ಕಾಡು
ಕಾಡು  ಪ್ರಾತಿನಿಧಿಕ ಚಿತ್ರ
ಸುದ್ದಿಗಳು

ಅರಣ್ಯ ಭೂಮಿಯನ್ನು ಮೃಗಾಲಯ ಅಥವಾ ಸಫಾರಿ ಉದ್ಯಾನ ಮಾಡಲು ನ್ಯಾಯಾಲಯದ ಪೂರ್ವಾನುಮತಿ ಅಗತ್ಯ: ಸುಪ್ರೀಂ ಕೋರ್ಟ್

Bar & Bench

ಅರಣ್ಯ ಸಂರಕ್ಷಣಾ (ತಿದ್ದುಪಡಿ) ಕಾಯಿದೆ- 2023 ರ ಅಡಿಯಲ್ಲಿ ಅರಣ್ಯ ಭೂಮಿಯನ್ನು ಮೃಗಾಲಯ ಅಥವಾ ಸಫಾರಿ ಉದ್ಯಾನಗಳಾಗಿ ಅಧಿಸೂಚನೆ ಹೊರಡಿಸಲು ನ್ಯಾಯಾಲಯದ ಪೂರ್ವಾನುಮತಿ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.

ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶ ಸರ್ಕಾರಗಳಿಗೆ ತಿದ್ದುಪಡಿ ಕಾಯಿದೆಯಡಿ ಅರಣ್ಯ ಗುರುತಿಸುವ ನಿಯಮಾವಳಿ ಜಾರಿಯಾಗುವವರೆಗೆ ಪ್ರಸ್ತುತ ಅಸ್ತಿತ್ವದಲ್ಲಿರುವ 'ಅರಣ್ಯ' ವ್ಯಾಖ್ಯಾನಕ್ಕೆ ಕಟಿಬದ್ಧರಾಗಿರುವಂತೆ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ಹೇಳಿದೆ.

ಟಿ ಎನ್ ಗೋದಾವರ್ಮನ್ ಪ್ರಕರಣದಲ್ಲಿನ ತೀರ್ಪಿಗೆ ಅನುಗುಣವಾಗಿ ಅರಣ್ಯ ಭೂಮಿಯನ್ನು ಗುರುತಿಸುವ ತಜ್ಞರ ಸಮಿತಿ ವರದಿಗಳನ್ನು ತಯಾರಿಸಿ ಕಳಿಸಿಕೊಡುವಂತೆಯೂ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿತು.

"ರಚಿಸಲಾದ ತಜ್ಞರ ಸಮಿತಿಗಳು ಗುರುತಿಸುವ ಕೆಲಸ ನಡೆಯುತ್ತಿದೆ ಎಂಬುದನ್ನು ಸರಿಯಾಗಿ ನೆನಪಿನಲ್ಲಿಟ್ಟುಕೊಳ್ಳಬೇಕು ಆದರೆ ರಕ್ಷಿಸಲು ಅರ್ಹವಾದ ಅರಣ್ಯ ಭೂಮಿಯನ್ನು ಸೇರಿಸಲು ಸಮಿತಿಯನ್ನು ಅದು ತಡೆಯಬಾರದು" ಎಂದು ನ್ಯಾಯಾಲಯ ಆದೇಶಿಸಿದೆ.

ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್‌ನಲ್ಲಿ ನಡೆಯಲಿದೆ.

