ಸುದ್ದಿಗಳು

ರಿಪಬ್ಲಿಕ್‌ ಟಿವಿ ಅಧಿಕಾರಿಗೆ ಟ್ರಾನ್ಸಿಟ್‌ ಜಾಮೀನು ನೀಡಿದ ಕರ್ನಾಟಕ ಹೈಕೋರ್ಟ್

Bar & Bench

ಮುಂಬೈ ಪೊಲೀಸರು ಬಯಲಿಗೆಳೆದರೆನ್ನಲಾದ ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್‌ ಟಿವಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಒಒ) ಪ್ರಿಯಾ ಮುಖರ್ಜಿ ಅವರಿಗೆ ಕರ್ನಾಟಕ ಹೈಕೋರ್ಟ್‌ ಟ್ರಾನ್ಸಿಟ್ ಜಾಮೀನು ನೀಡಿದೆ. ಅದರಂತೆ 20 ದಿನಗಳ ಕಾಲ ಜಾಮೀನಿಗೆ ಅವಕಾಶ ನೀಡಲಾಗಿದ್ದು ಈ ಅವಧಿಯಲ್ಲಿ ಮುಂದಿನ ಪರಿಹಾರಕ್ಕಾಗಿ ಸಂಬಂಧಪಟ್ಟ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ಪೀಠ ಸೂಚನೆ ನೀಡಿದೆ.

ನ್ಯಾಯಮೂರ್ತಿ ಎಚ್‌ ಪಿ ಸಂದೇಶ್‌ ಅವರಿದ್ದ ಪೀಠ “ಬಂಧನ ಭೀತಿಯಲ್ಲಿರುವ ಅವರು ಟ್ರಾನ್ಸಿಟ್‌ ಜಾಮೀನು ಪಡೆಯಲು ಅರ್ಹರು” ಎಂದು ತಿಳಿಸಿದರು. ವಿಚಾರಣೆಗೆ ಸಹಕರಿಸಲು ಪ್ರಿಯಾ ಅವರು ಮುಂದಾಗಿರುವುದರಿಂದ ಬಂಧನ ಪೂರ್ವ ಜಾಮೀನು ಮಂಜೂರು ಮಾಡುವಂತೆ ಆಕೆಯ ಪರ ವಕೀಲರು ಕೋರಿದರು. "ಮುಂಬೈ ಪೊಲೀಸ್ ಆಯುಕ್ತರು ನೀಡಿದ ಪತ್ರಿಕಾ ಹೇಳಿಕೆಗಳ ಆಧಾರಿಸಿ ತನ್ನನ್ನು ಮತ್ತು ಎಆರ್‌ಜಿ ಔಟ್ಲಿಯರ್‌ (ರಿಪಬ್ಲಿಕ್‌ ಟಿವಿಯ ಮಾಲೀಕ ಕಂಪೆನಿ) ಇತರ ಉದ್ಯೋಗಿಗಳನ್ನು ಪ್ರಕರಣದಲ್ಲಿ ತಪ್ಪಾಗಿ ಎಳೆತರಲಾಗಿದೆ" ಎಂದು ಪ್ರಿಯಾ ತಮ್ಮ ನಿರೀಕ್ಷಣಾ ಜಾಮೀನಿನಲ್ಲಿ ಅರ್ಜಿ ಸಲ್ಲಿಸಿದ್ದರು.

