Suvarna Soudha, Belagavi 
ಸುದ್ದಿಗಳು

ಮೀಸಲಾತಿ ಪಂಗಡಗಳ ಸಮೂಹಕ್ಕೆ ಸೇರಲು ಮಾನದಂಡಗಳೇನು? 2ಎಗೆ ಸೇರಿಸಲು ಕೋರಿರುವ ಮನವಿಗಳೆಷ್ಟು? ಇಲ್ಲಿದೆ ಮಾಹಿತಿ

ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿಯು ಶೇ.10 ಮೀಸಲಾತಿ ಕಲ್ಪಿಸಲು ಕೋರಿದೆ. ತಮಿಳುನಾಡು ಮಾದರಿಯಲ್ಲಿ ಶೇ.16ರ ಮೀಸಲಾತಿಯಂತೆ ಕರ್ನಾಟಕದ ಸಮಸ್ತ ಲಿಂಗಾಯತರಿಗೆ ಮೀಸಲಾತಿ ಕಲ್ಪಿಸಬೇಕು ಎಂದು ಲಿಂಗಾಯತ ಹೋರಾಟ ವೇದಿಕೆಯು ಮನವಿ ಸಲ್ಲಿಸಿದೆ

Bar & Bench

ಹೊಸದಾಗಿ ಮೀಸಲಾತಿಯ ಪಂಗಡಗಳ ಪಟ್ಟಿಗೆ ಸೇರ್ಪಡೆಗೊಳಿಸಲು ಪ್ರಸ್ತುತ ಅನುಸರಿಸುತ್ತಿರುವ ಮಾನದಂಡದ ಬಗ್ಗೆ ಹಾಗೂ ಮೀಸಲಾತಿಗಾಗಿ ಯಾವೆಲ್ಲಾ ಸಮುದಾಯಗಳು ಅಧಿಕೃತವಾಗಿ ಮನವಿ ಸಲ್ಲಿಸಿವೆ ಎನ್ನುವ ಬಗ್ಗೆ ಇತ್ತೀಚೆಗೆ ನಡೆದ ವಿಧಾನಸಭಾ ಅಧಿವೇಶನದ ವೇಳೆ ಸರ್ಕಾರವು ಉತ್ತರಿಸಿದೆ.

ಕಾಂಗ್ರೆಸ್‌ ಶಾಸಕ ಎನ್‌ ಎ ಹ್ಯಾರಿಸ್‌ ಅವರು ಎಸ್‌ಸಿ/ಎಸ್‌ಟಿ ಮೀಸಲಾತಿ ಕುರಿತು ಸರ್ಕಾರದ ಕ್ರಮ ಮತ್ತು ನಿಲುವುಗಳು ಏನು? ನೂತನವಾಗಿ ಮೀಸಲಾತಿ ಪಂಗಡಗಳ ಪಟ್ಟಿಗೆ ಸೇರ್ಪಡೆಗೊಳಿಸಲು ಪ್ರಸ್ತುತ ಅನುಸರಿಸುತ್ತಿರುವ ಮಾನದಂಡಗಳು ಏನು ಎಂದು ಪ್ರಶ್ನಿಸಿದ್ದರು.

ಇದಕ್ಕೆ ಉತ್ತರಿಸಿರುವ ಪಂಗಡಗಳ ಕಲ್ಯಾಣ ಸಚಿವ ಶ್ರೀರಾಮುಲು ಅವರು ಮೀಸಲಾತಿ ಪಂಗಡವೊಂದಕ್ಕೆ ಸೇರಿಸಲು ಆ ಜಾತಿಯ ಆದಿಕಾಲದ ಗುಣಲಕ್ಷಣ, ಭಿನ್ನವಾದ ಸಂಸ್ಕೃತಿ, ಪ್ರತ್ಯೇಕ ಭೌಗೋಳಿಕತೆ, ಹೊರ ಪ್ರಪಂಚದ ಅಂಜಿಕೆ ಮತ್ತು ನಾಚಿಕೆ, ಹಿಂದುಳಿಯುವಿಕೆಯನ್ನು ಪರಿಗಣಿಸಲಾಗುತ್ತದೆ ಎಂದು ವಿವರಿಸಿದ್ದಾರೆ.

ಕರ್ನಾಟಕ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌ ಎನ್‌ ನಾಗಮೋಹನ್‌ ದಾಸ್‌ ವರದಿಯ ಶಿಫಾರಸ್ಸಿನ ಅನ್ವಯ ಕರ್ನಾಟಕ ಅನುಸೂಚಿತ ಜಾತಿ ಮತ್ತು ಪಂಗಡಗಳು (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಅಧ್ಯಾದೇಶ 2022ರಂತೆ ಪರಿಶಿಷ್ಟ ಜಾತಿಗೆ ಶೇ.15ರಿಂದ ಶೇ. 17ಕ್ಕೆ ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ. 3ರಿಂದ ಶೇ. 7ಕ್ಕೆ ಮೀಸಲಾತಿ ಹೆಚ್ಚಿಸಲಾಗಿದೆ ಎಂದು ಉತ್ತರ ನೀಡಿದ್ದಾರೆ.

