Narendra Modi PM Modi Youtube channel
ಸುದ್ದಿಗಳು

ನ್ಯಾಯಾಲಯಗಳಲ್ಲಿ ನ್ಯಾಯದಾನ ಸುಗಮಗೊಳಿಸಲು ಕೃತಕ ಬುದ್ದಿಮತ್ತೆ ಬಳಕೆಗೆ ಪ್ರಧಾನಿ ಮೋದಿ ಕರೆ

ಸಮಾನವಾದ ನ್ಯಾಯದಾನ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಪ್ರಯತ್ನಿಸಿರುವುದಕ್ಕೆ ಪ್ರಧಾನಿ ಮೋದಿ ಅವರಿಗೆ ಗುವಾಹಟಿ ಹೈಕೋರ್ಟ್‌ನ 70ನೇ ವರ್ಷದ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್‌ ನ್ಯಾ. ಹೃಷಿಕೇಶ್‌ ರಾಯ್‌ ಮೆಚ್ಚುಗೆ ಸೂಚಿಸಿದರು.

Bar & Bench

ದಾವೆದಾರರಿಗೆ ನ್ಯಾಯದಾನ ಸುಗಮಗೊಳಿಸುವ ಸಲುವಾಗಿ ನ್ಯಾಯಾಲಯದ ಕೊಠಡಿಗಳಲ್ಲಿ ಕೃತಕ ಬುದ್ದಿಮತ್ತೆ (ಎ ಐ) ಬಳಕೆ ಮಾಡುವಂತೆ ಶುಕ್ರವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಗುವಾಹಟಿ ಹೈಕೋರ್ಟ್‌ನ 70ನೇ ವರ್ಷದ (ಪ್ಲಾಟಿನಂ ಜುಬಿಲಿ) ಸಮಾರಂಭಲ್ಲಿ ಅವರು ಮಾತನಾಡಿದರು.

ಕೃತಕ ಬುದ್ದಿಮತ್ತೆ ಬಳಕೆಯ ಜೊತೆಗೆ ಸಾಂಪ್ರದಾಯಿಕ ಕಾನೂನುಗಳ ಜ್ಞಾನ ಹಾಗೂ ಪರ್ಯಾಯ ವ್ಯಾಜ್ಯ ಪರಿಹಾರ (ಎಡಿಆರ್‌) ವಿಧಾನವು ಸದ್ಯದ ಸಂದರ್ಭದಲ್ಲಿ ಕಾನೂನು ವೃತ್ತಿಯಲ್ಲಿ ಅತ್ಯಗತ್ಯವಾಗಿದೆ. “ಕಾನೂನು ಕ್ಷೇತ್ರದಲ್ಲಿ ಕೃತಕ ಬುದ್ದಿಮತ್ತೆ ಬಳಕೆ ಮಾಡಲಾಗುತ್ತಿದೆ. ಸುಗಮ ನ್ಯಾಯದಾನಕ್ಕಾಗಿ ಕೃತಕ ಬುದ್ದಿಮತ್ತೆ ಬಳಕೆ ಮಾಡುವ ಮೂಲಕ ಜನತೆಗೆ ನ್ಯಾಯಾಲಯಗಳನ್ನು ಸುಲಭಲಭ್ಯವಾಗಿಸಬೇಕು” ಎಂದರು.

ಜನರಿಗೆ ಆಸ್ತಿಗೆ ಸಂಬಂಧಿಸಿದಂತೆ ಕಾರ್ಡ್‌ಗಳನ್ನು ವಿತರಿಸಿದರೆ ದಾವೆಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದಾಗಿದೆ ಎಂದೂ ಪ್ರಧಾನಿ ಹೇಳಿದರು.

“ಜೈಲುಗಳು ವಿಚಾರಣಾಧೀನ ಕೈದಿಗಳಿಂದ ತುಂಬಿ ತುಳುಕುತ್ತಿವೆ. ಜಾಮೀನು ಪಡೆಯಲು ಬಾಂಡ್‌ ಒದಗಿಸುವ ಸಲುವಾಗಿ ಹಣ ನೀಡಲು ಅವರಿಗೆ ಆಗುತ್ತಿಲ್ಲ ಅಥವಾ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲು ಯಾರೂ ಅವರ ನೆರವಿಗೆ ಧಾವಿಸುತ್ತಿಲ್ಲ. ಸಾಕಷ್ಟು ಮಂದಿ ಬಡವರಾಗಿದ್ದು, ಸಣ್ಣ ಅಪರಾಧಗಳಿಗಾಗಿ ಅವರು ಜೈಲಿನಲ್ಲಿದ್ದಾರೆ. ಇಂಥವರಿಗೆ ನೆರವಾಗಲು ಕೇಂದ್ರ ಬಜೆಟ್‌ನಲ್ಲಿ ಹಣ ನಿಗದಿಪಡಿಸಲಾಗಿದ್ದು, ಅದನ್ನು ರಾಜ್ಯಗಳಿಗೆ ವರ್ಗಾವಣೆ ಮಾಡಲಾಗುವುದು. ಇದರಿಂದ ವಿಚಾರಣಾಧೀನ ಕೈದಿಗಳು ಜೈಲಿನಿಂದ ಬಿಡುಗಡೆಯಾಗಬಹುದಾಗಿದೆ” ಎಂದರು.

ಇದೇ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಹೃಷಿಕೇಶ್‌ ರಾಯ್‌ ಅವರು “ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿಸಲು ಪ್ರಧಾನಿ ಮೋದಿ ಅವರು ಪ್ರಯತ್ನಿಸುತ್ತಿದ್ದು ಸಮಾಜದ ಎಲ್ಲಾ ಸ್ತರಗಳ ಅಗತ್ಯಗಳನ್ನು ಪೂರೈಸುವ ನ್ಯಾಯದಾನ ವ್ಯವಸ್ಥೆ ರೂಪಿಸಲು ಕೆಲಸ ಮಾಡಿದ್ದಾರೆ” ಎಂದರು.