ಸಿಜೆಐ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿ ಜೆ.ಬಿ.ಪರ್ಡಿವಾಲಾ, ನ್ಯಾಯಮೂರ್ತಿ ಮನೋಜ್ ಮಿಶ್ರಾ

ಅರಣ್ಯ ಸಂರಕ್ಷಣಾ ಕಾಯಿದೆಗೆ ಇತ್ತೀಚೆಗೆ ಮಾಡಲಾದ ತಿದ್ದುಪಡಿಗಳ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಪರಿಸರ ಹಕ್ಕುಗಳಿಗೆ ಸಂಬಂಧಿಸಿದ ಸರ್ಕಾರೇತರ ಸಂಸ್ಥೆ ವನಶಕ್ತಿ ಮತ್ತು ನಿವೃತ್ತ ನಾಗರಿಕ ಸೇವಾ ಅಧಿಕಾರಿಗಳ ಗುಂಪೊಂದು ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಸೂಚನೆಗಳನ್ನು ನೀಡಿದೆ. ತಿದ್ದುಪಡಿಗಳಿಂದಾಗಿ ಅಭಿವೃದ್ಧಿ ಚಟುವಟಿಕೆಗಳನ್ನು ನಿಷೇಧಿಸುವ ನಿಯಮಾವಳಿಗಳು ಸಡಿಲಗೊಂಡಿರುವ ಆರೋಪ ಕೇಳಿಬಂದಿತ್ತು.  

ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ, 'ಅರಣ್ಯ' ಎಂಬ ಪದದ ಅರ್ಥವನ್ನು ರಕ್ಷಿಸಲಾಗುವುದು ಎಂದು ಪುನರುಚ್ಚರಿಸಿದರು.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್ "ದೇಶದ ಶೇಕಡಾ 28ರಷ್ಟು ಅರಣ್ಯವನ್ನು ಕಾನೂನು ಪ್ರಕಾರ ನೋಟಿಫೈ ಮಾಡಿಲ್ಲ ಅಥವಾ ಗುರುತಿಸಲಾಗಿಲ್ಲ. ಇದರಿಂದ 2 ಲಕ್ಷ ಚದರ ಕಿಲೋಮೀಟರ್ ಅರಣ್ಯ ದಾಖಲಾಗಿಲ್ಲ. (ಹೀಗಿರುವಾಗ) ಕಾಯಿದೆಗೆ ಮಾಡಲಾದ ತಿದ್ದುಪಡಿ ಅರಣ್ಯ ಪ್ರದೇಶವನ್ನು ಅರಣ್ಯ ಸಂರಕ್ಷಣಾ ಕಾಯಿದೆಯ ವ್ಯಾಪ್ತಿಯಿಂದ ತೆಗೆದುಹಾಕುತ್ತದೆ" ಎಂದರು.

ಆಗ ನ್ಯಾಯಾಲಯ, "ಇದನ್ನು ಮುಂದುವರಿಸಲು ಅನುಮತಿಸಲಾಗುವುದಿಲ್ಲ. ಸುಮಾರು 2 ಲಕ್ಷ ಚದರ ಕಿಲೋಮೀಟರ್ ಅರಣ್ಯ ಭೂಮಿಯನ್ನು ವರ್ಗೀಕರಿಸಬೇಕು" ಎಂದು ಹೇಳಿತು.

ಆದರೆ ಭಾಟಿ ಅವರು ತಿದ್ದುಪಡಿಯ ಉದ್ದೇಶ ಅರಣ್ಯವನ್ನು ಕಾಯಿದೆಯ ವ್ಯಾಪ್ತಿಯಿಂದ ಹೊರಗಿಡುವುದಲ್ಲ ಬದಲಿಗೆ ಎಲ್ಲವನ್ನೂ ಸೇರಿಸಿಕೊಳ್ಳುವುದಾಗಿದೆ. ವರ್ಗೀಕರಿಸದ ಅರಣ್ಯ ಭೂಮಿ ಇತ್ಯಾದಿಗಳನ್ನು ಗುರುತಿಸಲೆಂದೇ ನಾವು ರಾಜ್ಯಗಳನ್ನು ಪ್ರೋತ್ಸಾಹಿಸುತ್ತಿದ್ದೇವೆ. ಇದು ಅರಣ್ಯ ಭೂಮಿಯನ್ನು ಕಾಯಿದೆಯ ವ್ಯಾಪ್ತಿಗೆ ತರುವುದಾಗಿದೆ ಎಂದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಕಳೆದ ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿತ್ತು.