ಉಪ ಪ್ರಶ್ನೆಯ ರೂಪದಲ್ಲಿ ಯಾವ ಯಾವ ಸಮುದಾಯಗಳು ತಮ್ಮನ್ನು 2ಎ ಪಟ್ಟಿಯ ಗುಂಪಿಗೆ ಸೇರ್ಪಡೆ ಮಾಡುವಂತೆ ಕೋರಿವೆ, ಅಧಿಕೃತವಾಗಿ ಸಲ್ಲಿಸಿರುವ ಮನವಿಗಳ ಸಂಖ್ಯೆ ಎಷ್ಟು? ಈ ಕುರಿತು ಸರ್ಕಾರ ಕೈಗೊಂಡ ಕ್ರಮಗಳು ಏನು ಎಂದು ಕೇಳಲಾಗಿತ್ತು.

ಇದಕ್ಕೆ ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿಯು ಶೇ.10ರಷ್ಟು ಮೀಸಲಾತಿ ಕಲ್ಪಿಸುವಂತೆ ಕೋರಿದೆ. ತಮಿಳುನಾಡು ಮಾದರಿಯಲ್ಲಿ ಶೇ.16ರ ಮೀಸಲಾತಿಯಂತೆ ಕರ್ನಾಟಕದ ಸಮಸ್ತ ಲಿಂಗಾಯತರಿಗೆ ಮೀಸಲಾತಿ ಕಲ್ಪಿಸಬೇಕು ಎಂದು ಬೆಳಗಾವಿಯ ಲಿಂಗಾಯತ ಹೋರಾಟ ವೇದಿಕೆಯು ಮನವಿ ಸಲ್ಲಿಸಿದೆ. ಗದಗ ಜಿಲ್ಲೆಯ ಮುಂಡರಗಿಯ ಅಖಿಲ ಕರ್ನಾಟಕ ಗೋಂಧಳಿ ಸಮಾಜವು ಅಲೆಮಾರಿ/ಅರೆಅಲೆ ಮಾರಿ ಸಮುದಾಯಕ್ಕೆ ಪ್ರವರ್ಗ-1ರ ಅಡಿ ಬೇರ್ಪಡಿಸಿ ಶೇ.10ರಷ್ಟು ಪ್ರತ್ಯೇಕ ಮೀಸಲಾತಿ ನೀಡಬೇಕು ಎಂದು ಮನವಿ ಸಲ್ಲಿಕೆಯಾಗಿದೆ ಎಂದು ಮಾಹಿತಿ ನೀಡಲಾಗಿದೆ.

ಪ್ರವರ್ಗ 2ಬಿಯಲ್ಲಿನ ಮುಸ್ಲಿಂ ಸಮುದಾಯಕ್ಕೆ ಶೇ. 8ರಷ್ಟು ಮೀಸಲಾತಿ ನೀಡುವಂತೆ ಬಾಗಲಕೋಟೆಯ ಕರ್ನಾಟಕ ಮುಸ್ಲಿಮ್‌ ಯೂನಿಟಿಯು ಮನವಿ ಮಾಡಿದೆ. ಲಿಂಗಾಯತ ಪಂಚಮಸಾಲಿ, ಲಿಂಗಾಯತ ಕುಡುಒಕ್ಕಲಿಗ, ಲಿಂಗಾಯತಗೌಡ, ನೊಳಂಬ ಲಿಂಗಾಯತ, ಬಳೆಗಾರ, ಲಿಂಗಾಯತರೆಡ್ಡಿ, ದೀಕ್ಷ ಲಿಂಗಾಯತ ಸಮುದಾಯಗಳು ಪ್ರವರ್ಗ-2ಎ ಪಟ್ಟಿಗೆ ಗುಂಪಿಗೆ ಸೇರ್ಪಡೆ ಮಾಡುವಂತೆ ಮನವಿ ಮಾಡಿವೆ. ಈ ಮನವಿಗಳು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಪರಿಶೀಲನೆಯಲ್ಲಿರುತ್ತವೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಮೀಸಲಾತಿ ಕುರಿತು ಕೇಂದ್ರ ಮತು ರಾಜ್ಯ ಸರ್ಕಾರಗಳು ಕೈಗೊಳ್ಳಬಹುದಾದ ಕ್ರಮಗಳು ಯಾವುವು? ಮೀಸಲಾತಿ ಗೊಂದಲವನ್ನು ಸಾಂವಿಧಾನಿಕ ಮತ್ತು ನ್ಯಾಯಯೋಚಿತವಾಗಿ ಪರಿಹರಿಸಲು ಸರ್ಕಾರದ ಮುಂದಿರುವ ಪ್ರಸ್ತಾವಗಳೇನು ಎಂದು ಮತ್ತೊಂದು ಉಪ ಪ್ರಶ್ನೆಗೆ ಹಾಕಿದ್ದರು. ಇದಕ್ಕೆ ರಾಜ್ಯ ಸರ್ಕಾರದ ಇಲಾಖೆ ಮತ್ತು ಸಂಸ್ಥೆಗಳಲ್ಲಿ ಶಿಕ್ಷಣ ಮತ್ತು ಉದ್ಯೋಗಗಳಿಗೆ ಮೀಸಲಾತಿ ಹೆಚ್ಚಿಸುವ ಬಗ್ಗೆ ನಿಯಮಾನುಸಾರ ಮತ್ತು ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳ ಹಿನ್ನೆಲೆಯಲ್ಲಿ ಕ್ರಮ ಜರುಗಿಸಬಹುದಾಗಿದೆ. ಕೇಂದ್ರ ಸರ್ಕಾರದ ಇಲಾಖೆ ಮತ್ತು ಸಂಸ್ಥೆಗಳಲ್ಲಿ ಮೀಸಲಾತಿ ಹೆಚ್ಚಳ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ ಎಂದು ಮಾಹಿತಿ ಒದಗಿಸಲಾಗಿದೆ.