ಬೆಂಗಳೂರು ವಿಶ್ವವಿದ್ಯಾಲಯದ ಜೀವ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಎಂ ಶಿವಶಂಕರ್ ಅವರನ್ನು ಅವರ ಹುದ್ದೆಯಿಂದ ತೆರವುಗೊಳಿಸಲು ಆದೇಶಿಸಬೇಕು ಎಂಬ ಕೋರಿಕೆಯನ್ನು ಈಚೆಗೆ ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದ್ದು, ಮೂವರು ಅರ್ಜಿದಾರರಿಗೆ ದಂಡ ವಿಧಿಸಿದೆ.
ಬೆಂಗಳೂರಿನ ಎಚ್ ಟಿ ಉಮೇಶ್, ಮಂಡ್ಯ ಜಿಲ್ಲೆ ತೈಲೂರು ಗ್ರಾಮದ ಎಸ್ ಆನಂದ್ ಮತ್ತು ನಾಗರಭಾವಿಯ ಎಚ್ ಪಿ ಪುಟ್ಟರಾಜು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠ ವಜಾಗೊಳಿಸಿದೆ.
“ಸೂಕ್ತ ಅರ್ಹತೆ ಹೊಂದಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರನ್ನು ಅವರು ಅಲಂಕರಿಸಿದ ಹುದ್ದೆಯಿಂದ ತೆಗೆದು ಹಾಕುವುದಕ್ಕಾಗಿ ಕೊ-ವಾರಂಟೊ ಅಡಿಯಲ್ಲಿ ಆದೇಶ ನೀಡಲು ಆಗದು” ಎಂದು ಪೀಠ ಸ್ಪಷ್ಟಪಡಿಸಿದೆ.
“ಈಗ ನೇಮಕಗೊಂಡಿರುವ ಹುದ್ದೆಗೆ ಶಿವಶಂಕರ್ ಅರ್ಹರಲ್ಲ” ಎಂದು ಆಕ್ಷೇಪಿಸಿದ್ದ ಅರ್ಜಿದಾರರ ವಾದವನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಪೀಠವು “ಪ್ರಾಧ್ಯಾಪಕರು ಮತ್ತು ಸಹ ಪ್ರಾಧ್ಯಾಪಕರ ವೃತ್ತಿ ಸ್ವರೂಪವನ್ನು ಸಾರ್ವಜನಿಕ ಹುದ್ದೆ ಎಂದು ಪರಿಗಣಿಸಲು ಆಗುವುದಿಲ್ಲ” ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.
“ಅರ್ಜಿದಾರರು ವೈಯಕ್ತಿಕ ಹಾಗೂ ವೃತ್ತಿ ದ್ವೇಷದ ಹಿನ್ನೆಲೆಯಲ್ಲಿ ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ಈ ಅರ್ಜಿ ಸಲ್ಲಿಸಿದ್ದಾರೆ” ಎಂಬ ಪ್ರತಿವಾದಿ ಶಿವಶಂಕರ್ ಪರ ವಕೀಲ ಜಿ ಲಕ್ಷ್ಮಿಕಾಂತ್ ಅವರ ವಾದವನ್ನು ಪುರಸ್ಕರಿಸಿರುವ ಪೀಠವು ಮೂವರೂ ಅರ್ಜಿದಾರರಿಗೆ ತಲಾ ₹7,500 ದಂಡ ವಿಧಿಸಿದೆ.
“ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು (ಪಿಐಎಲ್), ವೈಯಕ್ತಿಕ ಹಿತಾಸಕ್ತಿ ಅರ್ಜಿಗಳಾಗಬಾರದು” ಎಂದು ಎಚ್ಚರಿಸಿರುವ ಪೀಠವು ಅರ್ಜಿದಾರರು ದಂಡದ ಮೊತ್ತವನ್ನು ನಾಲ್ಕು ವಾರಗಳ ಒಳಗಾಗಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿ ಮಾಡಬೇಕು ಎಂದು ಆದೇಶಿಸಿದೆ.