಿಸಲು ಅವಕಾಶವಿರುತ್ತದೆ;
- ರಾಜ್ಯಪಾಲರು 200 ನೇ ವಿಧಿಯ ಅಡಿಯಲ್ಲಿ ಸೂಕ್ತ ಸಮಯದೊಳಗೆ ಅಂಕಿತಹ ಹಾಕದಿದ್ದರೆ ಸಾಂವಿಧಾನಿಕ ನ್ಯಾಯಾಲಯ ಸೀಮಿತ ನ್ಯಾಯಾಂಗ ಪರಿಶೀಲನೆ ಮಾಡಬಹುದು. ಈ ಸಂದರ್ಭದಲ್ಲಿ, ರಾಜ್ಯಪಾಲರ ವಿವೇಚನೆಯ ವಿಚಾರವಾಗಿ ಅದು ಯಾವುದೇ ಟಿಪ್ಪಣಿ ಮಾಡದೆ, ಸೂಕ್ತ ಸಮಯದೊಳಗೆ ಕ್ರಮ ಕೈಗೊಳ್ಳುವಂತೆ ಸೀಮಿತ ನಿರ್ದೇಶನ ನೀಡಬಹುದು.
ಹಿನ್ನೆಲೆ
ಸಂವಿಧಾನದ 200 ನೇ ವಿಧಿಯ ಅಡಿಯಲ್ಲಿ ರಾಜ್ಯ ಶಾಸಕಾಂಗ ಮಂಡಿಸಿದ ಮಸೂದೆಗಳಿಗೆ ಸಂಬಂಧಿಸಿದಂತೆ ರಾಜ್ಯಪಾಲರ ಅಧಿಕಾರ ಮತ್ತು ಜವಾಬ್ದಾರಿಗಳನ್ನು ವಿವರಿಸುವ ಮಹತ್ವದ ತೀರ್ಪನ್ನು ಏಪ್ರಿಲ್ 8ರಂದು ನೀಡಿದ್ದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠ ಆ ಮೂಲಕ ಸಂವಿಧಾನದ 201 ನೇ ವಿಧಿಯ ಅಡಿಯಲ್ಲಿ ಭಾರತದ ರಾಷ್ಟ್ರಪತಿಗಳ ಅಧಿಕಾರಗಳಿಗೆ ಇರುವ ಮಿತಿಯನ್ನೂ ವ್ಯಾಖ್ಯಾನಿಸಿತ್ತು.
ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಮಸೂದೆಗಳಿಗೆ ಒಪ್ಪಿಗೆ ನೀಡುವ ಪ್ರಕ್ರಿಯೆಯನ್ನು ನಿಯಂತ್ರಿಸುವ ಸಂವಿಧಾನದ 200 ಮತ್ತು 201 ನೇ ವಿಧಿಗಳು ಯಾವುದೇ ಗಡುವನ್ನು ಅಥವಾ ನಿರ್ದಿಷ್ಟ ಕಾರ್ಯವಿಧಾನದ ಅವಶ್ಯಕತೆಗಳನ್ನು ಸೂಚಿಸುವುದಿಲ್ಲ ಎಂದು ಒತ್ತಿ ಹೇಳಿದ್ದ ರಾಷ್ಟ್ರಪತಿ ಮುರ್ಮು ಅವರು ಸುಪ್ರೀಂ ಕೋರ್ಟ್‌ಗೆ 14 ಪ್ರಶ್ನೆಗಳನ್ನು ಕೇಳಿದ್ದರು.