Police Delhi High Court
ಸುದ್ದಿಗಳು

ಪೊಲೀಸ್ ಹುದ್ದೆ ಆಕಾಂಕ್ಷಿಯ ವೈದ್ಯಕೀಯ ಅರ್ಹತೆ ನಿರ್ಧರಿಸಲು ಖಾಸಗಿ ವೈದ್ಯರ ಅಭಿಪ್ರಾಯ ಅರ್ಹವಲ್ಲ: ದೆಹಲಿ ಹೈಕೋರ್ಟ್

ಭದ್ರತಾ ಪಡೆಗಳ ಸಿಬ್ಬಂದಿಯ ಕರ್ತವ್ಯದ ಬೇಡಿಕೆಗಳ ಬಗ್ಗೆ ಖಾಸಗಿ ಅಥವಾ ಇತರ ಸರ್ಕಾರಿ ವೈದ್ಯರಿಗೆ ತಿಳಿದಿಲ್ಲದಿರುವುದರಿಂದ ಅವರ ವ್ಯತಿರಿಕ್ತ ಅಭಿಪ್ರಾಯಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

Bar & Bench

ಪೊಲೀಸ್ ಪಡೆ ಆಕಾಂಕ್ಷಿಯ ವೈದ್ಯಕೀಯ ಅರ್ಹತೆಯನ್ನು ನಿರ್ಧರಿಸಲು ಸಶಸ್ತ್ರ ಅಥವಾ ಪೊಲೀಸ್ ಪಡೆಗಳ ವೈದ್ಯರ ಅಭಿಪ್ರಾಯಕ್ಕೆ ವಿರುದ್ಧವಾದ ಖಾಸಗಿ ಅಥವಾ ಇತರ ಸರ್ಕಾರಿ ವೈದ್ಯರ ಅಭಿಪ್ರಾಯವನ್ನು ಸ್ವೀಕರಿಸಲಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ (ಪ್ರಿಯಾಂಕಾ ವರ್ಸಸ್‌ ಭಾರತ ಸರ್ಕಾರ).

“… ನೇಮಕಗೊಂಡ ಸಿಬ್ಬಂದಿ ಕೆಲಸ ಮಾಡಬೇಕಾದ ಭೂಪ್ರದೇಶದಲ್ಲಿನ ಪಡೆಗಳ ಕರ್ತವ್ಯದ ಅಗತ್ಯತೆಗಳು, ಬೇಡಿಕೆಗಳ ಬಗ್ಗೆ ಚೆನ್ನಾಗಿ ತಿಳಿದಿರುವ ಪಡೆಯ ವೈದ್ಯರು ಅಭ್ಯರ್ಥಿಯ ವೈದ್ಯಕೀಯ ಅರ್ಹತೆಯು ನೇಮಕಾತಿಗೆ ಪೂರಕವಾಗಿಲ್ಲ ಎನ್ನುವ ಅಭಿಪ್ರಾಯಕ್ಕೆ ಬಂದರೆ ಹಾಗೂ ಅದರ ಹಿಂದೆ ಯಾವುದೇ ದುರುದ್ದೇಶ ಇಲ್ಲದೆ ಹೋದರೆ ಆಗ ಖಾಸಗಿ ವೈದ್ಯರ ಅಥವಾ ಇತರ ಸರ್ಕಾರಿ ವೈದ್ಯರ ವ್ಯತಿರಿಕ್ತ ಅಭಿಪ್ರಾಯವನ್ನು ಒಪ್ಪಲಾಗದು..." ಎಂದು ನ್ಯಾಯಮೂರ್ತಿಗಳಾದ ರಾಜೀವ್‌ ಸಹಾಯ್‌ ಎಂಡ್‌ಲಾ ಮತ್ತು ಆಶಾ ಮೆನನ್‌ ಅವರಿದ್ದ ಪೀಠ ಹೇಳಿದೆ.

ಹಿನ್ನೆಲೆ: ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆಗಳ ಕಾನ್‌ಸ್ಟೆಬಲ್‌ ಹುದ್ದೆಯ ಆಕಾಂಕ್ಷಿಯಾಗಿದ್ದ ಅಭ್ಯರ್ಥಿಯು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು. ವೈದ್ಯಕೀಯ ಪರೀಕ್ಷೆಯ ಸಂದರ್ಭದಲ್ಲಿ ಅರ್ಜಿದಾರರು ವೈದ್ಯಕೀಯ ಅರ್ಹತೆ ಹೊಂದಿಲ್ಲ ಎಂದು ಘೋಷಿಸಲಾಗಿತ್ತು. ಕೈಗಳ ವಕ್ರತೆಗೆ ಸಂಬಂದಿಸಿದಂತೆ ಇರುವ ನಿಯಮಗಳಲ್ಲಿ ಅರ್ಜಿದಾರರು ನಪಾಸಾಗಿದ್ದರು. ಈ ಸಂಬಂಧ ಅರ್ಜಿದಾರರು ನ್ಯಾಯಾಲಯದಲ್ಲಿ ಆಡಳಿತಾತ್ಮಕ ಮೇಲ್ಮನವಿ ಸಲ್ಲಿಸಿದ್ದರು. ಮನವಿ ಸಲ್ಲಿಸುವುದಕ್ಕೂ ಮುನ್ನ ಕರ್ನಾಟಕದ ಬೌರಿಂಗ್‌ ಮತ್ತು ಲೇಡಿ ಕರ್ಜನ್‌ ಆಸ್ಪತ್ರೆಯ ಮೂಳೆತಜ್ಞರನ್ನು ಭೇಟಿ ಮಾಡಿದ್ದರು. ಆ ವೈದ್ಯರು ಅರ್ಜಿದಾರರು ವೈದ್ಯಕೀಯವಾಗಿ ಅರ್ಹರಾಗಿದ್ದಾರೆ ಎಂದು ಪ್ರಮಾಣಿಸಿದ್ದರು.