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ಮತ್ತು ಪಾಲ್ಗಾರ್ ಗುಂಪುಹಲ್ಲೆ ಪ್ರಕರಣದಲ್ಲಿ ಮುಂಬೈ ಪೊಲೀಸರ ದುರುದ್ದೇಶದ ತನಿಖೆಯನ್ನು ಪ್ರಶ್ನಿಸಿದ್ದರಿಂದ ರಿಪಬ್ಲಿಕ್ ಟಿವಿ ಮತ್ತು ಅರ್ನಾಬ್ ಗೋಸ್ವಾಮಿ ವಿರುದ್ಧ ಮುಂಬೈ ಪೊಲೀಸರು ದುರ್ವರ್ತನೆ ತೋರುತ್ತಿದ್ದಾರೆ ಎಂದು ಪ್ರಿಯಾ ಹೇಳಿದ್ದರು. ಪ್ರಿಯಾ ಅವರ ಬಂಧನಕ್ಕೆ ಸಮ್ಮತಿ ಸೂಚಿಸಿದರೆ ಅದು ಸಂವಿಧಾನದ 19 (1) (ಎ) ವಿಧಿ ಮತ್ತು ಸಂವಿಧಾನದ 21 ನೇ ವಿಧಿಗಳ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಮಹಾರಾಷ್ಟ್ರ ಸರ್ಕಾರದ ಪರವಾಗಿ ಹಾಜರಾದ ಹಿರಿಯ ವಕೀಲ ದೇವದೂತ್ ಕಾಮತ್ ಅವರು ಜಾಮೀನು ಅರ್ಜಿ ಸಮರ್ಥನೀಯವಲ್ಲ ಎಂದು ವಾದಿಸಿದರು. ಸೆಕ್ಷನ್ 438ರಡಿ ಸಲ್ಲಿಸಲಾದ ಪ್ರಸ್ತುತ ಅರ್ಜಿ ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಿದ ರಿಟ್ ಅರ್ಜಿಯ ಪಡಿಯಚ್ಚು ಎಂದು ಅವರು ವಾದಿಸಿದರು. ಬಾಂಬೆ ಹೈಕೋರ್ಟ್‌ ಯಾವುದೇ ಪರಿಹಾರ ನೀಡದೇ ಇರುವುದರಿಂದ ಅರ್ಜಿದಾರರು ಕರ್ನಾಟಕ ಹೈಕೋರ್ಟ್‌ ಮೊರೆ ಹೋಗಿದ್ದಾರೆ ಎಂದು ಕಾಮತ್‌ ಹೇಳಿದರು.

ತಮಗಿಚ್ಛೆ ಬಂದಲ್ಲಿ ಅರ್ಜಿ ಸಲ್ಲಿಸಲು (ಫೋರಂ ಶಾಪಿಂಗ್) ದಾವೆದಾರರಿಗೆ‌ ನ್ಯಾಯಾಲಯ ಅವಕಾಶ ನೀಡಬಾರದು. ಇಲ್ಲದೇ ಹೋದರೆ ಇದು ಅರಾಜಕತೆ ಸೃಷ್ಟಿಸುತ್ತದೆ ಎಂದು ಅವರು ಹೇಳಿದರು. ಅಲ್ಲದೆ “ಪ್ರಿಯಾ ಅವರು ಮೊಬೈಲ್‌ನಲ್ಲಿ ಮಾಡಿದ ಚಾಟ್‌ಗಳನ್ನು ಅಳಿಸುವ ಅಭ್ಯಾಸ ಇರುವುದರಿಂದ ಕೂಡಲೇ ಅವರ ವಿಚಾರಣೆ ನಡೆಸಬೇಕು. ಏಕೆಂದರೆ ಅರ್ನಾಬ್‌ ಅವರೊಂದಿಗೆ ನಡೆಸಿದ ಸಂಭಾಷಣೆ ಬಗ್ಗೆ ಪ್ರಶ್ನಿಸಿದಾಗ ನಾನು ಎಲ್ಲಾ ಉದ್ಯೋಗಿಗಳೊಂದಿಗೆ ಮಾತನಾಡುತ್ತೇನೆ. ಆದರೆ ಆ ಸಂಭಾಷಣೆಯ ವಿವರಗಳನ್ನು ಅಳಿಸಿಹಾಕುತ್ತೇನೆ ಎಂದಿದ್ದರು” ಎಂಬುದಾಗಿ ವಾದಿಸಿದರು. ಜೊತೆಗೆ “ಒಂದೆಡೆ ಸಾಕ್ಷ್ಯಾಧಾರಗಳು ಹಾಳಾಗುತ್ತಿವೆ ಜೊತೆಗೆ ಪ್ರಕರಣದ ತನಿಖೆಯನ್ನು ಅರ್ಜಿದಾರರು ವಿಳಂಬಗೊಳಿಸುತ್ತಿದ್ದಾರೆ” ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಆದರೆ ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾದ ಆರೋಪಗಳು ವಶಕ್ಕೆ ಪಡೆದು ನಡೆಸುವ ವಿಚಾರಣೆಗೆ ಅರ್ಹವಲ್ಲ ಎಂದು ಪ್ರಿಯಾ ಪರ ವಕೀಲರು ವಾದ ಮಂಡಿಸಿದರು.