ಸುದ್ದಿಗಳು

ನೂತನ ಐಟಿ ನಿಯಮಗಳ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಪಿಟಿಐ ಸುದ್ದಿಸಂಸ್ಥೆ

Bar & Bench

ನೂತನ ಐಟಿ ನಿಯಮಾವಳಿಗಳು ಸಂವಿಧಾನವನ್ನು ಮತ್ತು ಮೂಲ ನಿಬಂಧನೆಯಾದ ಮಾಹಿತಿ ತಂತ್ರಜ್ಞಾನ ಕಾಯಿದೆ - 2000 ಅನ್ನು ಉಲ್ಲಂಘಿಸಿದೆ ಎಂದು ಅರೋಪಿಸಿ ದೇಶದ ಮಹತ್ವದ ಸುದ್ದಿ ಸಂಸ್ಥೆ ಪ್ರೆಸ್‌ ಟ್ರಸ್ಟ್‌ ಆಫ್‌ ಇಂಡಿಯಾ ದೆಹಲಿ ಹೈಕೋರ್ಟ್‌ ಮೊರೆ ಹೋಗಿದೆ.

ಸಂವಿಧಾನದ 14, 19 (1) (ಎ), 19 (1) (ಜಿ) ವಿಧಿಗಳನ್ನು ಹಾಗೂ 2000ರ ಮಾಹಿತಿ ತಂತ್ರಜ್ಞಾನ ಕಾಯಿದೆಯನ್ನು ಉಲ್ಲಂಘಿಸುವ ಹಾಗೂ ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಪ್ರಕಟಿಸುವವರಿಗೆ ಕಡಿವಾಣ ಹಾಕುವ ಐಟಿ ನಿಯಮದ ಮೂರನೇ ಭಾಗವನ್ನು ಅನೂರ್ಜಿತಗೊಳಿಸಬೇಕೆಂದು ಅರ್ಜಿದಾರರು ಕೋರಿದ್ದಾರೆ. ಇಂತಹ ನಿಯಮಗಳು ಕಣ್ಗಾವಲು ಮತ್ತು ಭಯದ ಯುಗಕ್ಕೆ ಕಾರಣವಾಗುತ್ತವೆ. ಇದರಿಂದ ಸ್ವಯಂ ಸೆನ್ಸಾರ್‌ಶಿಪ್‌ ((ಸ್ವಯಂ ಪೂರ್ವ ಪರಾಮರ್ಶೆಗೆ) ಕಾರಣವಾಗುತ್ತದೆ ಎಂದು ಸುದ್ದಿಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ಈ ಸಂಬಂಧ ಕೇಂದ್ರಕ್ಕೆ ನೋಟಿಸ್‌ ನೀಡಿದ ಹೈಕೋರ್ಟ್‌ ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್‌ 20ಕ್ಕೆ ನಿಗದಿಪಡಿಸಿದೆ.

ಪಿಟಿಐ ವಿವಿಧ ಪತ್ರಿಕೆಗಳು, ಟಿವಿ ವಾಹಿನಿಗಳು, ರೇಡಿಯೊ ಜಾಲ ಹಾಗೂ ಜಾಲತಾಣಗಳು ಮತ್ತಿರರಿಗೆ ಚಂದಾ ಮೂಲಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ ಸೇವೆ ಒದಗಿಸುವ ದೇಶದ ಬಹುದೊಡ್ಡ ಸುದ್ದಿ ಸಂಸ್ಥೆಯಾಗಿದೆ.

ಅರ್ಜಿಯ ಪ್ರಮುಖ ಅಂಶಗಳು

  • ಸುದ್ದಿಯ ತಿರುಳನ್ನು ಮೇಲ್ವಿಚಾರಣೆ ನಡೆಸಲು ಈ ನಿಯಮಗಳು ಮೂರು ಹಂತದ ಆಡಳಿತ ಸೃಷ್ಟಿಸುತ್ತವೆ. ಅವುಗಳಲ್ಲಿ ಸ್ವನಿಯಂತ್ರಣ, ಸ್ವನಿಯಂತ್ರಣ ಸಂಸ್ಥೆಗಳು ಜೊತೆಗೆ ಕೇಂದ್ರ ಸರ್ಕಾರದ ಮೇಲ್ವಿಚಾರಣೆ ಸೇರಿದೆ.

  • ವಿಚಾರಣೆಗೆ ಅವಕಾಶ ನೀಡದೆ ಯಾವುದೇ ಸುದ್ದಿ ನಿರ್ಬಂಧಿಸುವ ಸಂಬಂಧ ಮಧ್ಯಂತರ ಆದೇಶ ಹೊರಡಿಸಲು ಮಾಹಿತಿ ಮತ್ತು ಪ್ರಸಾರ ಸಚಿವಾಲದಯ ಕಾರ್ಯದರ್ಶಿಗೆ ಈ ನಿಬಂಧನೆಗಳು ತುರ್ತು ಅಧಿಕಾರ ನೀಡುತ್ತವೆ.

  • ಅವು ವರದಿ ಮಾಡುವುದನ್ನು ಕಡ್ಡಾಯಗೊಳಿಸುತ್ತವೆ ಮತ್ತು ಪ್ರಕಟಿಸುವವರಿಗೆ ನೀತಿ ಸಂಹಿತೆ ಒದಗಿಸುತ್ತವೆ.

  • ಡಿಜಿಟಲ್‌ ಸುದ್ದಿ ಪೋರ್ಟಲ್‌ಗಳಲ್ಲಿನ ವಿಚಾರಗಳನ್ನು ಪರಿಣಾಮದಲ್ಲಿ ದಿಗ್ದರ್ಶಿಸುವ ಮೂಲಕ ಸಂವಿಧಾನವನ್ನು ಉಲ್ಲಂಘಿಸುತ್ತವೆ.

