Dogs 
ಸುದ್ದಿಗಳು

[ಕೇರಳ ಬೀದಿನಾಯಿ ಪ್ರಕರಣ] ನಮ್ಮಲ್ಲಿ ಬಹುತೇಕರು ಶ್ವಾನಪ್ರಿಯರು ಆದರೆ ದಾಳಿಕೋರ ನಾಯಿಗಳನ್ನು ದೂರ ಇಡಬೇಕು: ಸುಪ್ರೀಂ

ಬೀದಿನಾಯಿಗಳಿಗೆ ಲಸಿಕೆ ಹಾಕುವುದು ಸೇರಿದಂತೆ, ಸ್ವಯಂಸೇವಕರಿಗೆ ನೋಡಿಕೊಳ್ಳಲು ಅವಕಾಶ ನೀಡುವಂತೆ ಸೂಚಿಸಿದ ಪೀಠ, ತಾವು ನಾಯಿಗಳ ಪತ್ತೆಗೆ ಚಿಪ್ಸ್‌ ಅಳವಡಿಸುವುದರ ಪರವಾಗಿ ಇಲ್ಲ ಎಂದ ನ್ಯಾಯಮೂರ್ತಿ.

Bar & Bench

ಬೀದಿನಾಯಿಗಳ ಹಾವಳಿ ಎದುರಿಸುವ ಮತ್ತು ಪ್ರಾಣಿ ಹಕ್ಕುಗಳೊಂದಿಗೆ ಸಮತೋಲನ ಕಂಡುಕೊಳ್ಳುವ ನಿಟ್ಟಿನಲ್ಲಿ ಕೇರಳ ಸರ್ಕಾರ ಕೆಲಸ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಮೌಖಿಕವಾಗಿ ಸೂಚಿಸಿದೆ [ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ಪೀಪಲ್‌ ಫಾರ್‌ ಎಲಿಮಿನೇಷನ್‌ ಆಪ್‌ ಸ್ಟ್ರೇ ಟ್ರಬಲ್ಸ್‌ ಮತ್ತಿತರರ ನಡುವಣ ಪ್ರಕರಣ].

ಬೀದಿನಾಯಿ ಸಮಸ್ಯೆಯನ್ನು ನಿವಾರಿಸಲು ಪರಿಹಾರವನ್ನು ಕಂಡುಹಿಡಿಯಬೇಕು ಎಂದು ಒತ್ತಿ ಹೇಳಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಜೆ ಕೆ ಮಹೇಶ್ವರಿ ಅವರಿದ್ದ ಪೀಠ ಮಧ್ಯಂತರ ಆದೇಶ ನೀಡುವ ಸಲುವಾಗಿ ಸೆ. 28 ಕ್ಕೆ ಪ್ರಕರಣವನ್ನು ಮುಂದೂಡಿತು. ಮಧ್ಯಂತರ ಅವಧಿಯಲ್ಲಿ ಪ್ರಾಣಿ ಸಂರಕ್ಷಣೆಗೆ ಸಂಬಂಧಿಸಿದ ಎಲ್ಲಾ ಕಾನೂನು ಮತ್ತು ನಿಯಮಗಳನ್ನು ಸರ್ಕಾರ ಪಾಲಿಸಬೇಕು ಎಂದು ಅದು ತಾಕೀತು ಮಾಡಿತು. ಪ್ರಾಣಿ ಹಕ್ಕುಗಳ ವಿವಿಧ ಗುಂಪುಗಳು ಸಲ್ಲಿಸಿದ್ದ ಪ್ರಕರಣದಲ್ಲಿನ ಎಲ್ಲಾ ಮಧ್ಯಂತರ ಅರ್ಜಿಗಳನ್ನು ಪುರಸ್ಕರಿಸಿದ ಪೀಠ ಪ್ರತ್ಯುತ್ತರ ಮತ್ತು ಸಾರಾಂಶ ಸಲ್ಲಿಸಲು ಪಕ್ಷಕಾರರಿಗೆ ಅನುಮತಿಸಿತು.

