Tihar Jail 
ಸುದ್ದಿಗಳು

ಶೌಚಾಲಯ ಬಳಸಲು ಕೈದಿಗಳು 3 ಗಂಟೆ ಕಾಯುವ ಸ್ಥಿತಿ: ಹೆಚ್ಚು ಶೌಚಾಲಯಗಳ ನಿರ್ಮಾಣಕ್ಕೆ ದೆಹಲಿ ಹೈಕೋರ್ಟ್ ಸೂಚನೆ

ಶೌಚಾಲಯಗಳನ್ನು ಸ್ವಚ್ಛಗೊಳಿಸುವ ಕೈದಿಗಳಿಗೆ ಕನಿಷ್ಠ ವೇತನ ನೀಡಬೇಕು ಮತ್ತು ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕು ಎಂದು ಜೈಲು ಅಧಿಕಾರಿಗಳಿಗೆ ಹೈಕೋರ್ಟ್ ಆದೇಶಿಸಿದೆ.

Bar & Bench

ಬೆಳಗಿನ ಹೊತ್ತು ಜೈಲುಗಳಲ್ಲಿ ಕೈದಿಗಳು ಶೌಚಾಲಯ ಬಳಸಲು ಮೂರು ಗಂಟೆಗೂ ಹೆಚ್ಚು ಕಾಯಬೇಕಾಗಿರುವ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ದೆಹಲಿಯ ಜೈಲುಗಳಲ್ಲಿ ಶೌಚಾಲಯಗಳ ಸಂಖ್ಯೆಯನ್ನು ಹೆಚ್ಚಿಸುವುದನ್ನು ಪರಿಗಣಿಸುವಂತೆ ದೆಹಲಿ ಹೈಕೋರ್ಟ್‌ ಗುರುವಾರ ಆದೇಶಿಸಿದೆ.

ಎರಡು ವಾರಗಳಲ್ಲಿ ರಾಷ್ಟ್ರ ರಾಜಧಾನಿಯ ಎಲ್ಲಾ ಜೈಲುಗಳ ತಪಾಸಣೆ ನಡೆಸಿ ಶೌಚಾಲಯಗಳ ಸ್ಥಿತಿಯನ್ನು ಪರಿಶೀಲಿಸುವಂತೆ ಲೋಕೋಪಯೋಗಿ ಇಲಾಖೆಗೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ವಿಭಾಗೀಯ ಪೀಠ ಸೂಚಿಸಿದೆ.

ದುರಸ್ತಿ ಕೆಲಸ ಮಾಡಬೇಕಿದ್ದರೆ ಎರಡು ವಾರಗಳಲ್ಲಿ ಪೂರ್ಣಗೊಳಿಸಿ. ಶೌಚಾಲಯಗಳ ಸಂಖ್ಯೆ ಹೆಚ್ಚಿಸಬೇಕು ಎಂದಿದ್ದರೆ ಅದನ್ನೂ ಮಾಡಿ, ಅಗತ್ಯವಿದ್ದರೆ ಮಲದಗುಂಡಿಗಳನ್ನು ನಿರ್ಮಿಸಿ ಎಂದು ನ್ಯಾಯಾಲಯ ಆದೇಶಿಸಿದೆ.

ಕೆಲವು ಕೈದಿಗಳು ಬರಿಗೈಯಲ್ಲಿ ಶೌಚಾಲಯ ಸ್ವಚ್ಛಗೊಳಿಸಬೇಕಿದೆ ಎಂಬುದನ್ನು ಗಮನಿಸಿದ ನ್ಯಾಯಾಲಯ ಶೌಚಾಲಯಗಳನ್ನು ಸ್ವಚ್ಛಗೊಳಿಸುವ ಕೈದಿಗಳಿಗೆ ಕನಿಷ್ಠ ವೇತನ ನೀಡಬೇಕು ಮತ್ತು ಹೆಚ್ಚಿನ ಸಿಬ್ಬಂದಿ ನೇಮಿಸಿಕೊಳ್ಳಬೇಕು ಎಂದು ಜೈಲು ಅಧಿಕಾರಿಗಳಿಗೆ ತಿಳಿಸಿತು.  

ಶೌಚಾಲಯಗಳು ಮತ್ತು ವಾಶ್ ರೂಂಗಳನ್ನು ಸ್ವಚ್ಛಗೊಳಿಸುವ ಜನರಿಗೆ ಕೈಗವಸು ಮತ್ತಿತರ ಸುರಕ್ಷತಾ ಸಾಧನಗಳನ್ನು ನೀಡಲಾಗಿದೆಯೆ ಎಂಬುದನ್ನು ತಿಳಿಸುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಅನುಜ್ ಮಲ್ಹೋತ್ರಾ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ವಿಚಾರಣೆ ವೇಳೆ  ನ್ಯಾಯಾಲಯ ಈ ನಿರ್ದೇಶನ ನೀಡಿದೆ.

ದೆಹಲಿಯ ಜೈಲುಗಳಲ್ಲಿ ಶೌಚಾಲಯಗಳ ಪರಿಸ್ಥಿತಿ ತುಂಬಾ ಕೆಟ್ಟದಾಗಿದ್ದು  ಜೈಲುಗಳಲ್ಲಿ ಮಲಹೊರುವ ಪದ್ದತಿ ಇದೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯ ಎಲ್ಲಾ ಜೈಲುಗಳ ತಪಾಸಣೆಗೆ ನ್ಯಾಯಾಲಯ ಈ ಹಿಂದೆ ಆದೇಶಿಸಿತ್ತು. ಮಲಹೊರುವ ಪದ್ದತಿ ಇಲ್ಲ, ಶೌಚಾಲಯಗಳ ಸ್ಥಿತಿ ತೃಪ್ತಿಕರವಾಗಿಲ್ಲ ಮತ್ತು ಕೈದಿಗಳಿಂದಲೇ ಸ್ವಚ್ಛತೆ ಮಾಡಿಸಲಾಗುತ್ತಿದೆ ಎಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿತ್ತು.

ತಾನು ಪ್ರಸ್ತುತ ನೀಡಿರುವ ಆದೇಶ ಪಾಲನೆಯಾಗಿದೆಯೇ ಎಂಬುದನ್ನು ತಿಳಿಯುವುದಕ್ಕಾಗಿ ನ್ಯಾಯಾಲಯ ಪ್ರಕರಣವನ್ನು  ಅಕ್ಟೋಬರ್ 22 ರಂದು ವಿಚಾರಣೆ ನಡೆಸುವುದಾಗಿ ತಿಳಿಸಿದೆ.