  • ಆನ್‌ಲೈನ್ ಸುದ್ದಿ ಪೋರ್ಟಲ್‌ಗಳನ್ನು ಸಾಮಾಜಿಕ ಮಾಧ್ಯಮ ಮಧ್ಯಸ್ಥ ವೇದಿಕೆಯಂತೆ ಕಾಣಲಾಗುತ್ತಿದ್ದು ಮುದ್ರಣ ಸುದ್ದಿ ಮಾಧ್ಯಮದಿಂದ ಪ್ರತ್ಯೇಕಿಸಲಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಮುದ್ರಣ ಸುದ್ದಿ ಮಾಧ್ಯಮ ಮತ್ತು ಆನ್‌ಲೈನ್‌ ಸುದ್ದಿ ಮಾಧ್ಯಮಗಳ ನಡುವೆ ಕೃತಕ ವ್ಯತ್ಯಾಸ ಸೃಷ್ಟಿಸಲಾಗಿದೆ. ಇದು ಸ್ಪಷ್ಟವಾಗಿ (ಸಮಾನರನ್ನು ಅಸಮಾನ ರೀತಿಯಲ್ಲಿ ನೋಡಬಾರದು ಎನ್ನುವ) ಸಂವಿಧಾನದ 14ನೇ ವಿಧಿಯ ಉಲ್ಲಂಘನೆ.

  • ಡಿಜಿಟಲ್‌ ಮಾಧ್ಯಮ, ಆನ್‌ಲೈನ್‌ ಸುದ್ದಿ ಹಾಗೂ ಪ್ರಚಲಿತ ವಿದ್ಯಮಾನಗಳ ಪ್ರಕಾಶಕರನ್ನು ನಿಯಂತ್ರಿಸುವ ನಿಬಂಧನೆಗಳು ಸಂವಿಧಾನದ 14ನೇ ವಿಧಿಯ ಕಡ್ಡಾಯ ಅವಶ್ಯಕತೆಯಾಗಿರುವ 'ಅವಳಿ ಪರೀಕ್ಷೆ'ಯನ್ನು (ಟ್ವಿನ್‌ ಟೆಸ್ಟ್‌) ಪೂರೈಸುವುದಿಲ್ಲ.

  • ಸಂವಿಧಾನದ 19 (2)ನೇ ವಿಧಿಯ ಸಮಂಜಸ ನಿರ್ಬಂಧಗಳ ವ್ಯಾಪ್ತಿಯನ್ನು ನಿಯಮಗಳು ಮೀರಿವೆ. ಏಕೆಂದರೆ ಸಮಂಜಸ ನಿರ್ಬಂಧಗಳನ್ನು ವಿಶಾಲ ನೆಲೆಯಲ್ಲಿ ವ್ಯಾಖ್ಯಾನಿಸದೆ ಸಂಕುಚಿತವಾಗಿ ಅರ್ಥೈಸಲಾಗಿದೆ. ಆ ಮೂಲಕ ಸಂವಿಧಾನದ 19 (1) (ಎ)ಯನ್ನೂ ಉಲ್ಲಂಘಿಸಲಾಗಿದೆ.

  • ಆನ್‌ಲೈನ್ ಡಿಜಿಟಲ್ ನ್ಯೂಸ್ ಪೋರ್ಟಲ್‌ನ ವಿಚಾರಗಳನ್ನು ಪಡೆಯಲು ಮತ್ತು ನೇರವಾಗಿ ನಿಯಂತ್ರಿಸಲು ಈ ನಿಯಮಗಳು‌ ಆಡಳಿತ ಅಥವಾ ಸರ್ಕಾರಕ್ಕೆ ಅಸ್ತ್ರವಾಗಿವೆ.

  • ಚರ್ಚೆ ನಡೆಸದೆ, ಸಮಾಲೋಚಿಸದೆ ನಿಯಮಗಳನ್ನು ಹಿಂಬಾಗಿಲಿನ ಮೂಲಕ ಜಾರಿಗೆ ತರಲಾಗಿದೆ.

  • ನಿಯಮಗಳು ಸಂವಿಧಾನದ 21ನೇ ವಿಧಿಯಡಿಯಡಿ ನೀಡಲಾಗಿರುವ ಗೌಪ್ಯತಾ ಹಕ್ಕಿನ ಉಲ್ಲಂಘನೆಯಾಗಿವೆ.

2000ರ ಮಾಹಿತಿ ತಂತ್ರಜ್ಞಾನ ಕಾಯಿದೆಯನ್ನು ಐಟಿ ನಿಯಮಗಳು ಉಲ್ಲಂಘಿಸುತ್ತವೆ ಎಂದು ನಿರೂಪಿಸಲು ಅಜಯ್‌ ಕುಮಾರ್‌ ಬ್ಯಾನರ್ಜಿ ಮತ್ತು ಕೇಂದ್ರ ಸರ್ಕಾರ ನಡುವಣ ತೀರ್ಪನ್ನು ಪಿಟಿಐ ಅರ್ಜಿ ಅವಲಂಬಿಸಿದೆ. ವಕೀಲರಾದ ವಾಸಿಮ್ ಬೇಗ್ ಮತ್ತು ಸ್ವರ್ಣೇಂದು ಚಟರ್ಜಿ ಅವರ ಮೂಲಕ ಮನವಿ ಸಲ್ಲಿಸಲಾಗಿದೆ.