ಈ ಸಂದರ್ಭದಲ್ಲಿ ನ್ಯಾ. ಖನ್ನಾ “ನಮ್ಮಲ್ಲಿ ಹೆಚ್ಚಿನವರು ನಾಯಿ ಪ್ರೇಮಿಗಳು. ನಾನೂ ನಾಯಿಗಳಿಗೆ ಆಹಾರ ನೀಡುತ್ತೇನೆ… ತರ್ಕಬದ್ಧವಾದ ಮಾರ್ಗವನ್ನು ಕಂಡುಹಿಡಿಯಬೇಕು. ನಾನು ನಾಯಿಗಳನ್ನು ವಾಕ್‌ ಮಾಡಿಸುತ್ತೇನೆ. ಕೆಲವು ನಾಯಿಗಳು ಆಕ್ರಮಣಕಾರಿಗಳು ಅವುಗಳನ್ನು ಪ್ರತ್ಯೇಕಿಸಬೇಕು” ಎಂದು ತಿಳಿಸಿದರು.

ಬೀದಿನಾಯಿಗಳಿಗೆ ಲಸಿಕೆ ಹಾಕುವುದು ಸೇರಿದಂತೆ ಸ್ವಯಂಸೇವಕರಿಗೆ ನೋಡಿಕೊಳ್ಳಲು ಅವಕಾಶ ನೀಡುವಂತೆ ಸೂಚಿಸಿದ ಅವರು, ತಾವು ನಾಯಿಗಳ ಪತ್ತೆಗೆ ಚಿಪ್ಸ್‌ ಅಳವಡಿಸುವುದರ ಪರವಾಗಿ ಇಲ್ಲ ಎಂದು ಹೇಳಿದರು.

ಆರಂಭದಲ್ಲಿ ಕೇರಳ ಸರ್ಕಾರದ ಪರ ವಾದ ಮಂಡಿಸಿದ ವಕೀಲ ವಿ ಕೆ ಬಿಜು, ಐದು ವರ್ಷಗಳಿಂದ ಪ್ರಕರಣದ ವಿಚಾರ ನಡೆಯುತ್ತಿದೆ. ಅನೇಕರು ನಾಯಿ ದಾಳಿಯಿಂದ ಸತ್ತಿದ್ದಾರೆ ಎಂದು ನ್ಯಾಯಾಲಯದ ಗಮನ ಸೆಳೆದರು.

ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ವಿ ಗಿರಿ ಅವರು, “ತೀರ್ಪಿನ ಸೂಕ್ತತೆ ಎಂಬುದು ಪ್ರಶ್ನೆಗೆ ಮುಕ್ತವಾಗಿರುತ್ತದೆ. ಶಾಸನಬದ್ಧ ನಿಯಮಗಳಿವೆ. ನೀವೇ ಮೇಲ್ಮನವಿಯನ್ನು ಪರಿಗಣಿಸಬಹುದು” ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, "ನಾವು ಅದನ್ನು ಹೇಳುತ್ತಿಲ್ಲ. ನಾವು ಸಮತೋಲನದ ಮಾರ್ಗವನ್ನು ಕಂಡುಕೊಳ್ಳಬೇಕು. ಶಾಸನಬದ್ಧ ನಿಯಮಗಳನ್ನು ಮಾರ್ಪಡಿಸಬಹುದು" ಎಂದು ಹೇಳಿದರು.

ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಪರವಾಗಿ ವಾದ ಮಂಡಿಸಿದ ವಕೀಲ ಆನಂದ್ ಗ್ರೋವರ್, ಈ ಸಮಸ್ಯೆಯನ್ನು ಪರಿಶೀಲಿಸಲು ವಕೀಲರ ಸಮಿತಿ ರಚಿಸಬಹುದು ಎಂದು ಸಲಹೆ ನೀಡಿದರು.

ಜಸ್ಟಿಸ್ ಖನ್ನಾ ನಂತರ ಲಘು ಧಾಟಿಯಲ್ಲಿ ಕೇರಳ ಸರ್ಕಾರದ ಪರ ವಕೀಲರನ್ನು "ರೇಬಿಸ್-ಸೋಂಕಿತ ನಾಯಿಗಳನ್ನು ಮಾತ್ರ ಕೊಲ್ಲಬಹುದು ಎಂದು ನಾನು ಆದೇಶ ನೀಡಬೇಕೆಂದು ನೀವು ಬಯಸುತ್ತೀರಾ?" ಎಂದು ಕೇಳಿದರು.

