NIA , UAPA 
ಸುದ್ದಿಗಳು

ಪ್ರೊ.ಜೋಸೆಫ್‌ ಮಣಿಕಟ್ಟು ಕತ್ತರಿಸಿದ ಪ್ರಕರಣ: ಮೂವರು ದೋಷಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೇರಳದ ಎನ್‌ಐಎ ನ್ಯಾಯಾಲಯ

ಪ್ರೊ. ಟಿ ಜೆ ಜೋಸೆಫ್‌ ಅವರ ಮಣಿಕಟ್ಟು ಕತ್ತರಿಸಿದ ಕುಖ್ಯಾತ ಪ್ರಕರಣದಲ್ಲಿನ ಆರು ದೋಷಿಗಳ ಪೈಕಿ ಮೂವರಿಗೆ ಕೇರಳದ ಎನ್‌ಐಎ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದ್ದು, ಉಳಿದ ಮೂವರಿಗೆ ಮೂರು ವರ್ಷ ಶಿಕ್ಷೆ ವಿಧಿಸಿದೆ.

Bar & Bench

ಕೇರಳದ ಪ್ರೊಫೆಸರ್‌ ಟಿ ಜೆ ಜೋಸೆಫ್‌ ಅವರ ಮಣಿಕಟ್ಟು ಕತ್ತರಿಸಿದ ಪ್ರಕರಣದಲ್ಲಿ ಮೂವರು ದೋಷಿಗಳಿಗೆ ಜೀವಾವಧಿ ಹಾಗೂ ಉಳಿದ ಮೂವರಿಗೆ ಮೂರು ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಗುರುವಾರ ಕೇರಳದ ಎನ್‌ಐಎ ವಿಶೇಷ ನ್ಯಾಯಾಲಯವು ತೀರ್ಪು ನೀಡಿದೆ [ಭಾರತ ಸರ್ಕಾರ ವರ್ಸಸ್‌ ಸವದ್‌ ಮತ್ತು ಇತರರು].

ಪ್ರೊ. ಜೋಸೆಫ್‌ ಅವರು ಪ್ರಶ್ನೆ ಪತ್ರಿಕೆ ರೂಪಿಸುವಾಗ ಪ್ರವಾದಿ ಮೊಹಮ್ಮದ್‌ ಅವರಿಗೆ ಅಪಮಾನಿಸಿದ್ದಾರೆ ಎಂದು ಆರೋಪಿಸಿ ತೊಡುಪುಳದಲ್ಲಿನ ನ್ಯೂಮ್ಯಾನ್‌ ಕಾಲೇಜಿನಲ್ಲಿ ಮಲೆಯಾಳಂ ಪ್ರಾಧ್ಯಾಪಕರಾಗಿದ್ದ ಜೋಸೆಫ್ ಅವರ ಮಣಿಕಟ್ಟು ಅನ್ನು ಆರೋಪಿಗಳು ಕತ್ತರಿಸಿದ್ದರು.

