ಬೆಂಗಳೂರಿನ ಕೆ ಆರ್ ಪುರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಯು ಮಾಹಿತಿ ಹಕ್ಕು ಕಾಯಿದೆಯಡಿ ಮಾಹಿತಿ ಒದಗಿಸಲು ಎರಡು ವರ್ಷ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಅವರಿಗೆ ಕರ್ನಾಟಕ ಹೈಕೋರ್ಟ್ ಈಚೆಗೆ ₹35 ಸಾವಿರ ದಂಡ ವಿಧಿಸಿ ಆದೇಶಿಸಿದೆ.
ವೈಟ್‌ಫೀಲ್ಡ್ ನಿವಾಸಿ ಸಿಜೊ ಸೆಬಾಸ್ಟಿನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರು ಆದೇಶ ಮಾಡಿದ್ದಾರೆ.
ಅರ್ಜಿದಾರರು ಕೆಲ ಮಾಹಿತಿ ಕೋರಿ ಮಾಹಿತಿ ಹಕ್ಕು ಕಾಯ್ದೆಯಡಿ ಕೆ ಆರ್ ಪುರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ 2019ರಲ್ಲಿ ಅರ್ಜಿ ಸಲ್ಲಿಸಿದ್ದರು. ನಿಗದಿತ ಅವಧಿ ಪೂರ್ಣಗೊಂಡರೂ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಯಾದ ಶಂಕರ್ ಅವರು ಅರ್ಜಿದಾರರಿಗೆ ಮಾಹಿತಿ ಒದಗಿಸಿರಲಿಲ್ಲ. ಆ ಕ್ರಮ ಪ್ರಶ್ನಿಸಿ ಅರ್ಜಿದಾರರು 2020ಲ್ಲಿ ಮಾಹಿತಿ ಹಕ್ಕು ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು.
ಇದರ ವಿಚಾರಣೆ ನಡೆಸಿದ್ದ ಆಯೋಗ ಶಂಕರ್‌ಗೆ 2021ರ ನವೆಂಬರ್ 10ರಂದು ನೋಟಿಸ್ ಜಾರಿ ಮಾಡಿತ್ತು. ಇದರ ಅನ್ವಯ 2021ರ ಡಿಸೆಂಬರ್ 13ರಂದು ಶಂಕರ್ ಅವರು ಮಾಹಿತಿಯನ್ನು ಪೋಸ್ಟ್ ಮೂಲಕ ಅರ್ಜಿದಾರರಿಗೆ ಒದಗಿಸಿದ್ದರು. ಅದನ್ನು ಪರಿಗಣಿಸಿದ ಆಯೋಗವು ಮೇಲ್ಮನವಿಯನ್ನು 2022ರ ಜನವರಿ 25ರಂದು ಇತ್ಯರ್ಥಪಡಿಸಿತ್ತು.
ಈ ಕ್ರಮ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದ ಅರ್ಜಿದಾರರು “ಮಾಹಿತಿ ನೀಡಲು ವಿಳಂಬ ಮಾಡಿದ ಅಧಿಕಾರಿಗೆ ಪ್ರತಿ ದಿನಕ್ಕೆ ₹25 ಸಾವಿರ ದಂಡ ವಿಧಿಸಲು ಮಾಹಿತಿ ಹಕ್ಕು ಕಾಯಿದೆ ಅಡಿ ಅವಕಾಶವಿದೆ. ಆದರೆ, ಶಂಕರ್ ಅವರು ಮಾಹಿತಿ ನೀಡಲು ಎರಡು ವರ್ಷ ವಿಳಂಬ ಮಾಡಿದರೂ ಆಯೋಗ ಮಾತ್ರ ಅವರಿಗೆ ದಂಡ ವಿಧಿಸದೆ ಔಪಚಾರಿಕ ರೀತಿಯಲ್ಲಿ ಮೇಲ್ಮನವಿಯನ್ನು ಇತ್ಯರ್ಥಪಡಿಸಿದೆ. ಆಯೋಗವು ಸಾರ್ವಜನಿಕ ನಿಯಮಗಳಡಿ ಕಾರ್ಯ ನಿರ್ವಹಿಸುತ್ತದೆ. ಅದೊಂದು ಅರೆ ನ್ಯಾಯಿಕ ಪ್ರಾಧಿಕಾರವಾಗಿದೆ. ಮಾಹಿತಿ ನೀಡಲು ವಿಳಂಬ ಮಾಡುವ ಮೂಲಕ ತಪ್ಪು ಎಸಗಿರುವ ಅಧಿಕಾರಿಗೆ ಆಯೋಗವು ದಂಡ ವಿಧಿಸಬೇಕಿತ್ತು” ಎಂದು ವಾದಿಸಿದ್ದರು.
ಇದನ್ನು ಪುರಸ್ಕರಿಸಿರುವ ಹೈಕೋರ್ಟ್ “ಮಾಹಿತಿ ನೀಡಲು ಅರ್ಜಿ ಸ್ವೀಕರಿಸುವುದಕ್ಕೆ ನಿರಾಕರಿಸುವುದು ಮತ್ತು ನಿಗದಿತ ಸಮಯದಲ್ಲಿ ಮಾಹಿತಿ ನೀಡಲು ವಿಳಂಬ ಮಾಡುವುದಕ್ಕೆ ಸಕಾರಣಗಳು ಇರಬೇಕು. ಮಾಹಿತಿ ನೀಡಲು ವಿಳಂಬ ಮಾಡಿದ ಅಧಿಕಾರಿಗೆ ಪ್ರತಿ ದಿನಕ್ಕೆ ₹25 ಸಾವಿರ ದಂಡ ವಿಧಿಸಲು ಅವಕಾಶವಿದೆ. ಮಾಹಿತಿ ನೀಡಲು ಎರಡು ವರ್ಷ ವಿಳಂಬ ಮಾಡಿದರೂ ಆಯೋಗವು ತಪ್ಪಿತಸ್ಥ ಅಧಿಕಾರಿಗೆ ದಂಡ ವಿಧಿಸಿಲ್ಲ. ಹಾಗಾಗಿ, ಮಾಹಿತಿ ನೀಡಲು ವಿಳಂಬ ಮಾಡಿರುವ ಕೆ ಆರ್ ಪುರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶಂಕರ್ ಅವರಿಗೆ ₹25 ಸಾವಿರ ದಂಡ ವಿಧಿಸಿದ್ದು, ₹10 ಸಾವಿರವನ್ನು ಅರ್ಜಿದಾರರಿಗೆ ಪರಿಹಾರ ಎಂದು ಘೋಷಿಸಲಾಗಿದೆ. ದಂಡ ಮತ್ತು ಪರಿಹಾರದ ಹಣವನ್ನು ಶಂಕರ್ ಅವರು 30 ದಿನಗಳಲ್ಲಿ ಅರ್ಜಿದಾರರಿಗೆ ಪಾವತಿಸಬೇಕು. ಒಂದು ವೇಳೆ ಪಾವತಿ ಮಾಡಲು ವಿಳಂಬ ಮಾಡಿದರೆ ಮೊದಲ 30 ದಿನಗಳಿಗೆ ಶೇ.2ರಷ್ಟು ಹಾಗೂ ನಂತರದ ದಿನಗಳಿಗೆ ಶೇ. 3ರಷ್ಟು ಬಡ್ಡಿ ನೀಡಬೇಕು" ಎಂದು ಪೀಠ ಆದೇಶ ಮಾಡಿದೆ.