ಪೀಠವು ಸಮಸ್ಯೆಯ ಗಂಭೀರತೆಯನ್ನು ಗಮನಿಸಿತು, "ಕೆಲವೊಮ್ಮೆ ಹಸಿವಿನಿಂದ ನಾಯಿಗಳು ಆಕ್ರಮಣಕಾರಿಗಳಾಗಬಹುದು. ರೇಬಿಸ್‌ ಸೋಂಕಿತ ನಾಯಿಗಳ ಹೊರತಾಗಿ ಉಳಿದವುಗಳಿಗೆ ದಯಾಮರಣ ನೀಡಲು ಸಾಧ್ಯವಿಲ್ಲ” ಎಂದಿತು.

ಬೀದಿ ನಾಯಿ ಹಾವಳಿಗೆ ತುತ್ತಾದವರಲ್ಲಿ ಸಮಿತಿಯು 'ಹೆಂಗಸರು, ಮಕ್ಕಳು ಮತ್ತು ದಿನಗೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಬಿಜು ವಿವರಿಸಿದರು. ನಾಯಿಗೆ ಲಸಿಕೆ ಹಾಕಿದ್ದರೂ ಕೂಡ ಇತ್ತೀಚೆಗೆ ರೇಬಿಸ್‌ಗೆ ಬಲಿಯಾದ 12 ವರ್ಷದ ಬಾಲಕಿ ಸಾವನ್ನಪ್ಪಿದ್ದನ್ನು ಅವರು ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು. ರೇಬಿಸ್‌ ತಡೆಗೆ ಲಸಿಕೆ ನೀಡಿದ್ದರೂ ಜನ ಸಾಯುತ್ತಿದ್ದಾರೆ. ನಾವು ಯಾರ ಉದ್ದೇಶವನ್ನೂ ಅನುಮಾನಿಸುತ್ತಿಲ್ಲ.‌ ದಯವಿಟ್ಟು ದಿನಾಂಕ ನಿಗದಿಪಡಿಸಿ ಎಂದು ಅವರು ಕೋರಿದರು.

ಮಧ್ಯಂತರ ವ್ಯವಸ್ಥೆಯಾಗಿ ಕೇಂದ್ರದ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ ಮತ್ತು 2001 ರ ಪ್ರಾಣಿ ಜನನ ನಿಯಂತ್ರಣ ನಿಯಮಾವಳಿಗಳನ್ನು ರಾಜ್ಯ ಸರ್ಕಾರ ಪಾಲಿಸಬೇಕು ಎಂದು ಪೀಠ ಹೇಳಿತು. ಇದಕ್ಕೆ ರಾಜ್ಯ ಸರ್ಕಾರದ ಪರ ವಕೀಲರು ವಿರೋಧ ವ್ಯಕ್ತಪಡಿಸಿದರು. ಬಳಿಕ ಪೀಠ ಮಾರ್ಮಿಕವಾಗಿ "ಯಾವ ನಿಯಮಗಳು ಆಟದಲ್ಲಿ ಇರುತ್ತವೆ ಎಂಬುದನ್ನು ನಿರ್ಧರಿಸುವುದು ಕಷ್ಟ," ಎಂದಿತು.

ಬೀದಿ ನಾಯಿಗಳನ್ನು ಕೊಲ್ಲಲು ಸ್ಥಳೀಯ ಸ್ವಯಂ ಸೇವಾ ಸಂಘಗಳಿಗೆ ಅಧಿಕಾರ ನೀಡುವ ಕೇರಳ ಹೈಕೋರ್ಟ್‌ನ 2006ರ ತೀರ್ಪನ್ನು ಪ್ರಶ್ನಿಸಿ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸಿತು.

ಜನರ ಮೇಲೆ ನಾಯಿ ದಾಳಿ ಘಟನೆಗಳು ಹೆಚ್ಚಿದ ನಂತರ 2015ರಲ್ಲಿ ಕೇರಳ ಸರ್ಕಾರ ಅವುಗಳನ್ನು ನಿರ್ಮೂಲನೆ ಮಾಡಲು ನಿರ್ಧರಿಸಿತ್ತು. ಬೀದಿನಾಯಿಗಳನ್ನು ಕೊಲ್ಲಲು ಅವಕಾಶ ನೀಡಿದ್ದ ಬಾಂಬೆ ಹೈಕೋರ್ಟ್ ತೀರ್ಪಿಗೆ ತಡೆ ನೀಡಿ ಸುಪ್ರೀಂ ಕೋರ್ಟ್ ನೀಡಿದ ಮಧ್ಯಂತರ ಆದೇಶವನ್ನು ಅರ್ಜಿದಾರರು ಅವಲಂಬಿಸಿದ್ದಾರೆ.