ಪೊಲೀಸ್ ಹಾಗೂ ಭದ್ರತಾ ಪಡೆಗಳಲ್ಲಿ ಸೇವೆ ಸಲ್ಲಿಸುವವರು ಕೂಡ ಮನುಷ್ಯರೇ, ಅವರಿಗೂ ಕುಟುಂಬ, ಸಂಬಂಧಗಳು, ವೈಯುಕ್ತಿಕ ಸಮಸ್ಯೆಗಳು, ಒತ್ತಡ, ದುಖ: ಇತ್ಯಾದಿ ತೊಂದರೆಗಳಿರುತ್ತವೆ. ಇತರರ ಜೀವ ರಕ್ಷಣೆ ಮತ್ತು ಸುರಕ್ಷತೆಯ ಜವಾಬ್ದಾರಿ ಹೊತ್ತಿರುವ ಇವರ ಮಾನಸಿಕ ಆರೋಗ್ಯ ಹಾಗೂ ಯೋಗಕ್ಷೇಮದ ಬಗ್ಗೆ ಆಡಳಿತ ವ್ಯವಸ್ಥೆ ಗಮನಹರಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ವೈಯುಕ್ತಿಕ ಕಾರಣಗಳಿಗೆ ತೀವ್ರ ಮಾನಸಿಕ ಖಿನ್ನತೆಗೊಳಗಾಗಿ ತಮಗೆ ನೀಡಿರುವ ಸರ್ವಿಸ್ ರಿವಾಲ್ವರ್ನಿಂದ ಆತ್ಮಹತ್ಯೆಗೆ ಯತ್ನಿಸಿದ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್ಎಫ್) ಮಹಿಳಾ ಸಬ್ ಇನ್ಸ್ಪೆಕ್ಟರ್ ಒಬ್ಬರ ಪ್ರಕರಣದಲ್ಲಿ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ಇಂಥ ಮಹತ್ವದ ಆದೇಶ ನೀಡಿದೆ.
ಪೊಲೀಸ್ ಮತ್ತು ಇತರ ಭದ್ರತಾ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯ ಮಾನಸಿಕ ಆರೋಗ್ಯ ಮತ್ತು ಒಟ್ಟಾರೆ ಯೋಗಕ್ಷೇಮದ ಬಗ್ಗೆ ಗಮನಹರಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಅಸ್ತಿತ್ವದಲ್ಲಿರುವ ನೀತಿಗಳನ್ನು ಪರಿಶೀಲಿಸಲು ಮತ್ತು ಸಶಸ್ತ್ರ ಪಡೆಗಳು, ಪೊಲೀಸ್ ಮತ್ತು ಇತರ ಭದ್ರತಾ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿಯ ಮಾನಸಿಕ ಆರೋಗ್ಯ ಮತ್ತು ಕಲ್ಯಾಣ ಕ್ರಮಗಳನ್ನು ಬಲಪಡಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಹೈಕೋರ್ಟ್ ಆದೇಶಿಸಿದೆ.
ಅಲ್ಲದೆ, ಈ ಪ್ರಕರಣದಲ್ಲಿ ಸಬ್ ಇನ್ಸ್ಪೆಕ್ಟರ್ ಅವರಿಗೆ ಕರ್ತವ್ಯದ ಭಾಗವಾಗಿ ನೀಡಲಾಗಿರುವ ಬಂದೂಕಿನಿಂದ ಆತ್ಮಹತ್ಯೆಗೆ ಯತ್ನಸಿರುವುದರಿಂದ ಬಂದೂಕುಗಳ ಸುರಕ್ಷಿತ ಮತ್ತು ಜವಾಬ್ದಾರಿಯುತ ಬಳಕೆಯನ್ನು ಸಂಬಂಧಪಟ್ಟ ಇಲಾಖೆಗಳು, ಸಕ್ಷಮ ಪ್ರಾಧಿಕಾರಿಗಳು ಖಾತರಿಪಡಿಸಿಕೊಳ್ಳಬೇಕು ಎಂದೂ ನ್ಯಾಯಾಲಯ ನಿರ್ದೇಶನ ನೀಡಿದೆ. ಜತೆಗೆ ಈ ಆದೇಶವನ್ನು ಸಿಐಎಸ್ಎಫ್ ಮಹಾನಿರ್ದೇಶಕರು, ಕರ್ನಾಟಕ ಪೊಲೀಸ್ ಮಹಾನಿರ್ದೇಶಕರು ಮತ್ತು ಬಂದೂಕುಗಳನ್ನು ವಹಿಸಿಕೊಂಡಿರುವ ಸಿಬ್ಬಂದಿಯನ್ನು ಹೊಂದಿರುವ ಇತರ ರಾಜ್ಯ ಸಂಸ್ಥೆಗಳ ಮುಖ್ಯಸ್ಥರಿಗೆ ಮಾಹಿತಿ ಮತ್ತು ಪರಿಗಣನೆಗಾಗಿ ಕಳುಹಿಸಬೇಕು ಎಂದು ಹೈಕೋರ್ಟ್ ರಿಜಿಸ್ಟ್ರಿಗೆ ಪೀಠ ಸೂಚನೆ ನೀಡಿದೆ.