“ಪ್ರೊ. ಜೋಸೆಫ್‌ ಅವರ ಸಂಬಂಧಿಕರು ಮತ್ತು ನೆರಹೊರೆಯವರ ಸಮ್ಮುಖದಲ್ಲಿ ಜೋಸೆಫ್‌ ಅವರ ಮಣಿಕಟ್ಟು ಅನ್ನು ಕತ್ತರಿಸಿ ಬಿಸಾಡಿದ ಪ್ರಕರಣ ಇದಾಗಿದ್ದು, ಒಂದು ವರ್ಗದ ಜನರಲ್ಲಿ ಭೀತಿ ಹುಟ್ಟಿಸುವುದಾಗಿದೆ. ಆ ಸಂದರ್ಭವೂ ಅತ್ಯಂತ ಭಯಾನಕವಾಗಿದೆ. ಧಾರ್ಮಿಕ ಗ್ರಂಥದಲ್ಲಿ ಉಲ್ಲೇಖಿಸಿರುವಂತೆ ಇಸ್ಲಾಂ ಮತ್ತು ಪ್ರವಾದಿ ಮೊಹಮ್ಮದ್‌ ಅವರಿಗೆ ಪ್ರಶ್ನೆ ಪತ್ರಿಕೆಯಲ್ಲಿ ಅಪಮಾನ ಮಾಡಿದ್ದಕ್ಕಾಗಿ ಆರೋಪಿಗಳು ಪ್ರೊ. ಜೋಸೆಫ್‌ ಅವರಿಗೆ ಶಿಕ್ಷೆ ನೀಡಿದ್ದಾರೆ. ಪ್ರೊ. ಜೋಸೆಫ್‌ ಅವರು ಅನುಭವಿಸಿರುವ ಮಾನಸಿಕ ಮತ್ತು ದೈಹಿಕ ಯಾತನೆ ಭಯಾನಕವಾಗಿದೆ. ಘಟನೆಗೆ ಸಾಕ್ಷಿಯಾದ ಪ್ರೊ. ಜೋಸೆಫ್‌ ಅವರ ಪತ್ನಿಯು, ಘಟನೆ ಮರೆಯಲಾರದೇ ಆತ್ಮಹತ್ಯೆಗೆ ಶರಣಾಗಿದ್ದಾರೆ” ಎಂದು ನ್ಯಾಯಾಧೀಶರಾದ ಅನಿಲ್‌ ಕೆ ಭಾಸ್ಕರ್‌ ಹೇಳಿದ್ದು, ಇದೊಂದು ಉಗ್ರ ಕೃತ್ಯ ಮತ್ತು ದೇಶದ ಜಾತ್ಯತೀತ ಬಂದಿಗೆ ಹೊಡೆತ ನೀಡುವ ಘಟನೆಯಾಗಿದೆ ಎಂದಿದ್ದಾರೆ.

“ಇದೊಂದು ಉಗ್ರ ಕೃತ್ಯವಾಗಿದ್ದು, ಇದರಿಂದ ದೇಶ ಮತ್ತು ಇಲ್ಲಿನ ಜನರು ಸಾಕಷ್ಟು ಯಾತನೆ ಅನುಭವಿಸಿದ್ದಾರೆ. ನಾಗರಿಕತೆ, ಭದ್ರತೆ ಮತ್ತು ಮಾನವೀಯತಗೆ ಕಂಟಕವಾಗಿರುವ ಆರು ಬೆದರಿಕೆಗಳ ಪೈಕಿ ಭಯೋತ್ಪಾದನಾ ಕೃತ್ಯವೂ ಒಂದು. ಆರೋಪಿಗಳು ಎಸಗಿರುವ ಕೃತ್ಯವು ಸಾಮಾಜಿಕ ಬಂದಿಗೆ ಹೊಡೆತ ನೀಡುವ ಕೆಲಸವಾಗಿದೆ. ಇದೊಂದು ರೀತಿಯಲ್ಲಿ ಪರ್ಯಾಯ ಧಾರ್ಮಿಕ ನ್ಯಾಯಾಂಗ ಸೃಷ್ಟಿಸುವ ಪ್ರಯತ್ನವಾಗಿದ್ದು, ಇದು ಕಾನೂನುಬಾಹಿರ, ಅಕ್ರಮ ಮತ್ತು ಸಂವಿಧಾನಬಾಹಿರ ಕೃತ್ಯವಾಗಿದೆ. ಸಂವಿಧಾನದ ಅಡಿ ಸ್ವತಂತ್ರ ಭಾರತದಲ್ಲಿ ಇದಕ್ಕೆ ಅವಕಾಶವಿಲ್ಲ. ಕಾನೂನಿನ ಆಡಳಿತಕ್ಕೆ ಒಳಪಟ್ಟಿರುವ ಈ ದೇಶದಲ್ಲಿ ಇದನ್ನು ಒಪ್ಪಲಾಗದು” ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ.

ಈ ಪ್ರಕರಣದ ವಿಚಾರಣೆಯನ್ನು ಎರಡು ಹಂತದಲ್ಲಿ ನಡೆಸಲಾಗಿದ್ದು, ಮೊದಲ ಹಂತದಲ್ಲಿ 31 ಆರೋಪಿಗಳ ಪೈಕಿ 13 ಮಂದಿಯನ್ನು 2015ರಲ್ಲಿ ದೋಷಿಗಳು ಎಂದು ಘೋಷಿಸಲಾಗಿತ್ತು. ಈಗ ಎರಡನೇ ಹಂತದ ವಿಚಾರಣೆ ನಡೆದಿದ್ದು, 11 ಮಂದಿಯ ಪೈಕಿ ಆರು ಮಂದಿಯನ್ನು ದೋಷಿಗಳು ಎಂದು ಘೋಷಿಸಲಾಗಿದೆ. ಉಳಿದ ಐವರನ್ನು ಆರೋಪ ಮುಕ್ತಗೊಳಿಸಲಾಗಿದೆ.

ಪ್ರಶ್ನೆ ಪತ್ರಿಕೆಯಲ್ಲಿ ಅಳವಡಿಸಿದ್ದ ಪ್ರಶ್ನೆಯು ವಿವಾದದ ಕೇಂದ್ರ ಬಿಂದುವಾಗಿದ್ದು, ಇದರ ವಿರುದ್ಧ ಈಗ ನಿಷೇಧಕ್ಕೆ ಒಳಪಟ್ಟಿರುವ ಪಿಎಫ್‌ಐ ಮತ್ತು ಎಸ್‌ಡಿಪಿಎಫ್‌ ನೇತೃತ್ವದಲ್ಲಿ ಹಲವು ಮುಸ್ಲಿಮ್‌ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಇದಕ್ಕೂ ಮುನ್ನ, ಘಟನೆಗೆ ಸಂಬಂಧಿಸಿದಂತೆ ಪ್ರೊ. ಜೋಸೆಫ್‌ ಅವರ ವಿರುದ್ಧ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಲ್ಲಿ ಕೇರಳ ಸರ್ಕಾರವು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿತ್ತು. ಈ ಸಂಬಂಧ ಪ್ರೊ. ಜೋಸೆಫ್‌ ಅವರು ಬಂಧನಕ್ಕೆ ಒಳಗಾಗಿ ಆರು ದಿನ ಜೈಲಿನಲ್ಲಿದ್ದು, ಆನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ.

ಅದಾಗ್ಯೂ, ಪ್ರೊ. ಜೋಸೆಫ್‌ ಅವರಿಗೆ ಬೆದರಿಗೆ ಕರೆಗಳು ಬರುತ್ತಿದ್ದವು, ಒಂದು ಭಾನುವಾರ ಚರ್ಚ್‌ನಲ್ಲಿ ಪ್ರಾರ್ಥನೆ ಮುಗಿಸಿ ಸಹೋದರಿ ಮತ್ತು ತಾಯಿಯ ಜೊತೆ ವಾಪಸಾಗುವಾಗ ಅವರನ್ನು ಕಾರಿನಿಂದ ಎಳೆದ ದುಷ್ಕರ್ಮಿಗಳ ಗುಂಪು ಜೊಸೆಫ್‌ ಅವರ ಬಲಗೈ ಮಣಿಕಟ್ಟು ಕತ್ತರಿಸಿ ಬಿಸಾಡಿತ್ತು. ಆನಂತರ ಸಾಕಷ್ಟು ವೈದ್ಯಕೀಯ ಸಾಹಸದ ಬಳಿಕ ಪ್ರೊ. ಜೋಸೆಫ್‌ ಅವರ ಕತ್ತರಿಸಿದ ಮಣಿಕಟ್ಟು ಅನ್ನು ಮರು ಜೋಡಣೆ ಮಾಡಲಾಗಿತ್ತು. ಈ ಘಟನೆಯಿಂದ ಅವರು ಆನಂತರ ಚೇತರಿಸಿಕೊಂಡಿದ್ದರು. ಮೊದಲಿಗೆ ಕೇರಳ ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದು, ಆನಂತರ ಅದನ್ನು ಎನ್‌ಐಎ ಮುಂದುವರಿಸಿತ್ತು.