CJI SA Bobde, Farmers Protest
CJI SA Bobde, Farmers Protest 
ಸುದ್ದಿಗಳು

ಮುಂಚಿತವಾಗಿ ಅಭಿಪ್ರಾಯ ವ್ಯಕ್ತಪಡಿಸುವುದು ಸಮಿತಿಯ ಸದಸ್ವತ್ವಕ್ಕೆ ಅನರ್ಹತೆಯಾಗದು: ಸಿಜೆಐ ಎಸ್‌ ಎ ಬೊಬ್ಡೆ

Bar & Bench

ಸಮಿತಿಯ ಪರಿಗಣನೆಗೆ ಒಳಪಟ್ಟಿರುವ ವಿಷಯದ ಕುರಿತು ಸಮಿತಿಯಲ್ಲಿ ಸ್ಥಾನ ಪಡೆದಿರುವ ವ್ಯಕ್ತಿ ಈ ಹಿಂದೆ ಒಂದು ಅಭಿಪ್ರಾಯ ಹೊಂದಿದ್ದ ಮಾತ್ರಕ್ಕೆ ಅವರನ್ನು ಸದಸ್ಯತ್ವದಿಂದ ಅನರ್ಹಗೊಳಿಸಲಾಗದು ಎಂದು ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಅವರು ಮಂಗಳವಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕ್ರಿಮಿನಲ್‌ ವಿಚಾರಣೆಯ ಸಂದರ್ಭದಲ್ಲಿ ಅಸಮರ್ಪಕತೆ ಮತ್ತು ಅದಕ್ಷತೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಸಿಜೆಐ ಬೊಬ್ಡೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾನಿರತ ರೈತರ ಜೊತೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಂಬಂಧ ಸುಪ್ರೀಂ ಕೋರ್ಟ್‌ ರಚಿಸಿದ ಸಮಿತಿಯಿಂದ ಭಾರತೀಯ ಕಿಸಾನ್‌ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಭೂಪೇಂದರ್‌ ಸಿಂಗ್‌ ಮಾನ್‌ ಅವರು ಹಿಂದೆ ಸರಿದಿರುವ ಸಂದರ್ಭದಲ್ಲಿ ಸಿಜೆಐ ಅಭಿಪ್ರಾಯ ವ್ಯಕ್ತಪಡಿಸಿರುವುದು ಮಹತ್ವ ಪಡೆದುಕೊಂಡಿದೆ.

“ಕಾನೂನಿನ ಬಗ್ಗೆ ಕೆಲವು ಗೊಂದಲಗಳಿವೆ. ಸಮಿತಿಯ ಸದಸ್ಯರಾಗುವುದಕ್ಕೂ ಮುನ್ನ ಅವರು ಅಭಿಪ್ರಾಯ ಹೊಂದಿರಬಹುದು. ಆದರೆ, ಆಮೇಲೆ ಅದು ಬದಲಾಗಬಹುದು. ಹಾಗೆಂದು ಆ ವ್ಯಕ್ತಿ ಸಮಿತಿಯ ಸದಸ್ಯರಾಗಬಾರದು ಎಂದಲ್ಲ,” ಎಂದು ಸಿಜೆಐ ಹೇಳಿದರು.

ನೂತನ ಕಾಯಿದೆಗಳ ಬಗ್ಗೆ “ಕೃಷಿ ಒಕ್ಕೂಟಗಳು ಮತ್ತು ಸಾಮಾನ್ಯ ಜನರಲ್ಲಿ ಚಾಲ್ತಿಯಲ್ಲಿರುವ ಭಾವನೆಗಳು ಮತ್ತು ಆತಂಕಗಳ” ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯ ನೇಮಿಸಿರುವ ಸಮಿತಿಯಿಂದ ಹಿಂದೆ ಸರಿಯುತ್ತಿರುವುದಾಗಿ ಮಾನ್ ಹೇಳಿದ್ದರು.

“ನನಗೆ ಯಾವುದೇ ಹುದ್ದೆ ಅಥವಾ ಸ್ಥಾನ ನೀಡಿದರೂ ಪಂಜಾಬ್‌ ಮತ್ತು ದೇಶದ ರೈತರ ಹಿತಾಸಕ್ತಿಯ ಜೊತೆ ರಾಜಿ ಮಾಡಿಕೊಳ್ಳುವುದಿಲ್ಲ. ಬದಲಿಗೆ ಆ ಸ್ಥಾನವನ್ನು ತ್ಯಾಗ ಮಾಡಲು ಸಿದ್ಧನಿದ್ದೇನೆ,” ಎಂದು ಮಾಧ್ಯಮ ಹೇಳಿಕೆಯಲ್ಲಿ ಮಾನ್‌ ತಿಳಿಸಿದ್ದರು. ಮುಂದುವರೆದು, ತಾವು ಸಮಿತಿಯಿಂದ ಹಿಂದೆ ಸರಿಯುತ್ತಿದ್ದು, "ನನ್ನ ರೈತರು ಮತ್ತು ಪಂಜಾಬ್‌ ಪರವಾಗಿ ನಿಲ್ಲುತ್ತೇನೆ," ಎಂದಿದ್ದರು.