ಪೊಲೀಸ್ ಮತ್ತು ಭದ್ರತಾ ಪಡೆಗಳಲ್ಲಿ ಸೇವೆ ಸಲ್ಲಿಸುವವರು ಕೂಡ ಮನುಷ್ಯರೇ ಆಗಿದ್ದಾರೆ. ಅವರಿಗೂ ಕುಟುಂಬಗಳು, ಸಂಬಂಧಗಳು, ಜವಾಬ್ದಾರಿಗಳು ಮತ್ತು ವೈಯಕ್ತಿಕ ಸಮಸ್ಯೆಗಳಿರುತ್ತವೆ. ಅವರು ದುಃಖ, ಆತಂಕ, ಆರ್ಥಿಕ ಸಂಕಷ್ಟಗಳು, ವೈವಾಹಿಕ ಕಲಹಗಳು, ಕುಟುಂಬದಲ್ಲಿ ಅನಾರೋಗ್ಯ ಮತ್ತು ಮಾನವ ಜೀವನದಲ್ಲಿ ಸಾಮಾನ್ಯವಾಗಿ ಎದುರಾಗುವ ಇತರ ತೊಂದರೆಗಳನ್ನು ಅನುಭವಿಸುತ್ತಾರೆ. ಸಮವಸ್ತ್ರ ಧರಿಸಿದ ಮಾತ್ರಕ್ಕೆ ಅಥವಾ ಕಠಿಣ ತರಬೇತಿ ಪಡೆದ ಮಾತ್ರಕ್ಕೆ, ಅವರು ಇಂತಹ ಸಮಸ್ಯೆಗಳಿಂದ ಮುಕ್ತರಾಗಿರುವುದಿಲ್ಲ. ಅವರ ವೈಯಕ್ತಿಕ ಸನ್ನಿವೇಶಗಳು ಅಥವಾ ಮಾನಸಿಕ ಸ್ಥಿತಿ ಏನೇ ಇದ್ದರೂ, ಅವರು ಸದಾ ಕರ್ತವ್ಯಕ್ಕೆ ಲಭ್ಯವಿರಬೇಕು ಮತ್ತು ಯಾವುದೇ ಪರಿಸ್ಥಿತಿಯಲ್ಲೂ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕು ಎಂಬ ನಿರೀಕ್ಷೆಯು, ಸಾಂಸ್ಥಿಕ ಚಿಂತನೆಯಲ್ಲಿ ಬದಲಾವಣೆಯ ಅಗತ್ಯವನ್ನು ಸೂಚಿಸುತ್ತದೆ. ಶಿಸ್ತು ಮತ್ತು ಸಮರ್ಪಣಾ ಭಾವ ಅತ್ಯಗತ್ಯ. ಆದರೆ, ಸಿಬ್ಬಂದಿಯ ಮೂಲಭೂತ ಮಾನವ ಅಗತ್ಯಗಳನ್ನು ಕಡೆಗಣಿಸಿ ಇವುಗಳಿಗಾಗಿ ಒತ್ತಾಯಿಸಬಾರದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ,