Karnataka High Court and doctor
Karnataka High Court and doctor 
ಸುದ್ದಿಗಳು

ಸಾರ್ವಜನಿಕ ಆರೋಗ್ಯ ರಕ್ಷಣೆಯಲ್ಲಿ ತೊಡಗಿರುವವರು ವೃತ್ತಿಪರ ಮಾನದಂಡ ಪಾಲಿಸಬೇಕು: ಹೈಕೋರ್ಟ್‌

Bar & Bench

“ವೈದ್ಯಕೀಯ ವೃತ್ತಿ ಕೈಗೊಳ್ಳುವಾಗ ಸಂಬಂಧಪಟ್ಟ ವೈದ್ಯಕೀಯ ಮಂಡಳಿ ಪ್ರಮಾಣ ಪತ್ರ ಹೊಂದಿರಲೇಬೇಕು. ಸಾರ್ವಜನಿಕರ ಆರೋಗ್ಯ ರಕ್ಷಣೆಯಂತಹ ಮಹತ್ವದ ಹೊಣೆ ಹೊತ್ತಿರುವ ಈ ವೃತ್ತಿಯಲ್ಲಿ ವೃತ್ತಿಪರ ಮಾನದಂಡ ಮತ್ತು ನಡವಳಿಕೆ ಕಾಯ್ದುಕೊಳ್ಳುವುದು ಸಹ ಅತ್ಯಂತ ಪ್ರಮುಖವಾಗುತ್ತದೆ” ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಅಭಿಪ್ರಾಯ ವ್ಯಕ್ತಪಡಿಸಿದೆ.

ಕ್ಲಿನಿಕ್ ನೋಂದಣಿಗೆ ಜಿಲ್ಲಾಧಿಕಾರಿ ಅನುಮತಿ ನೀಡಿಲ್ಲ ಎಂದು ಆಕ್ಷೇಪಿಸಿ ಉಡುಪಿಯ ಡಾ. ಮೋಹನ್ ಭಟ್ಟ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠ ವಜಾ ಮಾಡಿದೆ.

“ಸಾರ್ವಜನಿಕ ಆರೋಗ್ಯ ರಕ್ಷಣೆಯಲ್ಲಿ ತೊಡಗಿರುವವರು, ವೈದ್ಯಕೀಯ ವೃತ್ತಿ ಕೈಗೊಳ್ಳುವವರು ಸಾರ್ವಜನಿಕ ನಂಬಿಕೆ ಉಳಿಸಿಕೊಳ್ಳುವ ಜೊತೆಗೆ ವೃತ್ತಿಪರ ಮಾನದಂಡ ಅನುಸರಿಸುತ್ತಿರಬೇಕು. ಜನರ ವಿಶ್ವಾಸ ಉಳಿಸಿಕೊಳ್ಳಬೇಕಾದರೆ ಅವರ ನಡವಳಿಕೆ ಕೂಡ ಮುಖ್ಯವಾಗಿರುತ್ತದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

“ಕೆಪಿಎಂಇ ಕಾಯಿದೆ ಸೆಕ್ಷನ್ 5(9)(ಬಿ) ಪ್ರಕಾರ ಕ್ಲಿನಿಕ್ ನೋಂದಣಿಗೆ ರಾಜ್ಯ ವೈದ್ಯಕೀಯ ಮಂಡಳಿ ನೀಡಿರುವ ಪ್ರಮಾಣ ಪತ್ರ ಮತ್ತು ಇತರೆ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಅಲೋಪತಿ ವಿಭಾಗದಲ್ಲಿ ವೈದ್ಯಕೀಯ ವೃತ್ತಿ ಕೈಕೊಳ್ಳುವವವರಿಗೆ ಭಾರತೀಯ ವೈದ್ಯಕೀಯ ಮಂಡಳಿ ಪ್ರಮಾಣಪತ್ರ ನೀಡುತ್ತದೆ. ಅಂತೆಯೇ ಪ್ರತಿಯೊಂದು ವೈದ್ಯಕೀಯ ವಿಭಾಗಕ್ಕೂ ಒಂದೊಂದು ನಿಯಂತ್ರಣ ಸಂಸ್ಥೆಗಳಿದ್ದು, ಅವುಗಳ ಪ್ರಮಾಣ ಪತ್ರವನ್ನು ಪಡೆಯಲೇಬೇಕಾಗುತ್ತದೆ. ಆದರೆ, ಅವುಗಳನ್ನು ಅರ್ಜಿದಾರರು ಸಲ್ಲಿಸಿಲ್ಲ. ಈ ಎಲ್ಲ ಅಂಶಗಳನ್ನು ಏಕಸದಸ್ಯ ಪೀಠ ದಾಖಲಿಸಿದೆ. ಆದ್ದರಿಂದ ಏಕ ಸದಸ್ಯ ಪೀಠದ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ” ಎಂದು ನ್ಯಾಯಾಲಯ ಆದೇಶಿಸಿದೆ.

ಪ್ರಕರಣದ ವಿವರ: ಅರ್ಜಿದಾರರು ಬಿಎಸ್‌ಸಿ ಪದವಿ ಹಾಗೂ ಪರ್ಯಾಯ ವೈದ್ಯಕೀಯ ಡಿಪ್ಲೊಮಾ ಮತ್ತು ಕೊಲ್ಕತ್ತಾದ ಭಾರತೀಯ ಪರ್ಯಾಯ ವೈದ್ಯಕೀಯ ಮಂಡಳಿಯಿಂದ ಎಂಡಿ ಪದವಿ ಪಡೆದಿರುವುದಾಗಿ ಹೇಳಿಕೊಂಡು ಉಡುಪಿ ಪಟ್ಟಣದಲ್ಲಿ ಕ್ಲಿನಿಕ್ ಆರಂಭಿಸಲು ಮತ್ತು ನೋಂದಣಿ ಮಾಡಲು ಅನುಮತಿ ಕೋರಿ 2010ರಲ್ಲಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯಿದೆ-2007ರಡಿ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದರು. ಜಿಲ್ಲಾಧಿಕಾರಿ ಕಚೇರಿಯಿಂದ ಅರ್ಜಿದಾರರಿಗೆ ಹಲವು ನೋಟಿಸ್‌ಗಳನ್ನು ಕಳುಹಿಸಿ ರಾಜ್ಯ ವೈದ್ಯಕೀಯ ಮಂಡಳಿ ನೀಡಿರುವ ವೈದ್ಯಕೀಯ ವೃತ್ತಿಪರರು ಪ್ರಮಾಣಪತ್ರ ಸಲ್ಲಿಸುವಂತೆ ಕೋರಿದ್ದರು. ಆದರೆ, ಆ ಪ್ರಮಾಣ ಪತ್ರವನ್ನು ಅರ್ಜಿದಾರರು ಸಲ್ಲಿಸಿರಲಿಲ್ಲ. ಹಾಗಾಗಿ, ಅದನ್ನು ಪರಿಗಣಿಸಿ ಅರ್ಜಿದಾರರ ಮನವಿ ತಿರಸ್ಕರಿಸಿ ಜಿಲ್ಲಾಧಿಕಾರಿಗಳು 2018ರ ಡಿಸೆಂಬರ್‌ 6ರಂದು ಹಿಂಬರಹ ನೀಡಿದ್ದರು.

ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಏಕಸದಸ್ಯ ಪೀಠವು ಅರ್ಜಿ ವಜಾಗೊಳಿಸಿ 2023ರ ಮಾರ್ಚ್‌ 12ರಂದು ಆದೇಶಿಸಿತ್ತು. ಇದರಿಂದ ಅರ್ಜಿದಾರರು ವಿಭಾಗೀಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿ, ತಮ್ಮ ವಿಭಾಗ ಆಯುಷ್ ಇಲಾಖೆಯ ವ್ಯಾಪ್ತಿಗೆ ಒಳಪಡುವುದಿಲ್ಲ, ಆದರೆ, ತಾನು ವೈದ್ಯಕೀಯ ವೃತ್ತಿಯನ್ನು ಕೈಗೊಳ್ಳಲು ಎಲ್ಲ ಅರ್ಹತೆ ಹೊಂದಿದ್ದೇನೆ ಎಂದು ವಾದ ಮಂಡಿಸಿದ್ದರು.

Dr Mohan Bhatta Vs State of Karnataka.pdf
Preview